ಕೋಮು ಭಾವನೆ ಮೂಡಿಸುವ ಹೇಳಿಕೆ ಪ್ರಕರಣ: ಎಚ್.ವಿಶ್ವನಾಥ್ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

Update: 2018-10-29 14:54 GMT

ಬೆಂಗಳೂರು, ಅ.29: ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ಕೋಮು ಭಾವನೆ ಮೂಡಿಸುವಂತಹ ಹೇಳಿಕೆ ನೀಡಿದ ಪ್ರಕರಣದ ಸಂಬಂಧ ಮಾಜಿ ಸಚಿವ ಎಚ್. ವಿಶ್ವನಾಥ್ ಸೇರಿ ಮೂವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ಎಚ್. ವಿಶ್ವನಾಥ್, ಮೈಸೂರಿನ ಮಾಜಿ ಮೇಯರ್ ಆಯ್ಯುಬ್ ಖಾನ್ ಹಾಗೂ ಜಾರ್ ಶೇಟ್ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ಮಾನ್ಯ ಮಾಡಿರುವ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯತ್ವದ ನ್ಯಾಯಪೀಠ, ಮೂವರ ವಿರುದ್ಧದ ಪ್ರಕರಣ ಮತ್ತದರ ಸಂಬಂಧ ಬೆಂಗಳೂರಿನ ಚುನಾಯಿತ ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ರದ್ದುಪಡಿಸಿದೆ.

ನಿಯಮಗಳ ಪ್ರಕಾರ ಎಫ್ಐಆರ್ ದಾಖಲಿಸುವ ಮೊದಲು ಮ್ಯಾಜಿಸ್ಟ್ರೇಟ್ ಅನುಮತಿ ಪಡೆಯಬೇಕು. ಆದರೆ, ಈ ಪ್ರಕರಣದಲ್ಲಿ ಯಾವುದೆ ಅನುಮತಿಯನ್ನು ಪಡೆಯದೇ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಕಾನೂನು ಪಾಲಿಸಲಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಪೀಠ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿದೆ.

ಪ್ರಕರಣವೇನು: 2014ರ ಎ.11ರಂದು ಮೈಸೂರಿನ ಜಾರ್ ಶೇಟ್ ಎಂಬುವರ ಮನೆಯಲ್ಲಿ ಸೇರಿದ್ದ ವಿಶ್ವನಾಥ್ ಹಾಗೂ ಆಯ್ಯುಬ್ ಖಾನ್, ಮುಸ್ಲಿಮರಿಗೆ ಪ್ರತ್ಯೇಕ ಕಾನೂನು ರಚಿಸುವ ಭರವಸೆ ನೀಡಿದ್ದರು. ಈ ಹೇಳಿಕೆಯು ಮೈಸೂರು ಭಾಗದ ಪತ್ರಿಕೆಗಳಲ್ಲಿ ಸುದ್ದಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಎಲ್.ಜಿ. ಕರಿಬಸವಯ್ಯ ಎಂಬುವರು ಎ.16ರಂದು ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ವಿಶ್ವನಾಥ್ ಹಾಗೂ ಇತರರ ವಿರುದ್ಧ ದೂರು ನೀಡಿದ್ದರು.

ದೂರನ್ನಾಧರಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದ ಠಾಣಾ ಪೊಲೀಸರು, ಮೈಸೂರಿನ ಜೆಎಂಎಫ್ಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ರದ್ದುಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಮಧ್ಯೆ ಪ್ರಕರಣ ಬೆಂಗಳೂರಿನ ಚುನಾಯಿತ ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News