ದೇಶದ ಈ ನಗರದಲ್ಲಿ ಹಳೆ ವಾಹನ ಸಂಚರಿಸುವುದನ್ನು ನಿಷೇಧಿಸಿದ ಸುಪ್ರೀಂಕೋರ್ಟ್

Update: 2018-10-29 14:12 GMT

ಹೊಸದಿಲ್ಲಿ,ಅ.29: ದಿಲ್ಲಿಯ ವಾಯುಗುಣಮಟ್ಟವನ್ನು ಅತ್ಯಂತ ಗಂಭೀರ, ಶೋಚನೀಯ ಮತ್ತು ಭಯಾನಕ ಎಂದು ವ್ಯಾಖ್ಯಾನಿಸಿರುವ ಸರ್ವೋಚ್ಚ ನ್ಯಾಯಾಲಯ, ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್)ದಲ್ಲಿ 15 ವರ್ಷ ಹಳೆಯ ಪೆಟ್ರೋಲ್ ವಾಹನ ಮತ್ತು ಹತ್ತು ವರ್ಷ ಹಳೆಯ ಡೀಸೆಲ್ ವಾಹನಗಳ ಮೇಲೆ ಸೋಮವಾರ ನಿಷೇಧ ಹೇರಿದೆ.

ಇಂಥ ವಾಹನಗಳು ಒಡಾಡುವುದು ಕಂಡು ಬಂದರೆ ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಘೋಷಣೆ ಮಾಡುವಂತೆ ಸಾರಿಗೆ ಇಲಾಖೆಗೆ ನ್ಯಾಯಾಲಯ ಸೂಚಿಸಿದೆ. ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ ಮಾಡಲು ಹೊರಗೆ ಹೋಗಬೇಡಿ ಎಂದು ಪತ್ರಿಕೆಗಳು ಎಚ್ಚರಿಸುತ್ತವೆ. ಆದರೆ ನೀವು ಸಂಜೆ ಹಳೆ ದಿಲ್ಲಿ ರೈಲು ನಿಲ್ದಾಣದತ್ತ ನಡೆದುಕೊಂಡು ಹೋದರೆ ಬಹಳಷ್ಟು ಬಡಜನರು ಸೈಕಲ್ ರಿಕ್ಷಾಗಳಲ್ಲಿ ಸಾಗುತ್ತಿರುತ್ತಾರೆ. ಅವರಿಗೆ ಬೇರೆ ದಾರಿಯಿಲ್ಲ. ಜೀವನ ನಿರ್ವಹಣೆಗೆ ಅವರು ಹೊರಗಡೆ ಕೆಲಸ ಮಾಡಲೇಬೇಕಿದೆ. ಲಕ್ಷಾಂತರ ಜನರು ಹೊರಗಡೆ ದುಡಿದು ತಮ್ಮ ಜೀವನ ನಡೆಸುತ್ತಿದ್ದಾರೆ. ಅವರಿಗೆ ನೀವು ಹೇಗೆ ಹೇಳುತ್ತಿರಿ?,ಇಂಥ ಮಾಲಿನ್ಯದಲ್ಲಿ ದುಡಿಯುವ ಮೂಲಕ ತಮ್ಮನ್ನೇ ಸಾಯಿಸಿ ಎಂದು ನೀವು ಅವರಿಗೆ ಹೇಳುತ್ತೀರಾ? ಎಂದು ನ್ಯಾಯಾಧೀಶ ಮದನ್ ಬಿ.ಲೊಕುರ್ ನೇತೃತ್ವದ ತ್ರಿಸದಸ್ಯ ಪೀಠ ಸರಕಾರಿ ಅಭಿಯೋಜಕರನ್ನು ಪ್ರಶ್ನಿಸಿದೆ.

ಹದಿನೈದು ವರ್ಷ ಹಳೆಯ ಪೆಟ್ರೋಲ್ ವಾಹನ ಮತ್ತು ಹತ್ತು ವರ್ಷ ಹಳೆಯ ಡೀಸೆಲ್ ವಾಹನಗಳ ಪಟ್ಟಿಯನ್ನು ಎನ್‌ಸಿಆರ್‌ನ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮತ್ತು ಸಾರಿಗೆ ಇಲಾಖೆಯ ಜಾಲತಾಣದಲ್ಲಿ ಹಾಕಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ. ಮಾಲಿನ್ಯದ ಬಗ್ಗೆ ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ದೂರುಗಳನ್ನು ಸಿಪಿಸಿಬಿ ಗಮನಿಸುವುದು ಎಂದು ನ್ಯಾಯಾಲಯ ತಿಳಿಸಿದೆ. ಇದಕ್ಕೂ ಮುನ್ನ, ರಾಷ್ಟ್ರೀಯ ಹಸಿರು ಪೀಠ ಕೂಡಾ ದಿಲ್ಲಿ-ಎನ್‌ಸಿಆರ್‌ನಲ್ಲಿ ಹದಿನೈದು ವರ್ಷ ಹಳೆಯ ಪೆಟ್ರೋಲ್ ಮತ್ತು ಹತ್ತು ವರ್ಷ ಹಳೆಯ ಡೀಸೆಲ್ ವಾಹನಗಳ ಓಡಾಟದ ಮೇಲೆ ನಿಷೇಧ ಹೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News