ರೆಡ್ಡಿ ಸಂಪತ್ತು ಕಾಯಲು ಶಾಂತಾಗೆ ಅಧಿಕಾರ ಬೇಕು: ಎಸ್.ಎಸ್.ಪ್ರಕಾಶಂ ಟೀಕೆ

Update: 2018-10-28 16:32 GMT

ಹೊಸಪೇಟೆ, ಅ. 28: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಸಂಪತ್ತು ಕಾಯುವ ಏಕೈಕ ಉದ್ದೇಶಕ್ಕಾಗಿ ಶಾಸಕ ಶ್ರೀರಾಮುಲು ಹಾಗೂ ಅವರ ಸಹೋದರಿ ಜೆ. ಶಾಂತಾ ಅವರಿಗೆ ಅಧಿಕಾರ ಬೇಕಾಗಿದೆ ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ಎಸ್.ಎಸ್.ಪ್ರಕಾಶಂ ಟೀಕಿಸಿದ್ದಾರೆ.

ರವಿವಾರ ಪಟ್ಟಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಶ್ರೀರಾಮುಲು ಸಂಸದರಾಗಿ ಜಿಲ್ಲೆಗೆ ಕೊಟ್ಟಿದ್ದೇನು? ಎಷ್ಟು ಕೈಗಾರಿಕೆಗಳನ್ನು ಜಿಲ್ಲೆಗೆ ತಂದಿದ್ದಾರೆ. ಕೇಂದ್ರದಲ್ಲಿ ಅವರದ್ದೇ ಸರಕಾರವಿದ್ದರೂ ಜನರಿಗೆ ಉದ್ಯೋಗ ಕೊಡಿಸಲು ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಳ್ಳಾರಿ ಜಿಲ್ಲೆಗೆ ಹೊಸ ಕೈಗಾರಿಕೆಗಳನ್ನು ತರುವುದು ದೂರದ ಮಾತು. ಇರುವ ಕೈಗಾರಿಕೆಗಳನ್ನು ಉಳಿಸಿಕೊಳ್ಳಲು ಇವರಿಗೆ ಸಾಧ್ಯವಾಗಿಲ್ಲ. ಇವರು ಸಂಸದರಾಗಿದ್ದ ಅವಧಿಯಲ್ಲೆ ತುಂಗಭದ್ರಾ ಸ್ಟೀಲ್ಸ್ ಪ್ರಾಡೆಕ್ಟ್ಸ್ ಬಹುರಾಷ್ಟ್ರೀಯ ಕಂಪೆನಿಗೆ ಬಿಕರಿ ಮಾಡಿದರೂ ಇವರು ಚಕಾರ ಎತ್ತಲಿಲ್ಲ ಎಂದು ಪ್ರಕಾಶಂ ದೂರಿದರು.

ಜಿಲ್ಲೆಯಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ಅಸಂಘಟಿತ ಕಾರ್ಮಿಕರು ಬೀದಿಗೆ ಬಿದ್ದಿದ್ದು, ಅನೇಕ ವರ್ಷಗಳಿಂದ ನಗರದಲ್ಲಿ ನೆಲೆಸಿರುವ ತಮಿಳರನ್ನು ಒಕ್ಕಲೆಬ್ಬಿಸಲು ನೋಡುತ್ತಿದ್ದಾರೆ. ಆದರೆ, ಅದಕ್ಕೆ ಕಾಂಗ್ರೆಸ್ ಪಕ್ಷ ಆಸ್ಪದ ನೀಡುವುದಿಲ್ಲ ಎಂದು ಪ್ರಕಾಶಂ ಹೇಳಿದರು.

ಕೆಪಿಸಿಸಿ ಕಾರ್ಮಿಕ ವಿಭಾಗದ ಜಿಲ್ಲಾ ಅಧ್ಯಕ್ಷ ಗಾದಿಲಿಂಗಪ್ಪಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದ ಸಂದರ್ಭದಲ್ಲಿ ತುಂಗಭದ್ರಾ ಹೂಳಿನ ವಿಷಯ, ರೈತರ ಸಮಸ್ಯೆಗಳನ್ನು ಈಡೇರಿಸುವ ಸಂಬಂಧ ಶ್ರೀರಾಮುಲು ಅವರು ಏನೂ ಮಾಡಲಿಲ್ಲ. ಇದೀಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News