ರಾಜ ವ್ಯಾಪಾರಿಯಾದಾಗ, ಪ್ರಜೆ ಬಿಕಾರಿಯಾಗುತ್ತಾನೆ: ಮೋದಿ ವಿರುದ್ಧ ಬಿ.ಕೆ ಹರಿಪ್ರಸಾದ್ ವಾಗ್ದಾಳಿ

Update: 2018-10-29 13:57 GMT

ಶಿವಮೊಗ್ಗ, ಅ. 29: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ‘ರಾಜ ವ್ಯಾಪಾರಿಯಾದಾಗ, ಪ್ರಜೆಗಳು ಬಿಕಾರಿಯಾಗುತ್ತಾರೆ’ ಎಂದು ಕುಟುಕಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಜಪಾನ್ ದೇಶಕ್ಕೆ ಈ ಹಿಂದೆ ನರೇಂದ್ರ ಮೋದಿ ಭೇಟಿ ನೀಡಿದ್ದ ವೇಳೆ ತನ್ನ ರಕ್ತದ ಕಣ ಕಣದಲ್ಲಿ ವ್ಯಾಪಾರಿ ಇರುವುದಾಗಿ ಹೇಳಿದ್ದರು. ಚಾಣಕ್ಯ ನೀತಿಯಂತೆ ರಾಜ ವ್ಯಾಪಾರಿಯಾದಾಗ ಪ್ರಜೆಗಳು ಬಿಕಾರಿಗಳಾಗುತ್ತಾರೆ. ಪ್ರಸ್ತುತ ಸ್ಥಿತಿ ಗಮನಿಸಿದರೆ ಇದು ನಿಜವೆನಿಸುತ್ತದೆ ಎಂದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ರಂಗಗಳಲ್ಲಿಯೂ ವಿಫಲವಾಗಿದೆ. ಜನಸಾಮಾನ್ಯರು ಜೀವನ ನಡೆಸುವುದೇ ದುಸ್ತರವಾಗಿ ಪರಿಣಮಿಸಿದೆ. ಕಳೆದ ನಾಲ್ಕೂವರೆ ವರ್ಷದಲ್ಲಿ ಎಷ್ಟು ಬಾರಿ ರೈತರು ಮತ್ತು ಕಾರ್ಮಿಕರ ಬಗ್ಗೆ ಅವರು ಮಾತನಾಡಿದ್ದಾರೆ ಎಂಬುದನ್ನು ದುರ್ಬಿನ್ ಹಾಕಿಕೊಂಡು ಹುಡುಕಬೇಕಾದ ಸ್ಥಿತಿಯಿದೆ ಎಂದು ಟೀಕಿಸಿದ್ದಾರೆ.

ಗುಜರಾತ್ ಮಾಡೆಲ್ ಅಭಿವೃದ್ದಿಯನ್ನು ದೇಶದ ಇತರೆಡೆಯೂ ಅನುಷ್ಠಾನಗೊಳಿಸಲಾಗುವುದು ಎಂದು ಮೋದಿ ಹೇಳುತ್ತಾರೆ. ಪ್ರತಿನಿತ್ಯ ಬೆಂಗಳೂರಿನಿಂದ ದಿಲ್ಲಿಗೆ ದಿನಕ್ಕೆ 70 ವಿಮಾನ ಓಡಾಡುತ್ತವೆ. ಆದರೆ ಗುಜರಾತ್‍ನ ಅಹಮದಾಬಾದ್‍ನಿಂದ ದೆಹಲಿಗೆ ಇಂದಿಗೂ ಕೇವಲ ಐದಾರು ವಿಮಾನಗಳು ಮಾತ್ರ ಸಂಚರಿಸುತ್ತಿವೆ. ಗುಜರಾತ್ ಮಾಡೆಲ್ ಅಭಿವೃದ್ದಿ ಎಂದರೇ ಇದೇನಾ? ಎಂದು ತರಾಟೆಗೆ ತೆಗೆದುಕೊಂಡರು.

ಆರೆಸ್ಸೆಸ್ ನಿಂದ ಕಲಿಯುವುದು ಏನೂ ಇಲ್ಲ. ಸುಳ್ಳನ್ನೇ ಪದೇ ಪದೇ ಹೇಳಿ ನಿಜವಾಗಿಸುತ್ತಾರೆ. ಹಸಿರು ಟವಲ್ ಹಾಕಿಕೊಂಡು ರೈತರ ಬಜೆಟ್ ಮಂಡಿಸಿದ ಮಾಜಿ ಸಿಎಂ ಯಡಿಯೂರಪ್ಪ ರೈತರ ಮೇಲೆ ಗೋಲಿಬಾರ್ ಮಾಡಿದ್ದರು. ಪ್ರಸ್ತುತ ಉಪ ಚುನಾವಣೆ ನಡೆಯುತ್ತಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ಸೇರಿದಂತೆ ಎಲ್ಲೆಡೆಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News