ರಂಗಭೂಮಿಯ ‘ಹೊಸದಿಕ್ಕು’

Update: 2018-10-30 18:39 GMT

ಇತ್ತೀಚಿನ ದಿನಗಳಲ್ಲಿ ರಂಗಭೂಮಿಯ ಕುರಿತಂತೆ ಗಂಭೀರವಾಗಿ ಬರೆಯುವ ಬರಹಗಾರರು ಕಡಿಮೆಯಾಗುತ್ತಿದ್ದಾರೆ. ರಂಗಭೂಮಿಯಲ್ಲಿ ಪ್ರಯೋಗಗಳು ನಡೆಯುವುದೇ ಅತ್ಯಲ್ಪ ಎಂದ ಮೇಲೆ, ಈ ಕ್ಷೇತ್ರದ ಬಗ್ಗೆ ಬರೆಯುವವರ ಸಂಖ್ಯೆ ಕಡಿಮೆಯಾಗುವುದು ಸಹಜ. ಸದ್ಯಕ್ಕೆ ಇರುವ ರಂಗಭೂಮಿಯನ್ನು ಉಳಿಸಿಕೊಳ್ಳುವುದೇ ಮುಖ್ಯ ಎನ್ನುವ ನೆಲೆಯಲ್ಲಿ ಗಂಭೀರ ವಿಮರ್ಶೆಗಳು ಕಡಿಮೆಯಾಗುತ್ತಿರಬಹುದು. ಇದೇ ಸಂದರ್ಭದಲ್ಲಿ, ರಂಗಭೂಮಿಯ ಇತಿಹಾಸ ಮತ್ತು ಆಗಿ ಹೋದ ಪ್ರಮುಖರ ಬಗ್ಗೆ ತಿಳಿಸಿಕೊಡುವ ಪ್ರಯತ್ನವೂ ಕಡಿಮೆಯಾಗುತ್ತದೆ. ಹೊಸ ಪ್ರಯೋಗಗಳ ಕೊರತೆಗೆ ಇತಿಹಾಸದ ಕುರಿತ ಮಾಹಿತಿಯ ಕೊರತೆಯೂ ಕಾರಣವಾಗಿರಬಹುದು. ಈ ನಿಟ್ಟಿನಲ್ಲಿ ಎಸ್. ಮಾಲತಿ ಅವರು ಬರೆದಿರುವ ‘ಹೊಸ ದಿಕ್ಕು’ ರಂಗಭೂಮಿಯ ಕುರಿತ ಲೇಖನಗಳು ಒಂದು ಶ್ಲಾಘನೀಯ ಪ್ರಯತ್ನವಾಗಿದೆ. ರಂಗಭೂಮಿಗೆ ಹೊಸದಿಕ್ಕುಗಳನ್ನು ನೀಡಿದ ಚಳವಳಿ, ಪ್ರಯೋಗ, ನಿರ್ದೇಶಕ, ನಟರುಗಳ ಕುರಿತಂತೆ ಮಾಹಿತಿಗಳನ್ನು ಕಲೆಹಾಕಲಾಗಿದೆ.
 ಬೆನ್ನುಡಿ ಹೇಳುವಂತೆ, ರಂಗಭೂಮಿಯ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಉಪಯುಕ್ತವಾಗುವಂತಹ ಯಕ್ಷಗಾನ, ಯೋಗ, ಆಂಗಿಕ-ವಾಚಿಕ, ಬಿ.ವಿ. ಕಾರಂತ, ಹಬೀಬ್ ತನ್ವೀರ್, ಬಾದಲ್ ಸರ್ಕಾರ್, ಇಬ್ರಾಹಿಂ ಅಲ್ಕಾಜಿ, ಪಾಶ್ಚಾತ್ಯ ರಂಗಭೂಮಿಯ ಗ್ರೊಟೋವ್‌ಸ್ಕಿ, ಸ್ಟಾನಿಸ್ಲಾವ್‌ಸ್ಕಿ, ಬ್ರೆಕ್ಟ್, ಮೇಯರ್ ಹೋಲ್ಡ್, ಪೀಟರ್ ಬ್ರೂಕ್ ಮುಂತಾದ ಮಹಾನ್ ರಂಗತಜ್ಞರುಗಳ ಬಗ್ಗೆ ಮತ್ತು ಅವರು ನಡೆಸಿದ ಪ್ರಯೋಗಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಕುವೆಂಪು ಅವರ ನಾಟಕಗಳು, ಜಿ. ಪಿ. ರಾಜರತ್ನಂ ಅವರ ನಾಟಕಗಳು ಸೇರಿದಂತೆ ಹಲವು ಲೇಖಕರ ನಾಟಕ ಕೃತಿಗಳ ಬಗ್ಗೆಯೂ ಕೃತಿ ಮಾಹಿತಿಗಳನ್ನು ನೀಡುತ್ತದೆ. ಸ್ವತಃ ರಂಗಾಸಕ್ತರಾಗಿರುವ ಮಾಲತಿ ಅವರು, ಅಭಿನಯ, ನಿರ್ದೇಶನ ಮೊದಲಾದ ಕ್ಷೇತ್ರಗಳಲ್ಲಿ ಅನುಭವವನ್ನು ಹೊಂದಿದವರು. ಆದುದರಿಂದ, ಈ ಕೃತಿ ರಂಗಭೂಮಿ ವಿದ್ಯಾರ್ಥಿಗಳಿಗೆ ಒಂದು ಪುಟ್ಟ ಕೈ ಮರವಾಗಿದೆ. ಕೃತಿಯಲ್ಲಿ ಒಟ್ಟು ನಾಲ್ಕು ಅಧ್ಯಾಯಗಳಿವೆ. ಮೊದಲ ಅಧ್ಯಾಯದಲ್ಲಿ ಯಕ್ಷಗಾನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ರಂಗಕಲೆಯಲ್ಲಿ ಆಂಗಿಕ, ವಾಚಿಕಗಳ ಮಹತ್ವವನ್ನು ವಿವರಿಸಲಾಗಿದೆ. ಹಾಗೆಯೇ, ರಂಗಭೂಮಿಗೆ ಯೋಗ, ಪ್ರಾಣಾಯಾಮ ಮತ್ತು ಇತರ ಕಸರತ್ತುಗಳು ಹೇಗೆ ಪೂರಕವಾಗಿವೆ ಎನ್ನುವುದನ್ನೂ ವಿವರಿಸುತ್ತಾರೆ. ಎರಡನೆ ಅಧ್ಯಾಯದಲ್ಲಿ ರಂಗಭೂಮಿಯಲ್ಲಿ ಹೊಸ ಪ್ರಯೋಗಳನ್ನು ನಡೆಸಿದ ಮಹತ್ವ ಪೂರ್ಣ ನಿರ್ದೇಶಕರ ಪರಿಚಯ ಮತ್ತು ವಿವರಗಳಿವೆ. ಮೂರನೇ ಅಧ್ಯಾಯದಲ್ಲಿ ಇತಿಹಾಸದಲ್ಲಿ ಆಗಿ ಹೋದ ಮಹತ್ವದ ರಂಗಭೂಮಿ ಚಿಂತಕರ ಬಗ್ಗೆ ಚರ್ಚಿಸಲಾಗಿದೆ. ನಾಲ್ಕನೇ ಅಧ್ಯಾಯದಲ್ಲಿ ಕನ್ನಡ ಸಾಹಿತ್ಯದಲ್ಲಿ ನಾಟಕಗಳನ್ನು ಬರೆದವರ ಪರಿಚವಿದೆ. ಹಾಗೆಯೇ ಅವರ ನಾಟಕ ಸಾಹಿತ್ಯಗಳ ಕುರಿತಂತೆ ವಿಶ್ಲೇಷಣೆಗಳಿವೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 136. ಮುಖಬೆಲೆ 125.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News