ಹೊಸ ಬದಲಾವಣೆಗಾಗಿ ಮೈತ್ರಿ: ಸಿಎಂ ಕುಮಾರಸ್ವಾಮಿ

Update: 2018-10-29 13:52 GMT

ಶಿವಮೊಗ್ಗ, ಅ. 29: ಉಪ ಚುನಾವಣೆ ಮೈತ್ರಿಯ ಹಿಂದೆ ವೈಯಕ್ತಿಕ ಕಾರಣವಿಲ್ಲ. ದೇಶ ಮತ್ತು ರಾಜ್ಯದ ಅಭಿವೃದ್ಧಿ ಉದ್ದೇಶ ಹಾಗೂ ಹೊಸ ಬದಲಾವಣೆಗಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿವೆ. ಆ ಕಾರಣಕ್ಕಾಗಿಯೇ ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಸೋಮವಾರ ನಗರದ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೇವಲ ಶಿವಮೊಗ್ಗ ಕ್ಷೇತ್ರಕ್ಕೆ ಮಾತ್ರ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ. ಉಪ ಚುನಾವಣೆ ನಡೆಯುತ್ತಿರುವ ಇತರೆ ಕ್ಷೇತ್ರಗಳತ್ತಲೂ ಗಮನಹರಿಸಲಾಗಿದೆ. ತಾನು ಎಲ್ಲೆಡೆಯೂ ಮೈತ್ರಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದೇನೆ ಎಂದರು.

ಬಿಜೆಪಿ ಚುನಾವಣಾ ತಂತ್ರಗಾರಿಕೆಯೇ ಬೇರೆ. ಕಾಂಗ್ರೆಸ್- ಜೆಡಿಎಸ್ ತಂತ್ರಗಾರಿಕೆಯೇ ಬೇರೆಯಾಗಿದೆ. ನಾವು ನಮ್ಮದೇ ಆದ ಚುನಾವಣಾ ಉದ್ದೇಶಗಳನ್ನಿಟ್ಟುಕೊಂಡು ಜನರನ್ನು ತಲುಪಿ ಚುನಾವಣೆ ನಡೆಸುತ್ತೇವೆ. ಮೈತ್ರಿ ಸರ್ಕಾರದ ಉದ್ದೇಶ ಹಾಗೂ ಚುನಾವಣೆಯಲ್ಲಿ ಒಡಂಬಡಿಕೆ ಮಾಡಿಕೊಂಡಿರುವುದನ್ನು ಜನರಿಗೆ ತಿಳಿಸಲಿದ್ದೇವೆ ಎಂದು ತಿಳಿಸಿದರು.

ಮಂಗಳವಾರ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್- ಜೆಡಿಎಸ್ ಎರಡೂ ಪಕ್ಷಗಳ ಮುಖಂಡರು ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News