ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರಕಾರ ತಿರಸ್ಕರಿಸಿದೆ: ಶಾಸಕ ರಾಜೇಗೌಡ

Update: 2018-10-29 12:28 GMT

ಚಿಕ್ಕಮಗಳೂರು, ಅ.29: ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆಗಳ ಅಯೋಜನೆಯಿಂದ ಗ್ರಾಮೀಣ ಭಾಗದ ಜನರು ತಾವು ಇದ್ದಲ್ಲಿಯೇ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹೆಚ್ಚು ಅನುಕೂಲವಾಗಿದೆ ಎಂದು ಶಾಸಕ ಟಿ.ಡಿ ರಾಜೇಗೌಡ ತಿಳಿಸಿದರು.

ಸೋಮವಾರ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಡಳಿತದ ವತಿಯಿಂದ ಶೃಂಗೇರಿ ವಿಧಾಸನಭಾ ಕ್ಷೇತ್ರ ವ್ಯಾಪ್ತಿಯ ಖಾಂಡ್ಯ ಹೋಬಳಿಯ ಸಂಗಮೇಶ್ವರಪೇಟೆಯ ಸಮುದಾಯ ಭವನದಲ್ಲಿ ನಡೆದ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಹೋಬಳಿ ಮಟ್ಟದಲ್ಲಿ ಗ್ರಾಮೀಣ ಭಾಗದ ಜನರ ಕುಂದು ಕೊರತೆಗಳನ್ನು ಹಾಗೂ ಅಹವಾಲುಗಳನ್ನು ಸ್ವೀಕರಿಸಿ ನಿಗದಿತ ಕಾಲ ಮಿತಿಯೊಳಗೆ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಜನಸಂಪರ್ಕ ಸಭೆಯನ್ನು ಗ್ರಾಮೀಣ ಭಾಗದಲ್ಲಿ ಅಯೋಜಿಸುತ್ತಿದೆ. ಹಳ್ಳಿಯ ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಗರ ಪ್ರದೇಶದ ಕಚೇರಿಗಳಿಗೆ ಅಲೆಯಬೇಕಿತ್ತು. ಜನಸಂಪರ್ಕ ಸಭೆಯಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅನುಷ್ಠಾನ ಅಧಿಕಾರಿಗಳು ಹಾಗೂ ಉನ್ನತ ಅಧಿಕಾರಿಗಳು ಭಾಗವಹಿಸುವುದರಿಂದ ಶೀಘ್ರದಲ್ಲಿಯೇ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.

ಕಳೇದ 25-30 ವರ್ಷಗಳಿಂದ ಜಮೀನನ್ನು ಸಾಗುವಳಿ ಮಾಡಿಕೊಂಡು ಬಂದು ನಮೂನೆ 50-55ರಲ್ಲಿ ಅರ್ಜಿಯನ್ನು ನೀಡದೆ ಇರುವ ರೈತರು ಜಮೀನು ಮಂಜೂರಿಗಾಗಿ ಅರ್ಜಿ ಸಲ್ಲಿಸಲು ಹಿಂದಿನ ಸರಕಾರ ಅವಕಾಶ ಮಾಡಿಕೊಟ್ಟಿದ್ದು, ಇದನ್ನು ರೈತರು ಸದುಪಯೋಗಪಡಿಕೊಳ್ಳಬೇಕು ಎಂದ ಅವರು, ರಾಜ್ಯ ಸರಕಾರ ಕಸ್ತೂರಿ ರಂಗನ್ ವರದಿ ಜಾರಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ ಎಂದರು.

ಜಿ.ಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಮಾತನಾಡಿ, ಜನಪ್ರತಿನಿಧಿಗಳು ಸಾಮಾನ್ಯವಾಗಿ ಚುನಾವಣಾ ಸಂದರ್ಭದಲ್ಲಿ ಮಾತ್ರ ಜನ ಸಾಮಾನ್ಯರ ಬಳಿಗೆ ಹೋಗುತ್ತಾರೆ. ಆದರೆ ನಾವು ಜನಸಂಪರ್ಕ ಸಭೆಯನ್ನು ಅಯೋಜಿಸುವುದರೊಂದಿಗೆ ಜನರ ಬಳಿಗೆ ಹೋಗುತ್ತಿದ್ದೇವೆ. ಅಲ್ಲದೆ ಗ್ರಾಮೀಣ ಜನರ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲು ಪ್ರಯತ್ನಿಸಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ ಮೂರು ಹೋಬಳಿಯಲ್ಲಿ ಜನಸಂಪರ್ಕ ಸಭೆಗಳನ್ನು ಆಯೋಜಿಸಿದ್ದು, ಈ ಸಭೆಗಳು ಯಶಸ್ವಿ ಕಂಡಿವೆ ಎಂದರು.

ಜಿ.ಪಂ ಉಪಾಧ್ಯಕ್ಷ ಆನಂದಪ್ಪ ಮಾತನಾಡಿ, ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಜನರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಜನಸಂಪರ್ಕ ಸಭೆಯಲ್ಲಿ ಇಬ್ಬರು ಒಟ್ಟಾಗಿ ಭಾಗವಹಿಸುವುದರಿಂದ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತಿದೆ ಎಂದರು.

ಜಿ.ಪಂ ಸದಸ್ಯೆ ಕವಿತಾ ಲಿಂಗರಾಜ್ ಮಾತನಾಡಿ, ಜನರ ಸೇವೆಯೇ ಜನಾರ್ಧನ ಸೇವೆ ಎಂಬಂತೆ ಜನರ ಸಮಸ್ಯೆಗಳನ್ನು ಗ್ರಾಮೀಣ ಮಟ್ಟದಲ್ಲಿ ಬಗೆಹರಿಸಲು ಹೋಬಳಿ ಮಟ್ಟದ ಜನಸಂಪರ್ಕ ಸಭೆಯನ್ನು ಅಯೋಜಿಸುವುದು ಒಂದು ಉತ್ತಮ ಕಾರ್ಯ ಎಂದರು.

ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿ, ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸಿ ಅವುಗಳನ್ನು ಅವರಿಗೆ ತಲುಪಿಸುವುದು ಸರ್ಕಾರದ ಆಶಯವಾಗಿದೆ, ಜನರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಜನಸಂಪರ್ಕ ಸಭೆ ಉತ್ತಮ ಕಾರ್ಯಕ್ರಮವಾಗಿದೆ  ಎಂದರು.

ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ಜನಸಂಪರ್ಕ ಸಭೆಯಲ್ಲಿ ಬಂದ ಮನವಿಗಳನ್ನು ಕಾನೂನು  ಚೌಕಟ್ಟಿನ ಅಡಿಯಲ್ಲಿ ನಿಗಧಿತ ಕಾಲಮಿತಿಯೊಳಗೆ ಬಗೆಹರಿಸಲಾಗುತ್ತದೆ ಎಂದ ಅವರು ಗ್ರಾಮೀಣ ಭಾಗದ ಜನರು ಇಂತಹ ಅವಕಾಶಗಳನ್ನು ಸದುಪಯೋಗಪಡಿಕೊಳ್ಳಬೇಕೆಂದರು.

ಜನ ಸಂಪರ್ಕ ಸಭೆಯಲ್ಲಿ ಸಾಮಾನ್ಯವಾಗಿ ಅರ್ಜಿದಾರರು ಸಾಗುವಳಿ ಚೀಟಿ ನೀಡುವ ಬಗ್ಗೆ ಮೆಸ್ಕಾಂ ಇಲಾಖೆಗೆ ಸಂಬಂಧಪಟ್ಟಂತೆ ರಸ್ತೆ ಕಾಮಗಾರಿಯ ಬಗ್ಗೆ, ನಿವೇಶನ ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗೆ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕಡವಂತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 27, ದೇವದಾನ ಗ್ರಾಮ ಪಂ. ವ್ಯಾಪ್ತಿಯಲ್ಲಿ 141, ಬಿದರೆ ಗ್ರಾಮ ಪಂ. 43, ಹುಲಿಗೆರೆ ಗ್ರಾ.ಪಂ ವ್ಯಾಪ್ತಿಯಲ್ಲಿ 68 ಸೇರಿದಂತೆ 175 ಕ್ಕೂ ಹೆಚ್ಚು ಮನವಿಗಳನ್ನು ನೀಡಿದ್ದರು. ಅನೇಕ ಅರ್ಜಿಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಯಿತು.

ಸಭೆಯಲ್ಲಿ ತಾಲೂಕು ಪಂ.ಅಧ್ಯಕ್ಷ ಜಯಣ್ಣ, ಉಪಾಧ್ಯಕ್ಷ ರಮೇಶ್, ಹುಲಿಕೆರೆ ಗ್ರಾ. ಪಂ.ಅಧ್ಯಕ್ಷೆ ಭಾರತಿ ಜಗದೀಶ್, ಬಿದರೆ ಗ್ರಾ. ಪಂ ಅಧ್ಯಕ್ಷೆ ಅಶೋಕ್‍ಕುಮಾರ್ ಪಿ.ಆರ್, ದೇವದಾನ ಗ್ರಾ.ಪಂ ಅಧ್ಯಕ್ಷ ಚಂದ್ರು, ಸ್ಥಳೀಯ ಜನಪ್ರತಿನಿಧಿಗಳಾದ ಸಾವಿತ್ರಿ ರಾಜ್ ಕುಮಾರ್, ರಮೇಶ್ ಸಿದ್ದಾಪುರ, ದೀಪಾ ನಾಗೇಶ್, ರಮೇಶ್ ತಹಸೀಲ್ದಾರ್ ನಂದಕುಮಾರ್ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರೇವಣ್ಣ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News