ಭಾರತೀಯ ಉಪಗ್ರಹದಿಂದ ಬಹುತೇಕ ಗರಿಷ್ಠ ದರದಲ್ಲಿ ತಿರುಗುವ ಕಪ್ಪು ರಂಧ್ರ ಪತ್ತೆ

Update: 2018-11-01 17:34 GMT

ಮುಂಬೈ,ನ.1: ಭಾರತದ ಮೊಟ್ಟಮೊದಲ ಖಗೋಳ ಅಧ್ಯಯನದ ಉದ್ದೇಶದಿಂದ ಉಡಾಯಿಸಲಾಗಿರುವ ಆಸ್ಟ್ರೊಸ್ಯಾಟ್ ಉಪಗ್ರಹ ಮತ್ತು ನಾಸಾದ ಚಂದ್ರ ಎಕ್ಸ್‌ರೇ ವೀಕ್ಷಣಾಲಯ ಜೊತೆಯಾಗಿ ಅವಳಿ ನಕ್ಷತ್ರ ವ್ಯವಸ್ಥೆ 4ಯು 1630-47ನಲ್ಲಿ ಕಪ್ಪು ರಂಧ್ರವೊಂದನ್ನು ಪತ್ತೆಹಚ್ಚಿದ್ದು ಇದು ಗರಿಷ್ಠ ಸಾಧ್ಯ ದರದ ಸಮೀಪ ತಿರುಗುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಬಹಳ ಸಣ್ಣ ಕಪ್ಪು ರಂಧ್ರಗಳು ಬೃಹತ್ ನಕ್ಷತ್ರೀಯ ಕೋರ್‌ನ ವಿಲಕ್ಷಣ ಅಂತಿಮ ಘಟ್ಟವಾಗಿದೆ ಎಂದು ಮುಂಬೈಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಿಐಎಫ್‌ಆರ್)ಯ ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

ಇಂಥ ನಾಶಹೊಂದುತ್ತಿರುವ ಕೋರ್‌ಗಳ ಗುರುತ್ವಾಕರ್ಷಣೆ ಎಷ್ಟು ಪ್ರಬಲವಾಗಿರುತ್ತದೆ ಎಂದರೆ ಇಡೀ ಸಮೂಹವೇ ಒಂದು ಬಿಂದುವಾಗಿ ಅದುಮಲ್ಪಟ್ಟಿರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಬಿಂದುವಿರುವ ಪ್ರದೇಶದ ಸುತ್ತಲಿನಿಂದ ಬೆಳಕು ಕೂಡಾ ಪ್ರತಿಫಲಿಸಲು ಸಾಧ್ಯವಾಗದ ಕಾರಣ ಅವುಗಳನ್ನು ನೇರವಾಗಿ ನೋಡುವುದು ಅಸಾಧ್ಯ. ಕಪ್ಪು ರಂಧ್ರಗಳು ಬಾಹ್ಯಾಕಾಶದಲ್ಲಿರುವ ಅತ್ಯಂತ ಸರಳ ವಸ್ತುಗಳಾಗಿವೆ. ಯಾಕೆಂದರೆ ಅವುಗಳನ್ನು ಗಾತ್ರ ಮತ್ತು ತಿರುಗುವಿಕೆ ದರ ಈ ಎರಡು ಗುಣಗಳ ಮೂಲಕ ವಿಂಗಡಿಸಬಹುದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಆಸ್ಟ್ರೊಸ್ಯಾಟ್ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) 2015ರಲ್ಲಿ ಉಡಾಯಿಸಿತ್ತು. ಇದು ಖಗೋಳ ಅಧ್ಯಯನಕ್ಕಾಗಿ ಭಾರತ ಉಡಾಯಿಸಿದ ಪ್ರಥಮ ಉಪಗ್ರಹವಾಗಿದೆ ಮತ್ತು ಅದರೊಳಗೆ ಅಳವಡಿಸಲಾಗಿದ್ದ ಎಸ್‌ಎಕ್ಸ್‌ಟಿ ಮೊದಲ ಭಾರತೀಯ ಎಕ್ಸ್‌ರೇ ಟೆಲಿಸ್ಕೋಪ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News