ಸರ್ಕಾರ- ಆರ್‌ಬಿಐ ನಡುವಿನ ಸಂಘರ್ಷ ತಾರಕಕ್ಕೆ

Update: 2018-10-29 03:48 GMT

ಹೊಸದಿಲ್ಲಿ, ಅ.29: ದೇಶದ ರಾಜಕೀಯ ಶಕ್ತಿ ಕೇಂದ್ರ ದೆಹಲಿ ಮತ್ತು ವಾಣಿಜ್ಯ ಶಕ್ತಿಕೇಂದ್ರ ಮುಂಬೈ ನಡುವಿನ ಮುಸುಕಿನ ಗುದ್ದಾಟ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನಡುವೆ ಸಂವಹನ ಬಹುತೇಕ ನಿಂತುಹೋಗುವ ಹಂತಕ್ಕೆ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.

ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಈ ವರ್ಷದ ಆರಂಭದಿಂದಲೇ ಕೇಂದ್ರದ ಕೆಂಗಣ್ಣಿಗೆ ಗುರಿಯಾಗಿದ್ದರು. ಪ್ರಮುಖ ವಿಷಯಗಳಲ್ಲಿ ಕೂಡಾ ಕೇಂದ್ರ ಹಾಗೂ ಆರ್‌ಬಿಐ ನಡುವೆ ಸಂವಹನ ನಿಂತುಹೋಗಿದೆ. ಊರ್ಜಿತ್ ಪಟೇಲ್ ಆರ್‌ಬಿಐಗೆ ನೇಮಕ ಮಾಡಿಕೊಂಡಿರುವ ಉಪ ಗವರ್ನರ್ ವಿರಾಲ್ ಆಚಾರ್ಯ ಇದೀಗ ಸರ್ಕಾರದ ಹಸ್ತಕ್ಷೇಪದ ಬಗ್ಗೆ ಸುಳಿವು ನೀಡಿದ್ದು, ಸಂಪೂರ್ಣ ಸ್ವಾಯತ್ತತೆಗೆ ಆಗ್ರಹಿಸಿದ್ದಾರೆ.

ಇದು ಪಟೇಲ್ ಈ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆಯ ಬಗ್ಗೆಯೂ ಪ್ರಶ್ನಾರ್ಥಕ ಚಿಹ್ನೆ ಹುಟ್ಟುಹಾಕಿದೆ. ಮುಂದಿನ ಸೆಪ್ಟೆಂಬರ್‌ನಲ್ಲಿ ಅವರ ಮೂರು ವರ್ಷದ ಅಧಿಕಾರಾವಧಿ ಮುಗಿಯಲಿದ್ದು, ಅದು ವಿಸ್ತರಣೆಯಾಗುವ ಸಾಧ್ಯತೆಯೇ ಇಲ್ಲ; ಜತೆಗೆ ಮೂರು ವರ್ಷಗಳವರೆಗೂ ಅವರನ್ನು ಮುಂದುವರಿಸುವ ಸಾಧ್ಯತೆ ಇಲ್ಲ ಎಂಬ ವದಂತಿಗಳು ಕೇಳಿಬರುತ್ತಿವೆ. ಆದರೆ ಪಟೇಲ್ ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿಲ್ಲ.

"ಪಟೇಲ್ ಅವರಿಗಿಂತ ರಘುರಾಮ್ ರಾಜನ್ ಅವರ ಅವಧಿಯೇ ಉತ್ತಮವಾಗಿತ್ತು" ಎಂದು ಸರ್ಕಾರದಲ್ಲಿ ಕೆಲವರು ಹೇಳುತ್ತಿದ್ದಾರೆ. 2018ರಲ್ಲೇ ಹಲವು ವಿಷಯಗಳ ಬಗ್ಗೆ ಸರ್ಕಾರ ಹಾಗೂ ಆರ್‌ಬಿಐ ಭಿನ್ನ ನಿಲುವು ತೆಗೆದುಕೊಂಡಿವೆ. ಬಡ್ಡಿದರ ಕಡಿತಗೊಳಿಸುವ ಸರ್ಕಾರದ ಪ್ರಸ್ತಾವಕ್ಕೆ ಆರ್‌ಬಿಐ ಮಣೆ ಹಾಕದಿರುವ ಬಗ್ಗೆ ಸರ್ಕಾರಕ್ಕೆ ಅಸಮಾಧಾನವಿದೆ. ಜತೆಗೆ ಸರ್ಕಾರದ ನಿರ್ಧಾರಕ್ಕೆ ವಿರುದ್ಧವಾಗಿ ಆರ್‌ಬಿಐ ಬಡ್ಡಿದರ ಏರಿಸಿದೆ. ಅದು ತನ್ನ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂಬ ಸ್ಪಷ್ಟ ಅಭಿಪ್ರಾಯ ಆರ್‌ಬಿಐನದ್ದು.

ಅನುತ್ಪಾದಕ ಆಸ್ತಿಯ ವರ್ಗೀಕರಣ ಮತ್ತು ಸಾಲ ಮರು ಹೊಂದಾಣಿಕೆಯ ನಿಯಮಾವಳಿಗಳನ್ನು ಆರ್‌ಬಿಐ ಫೆಬ್ರವರಿ 12ರಂದು ಪ್ರಕಟಿಸಿದ್ದು, ಇದು ವೈಮನಸ್ಸಿಗೆ ಇನ್ನೊಂದು ಕಾರಣ. ಸರ್ಕಾರ ಇದನ್ನು ತೀರಾ ಕಠಿಣ ಎಂದು ಅಭಿಪ್ರಾಯಪಟ್ಟಿದ್ದು, ಇದು ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್‌ಗಳು ಅಪಾಯದ ಅಂಚಿಗೆ ತಲುಪಲು ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.

ಇದೇ ಸಮಯಕ್ಕೆ ನೀರವ್ ಮೋದಿ ವಂಚನೆ ಪ್ರಕರಣ ಬಹಿರಂಗವಾಗಿದ್ದು, ಆರ್‌ಬಿಐ ಮೇಲ್ವಿಚಾರಣಾ ಕ್ರಮವನ್ನು ಸರ್ಕಾರ ಟೀಕಿಸಿತ್ತು. ಇದಕ್ಕೆ ತಿರುಗೇಟು ನೀಡಿದ ಪಟೆಲ್, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಮೇಲ್ವಿಚಾರಣೆಗೆ ಹೆಚ್ಚಿನ ಅಧಿಕಾರ ನೀಡುವಂತೆ ಕೇಂದ್ರವನ್ನು ಆಗ್ರಹಿಸಿತ್ತು. ನಷ್ಟದಲ್ಲಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸಂಕಷ್ಟದಿಂದ ಹೊರಬರಲು ನೆರವಾಗುವಂತೆ ಸರ್ಕಾರ ಮಾಡಿಕೊಂಡ ಮನವಿಯನ್ನೂ ಆರ್‌ಬಿಐ ತಿರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News