ಐಪಿಎಸ್ ಪುತ್ರನಿಗೆ ಸೆಲ್ಯೂಟ್ ಮಾಡಲು ಕಾನ್‍ಸ್ಟೇಬಲ್ ತಂದೆಗೆ ಖುಷಿಯೋ ಖುಷಿ

Update: 2018-10-30 07:01 GMT

ಲಕ್ನೋ, ಅ. 30: ಇತ್ತೀಚೆಗೆ ಲಕ್ನೋದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿದ ಐಪಿಎಸ್ ಅಧಿಕಾರಿ ಅನೂಪ್ ಸಿಂಗ್ ಅವರಿಗೆ ಅವರ ತಂದೆ ಜನಾರ್ದನ್ ಸಿಂಗ್ ಅವರೇ ಪ್ರೇರಣೆ. ಅಂದ ಹಾಗೆ ಅವರ ತಂದೆ ಕೂಡ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಜನಾರ್ದನ್ ಅವರು ವಿಭೂತಿ ಖಂಡ್ ಪೊಲೀಸ್ ಠಾಣೆಯಲ್ಲಿ ಕಾನ್‍ಸ್ಟೇಬಲ್ ಆಗಿದ್ದಾರೆ. ಇಲ್ಲಿ ಈ ತಂದೆಗೆ ಅವರ ಮಗನೇ ಬಾಸ್ ಆಗಿದ್ದಾರೆ. ಅವರಿಗಂತೂ ತಮ್ಮ ಮಗ ತಮಗಿಂತಲೂ ಹಿರಿಯ ಅಧಿಕಾರಿಯಾಗಿದ್ದು ಖುಷಿಯೋ ಖುಷಿ. ಪೊಲೀಸ್ ಇಲಾಖೆಯ ಶಿಷ್ಟಾಚಾರದಂತೆ ಅವರೀಗ ತಮ್ಮ ಪುತ್ರ ಕರ್ತವ್ಯದ ವೇಳೆ ಎದುರಾದಾಗಲೆಲ್ಲಾ ಆತನಿಗೆ ಸೆಲ್ಯೂಟ್ ಹೊಡೆಯಬೇಕು. ಆ ಹೆಮ್ಮೆಯ ಅಪ್ಪನಿಗೆ ಸೆಲ್ಯೂಟ್ ಹೊಡೆಯುವುದೂ ಖುಷಿಯಂತೆ. ಆತನ ಅಧೀನದಲ್ಲಿ ಕೆಲಸ ಮಾಡುವುದು ಸಂತೋಷ ನೀಡುತ್ತದೆ ಎಂದು ಜನಾರ್ದನ್ ತಮ್ಮ ಏಕೈಕ ಪುತ್ರನ ಬಗ್ಗೆ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ.

''ಮಗ ನನಗೆ ಹಿರಿಯ ಅಧಿಕಾರಿಯಾಗಿರುವುದು ನನಗೆ ದಕ್ಕಿದ ಗೌರವ. ಬೇರೆ ಯಾವುದೇ ಅಧಿಕಾರಿ ಎದುರಾದಾಗ ಸೆಲ್ಯೂಟ್ ಮಾಡುವಂತೆ ಆತನಿಗೂ ಸೆಲ್ಯೂಟ್ ಮಾಡುತ್ತೇನೆ'' ಎಂದು ಅವರು ಹೇಳುತ್ತಾರೆ.

ತನ್ನನ್ನೊಬ್ಬ ಪೊಲೀಸ್ ಅಧಿಕಾರಿಯನ್ನಾಗಿಸಲು ಬಡತನದ ನಡುವೆಯೂ ಬಹಳಷ್ಟು ಶ್ರಮಿಸಿದ ಅಪ್ಪನೆದುರು ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವುದು ಅನೂಪ್‍ಗೆ ಕಷ್ಟಕರವಾದರೂ ತಮ್ಮ ವೃತ್ತಿಗೆ ಅಪ್ಪ-ಮಗನ ಸಂಬಂಧ ಯಾವುದೇ ರೀತಿಯಲ್ಲಿ ತೊಡಕಾಗದು ಎಂದು ಹೇಳುತ್ತಾರೆ.

ಮಕ್ಕಳು ಅಪ್ಪನಿಗಿಂತಲೂ ಹಿರಿಯ ಅಧಿಕಾರಿಯಾಗಿರುವ ದೃಷ್ಟಾಂತ ಇದು ಮೊದಲಲ್ಲ. ತೆಲಂಗಾಣದಲ್ಲಿ ಡಿಸಿಪಿ ಎ ಆರ್ ಉಮಾಮಹೇಶ್ವರ ಶರ್ಮ ಅವರ ಪುತ್ರಿ ಸಿಂಧು ಶರ್ಮ ಜಗ್ತಿಯಾಲ್ ಜಿಲ್ಲೆಯ ಎಸ್‍ಪಿಯಾಗಿದ್ದು ಅಪ್ಪ-ಮಗಳು  ಟಿಆರ್ ಎಸ್ ಸಮಾರಂಭವೊಂದರ ಸಂದರ್ಭ ಎದುರು ಬದುರಾದಾಗ ಉಮಾಮಹೇಶ್ವರ ಅವರು ತಮ್ಮ ಪುತ್ರಿಗೆ ಸೆಲ್ಯೂಟ್ ಹೊಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News