ಡಸಾಲ್ಟ್ ಕಂಪೆನಿ ಅನಿಲ್ ಅಂಬಾನಿಗೆ 284 ಕೋ.ರೂ.ಕಿಕ್‌ಬ್ಯಾಕ್ ನೀಡಿದೆ: ರಾಹುಲ್ ಗಾಂಧಿ ಆರೋಪ

Update: 2018-11-02 09:25 GMT

 ಹೊಸದಿಲ್ಲಿ, ನ.2: ಡಸಾಲ್ಟ್ ಏವಿಯೇಶನ್ ಕಂಪೆನಿಯ ಸಿಇಒ ಸುಳ್ಳು ಹೇಳುತ್ತಿದ್ದಾರೆ. ಈ ಕಂಪೆನಿಯು ನಷ್ಟದಲ್ಲಿದ್ದ ಅನಿಲ್ ಅಂಬಾನಿ ಕಂಪೆನಿಗೆ 284 ಕೋ.ರೂ. ಕಿಕ್‌ಬ್ಯಾಕ್ ನೀಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಗಂಭೀರ ಆರೋಪ ಮಾಡಿದ್ದಾರೆ.

ದೇಶವನ್ನು ಮುನ್ನಡೆಸುತ್ತಿರುವ ಓರ್ವ ವ್ಯಕ್ತಿಯನ್ನು ರಕ್ಷಿಸಲು ಫ್ರೆಂಚ್ ಏವಿಯೇಶನ್ ಕಂಪೆನಿಯು ಯತ್ನಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಸರು ಉಲ್ಲೇಖಿಸದೇ ರಾಹುಲ್ ಆರೋಪಿಸಿದರು.

‘‘ಡಸಾಲ್ಟ್ ಕಂಪೆನಿಯು ಅನಿಲ್ ಅಂಬಾನಿಯ ಕಂಪೆನಿಯಲ್ಲಿ 284 ಕೋ.ರೂ. ಬಂಡವಾಳ ಹೂಡಿದೆ. ಈ ಹಣದಿಂದ ಅಂಬಾನಿ ಕಂಪೆನಿ ಜಮೀನು ಖರೀದಿಸಿದೆ. ಇದರಿಂದ ಡಸಾಲ್ಟ್ ಸಿಇಒ ಸುಳ್ಳು ಹೇಳುತ್ತಿದ್ದಾರೆ ಎಂದು ಸ್ಪಷ್ಟವಾಗುತ್ತದೆ. ನಷ್ಟದಲ್ಲಿರುವ ಕಂಪೆನಿಗೆ ಏಕೆ 284 ಕೋ.ರೂ. ಹೂಡಿಕೆ ಮಾಡಲಾಗಿದೆ’’ ಎಂದು ಕಾಂಗ್ರೆಸ್ ಅಧ್ಯಕ್ಷರು ಪ್ರಶ್ನಿಸಿದರು.

ಅನಿಲ್ ಅಂಬಾನಿ ಬಳಿ ಜಮೀನಿನಿದೆ. ಹಾಗಾಗಿ ಎಚ್‌ಎಎಲ್‌ನೊಂದಿಗೆ ವಿಮಾನ ತಯಾರಿ ಒಪ್ಪಂದ ಮಾಡಲಾಗಿಲ್ಲ ಎಂದು ಡಸಾಲ್ಟ್ ಸಿಇಒ ಹೇಳುತ್ತಾರೆ. ಅನಿಲ್ ಅಂಬಾನಿ ಅವರು ಡಸಾಲ್ಟ್ ಕಂಪೆನಿ ನೀಡಿದ ಹಣದಲ್ಲೇ ಭೂಮಿ ಖರೀದಿಸಿದ್ದಾರೆ ಎಂದು ಸ್ಪಷ್ಟವಾಗಿದೆ’’ ಎಂದರು.

 ಕೇಂದ್ರ ಸರಕಾರ ಯುದ್ದ ವಿಮಾನಗಳ ಖರೀದಿ ದರಗಳನ್ನು ಬಹಿರಂಗಪಡಿಸದೇ ಇರುವ ಉದ್ದೇಶವೇನು? ಎಂದು ಪ್ರಶ್ನಿಸಿದ ರಾಹುಲ್, ರಫೇಲ್ ಒಪ್ಪಂದದಲ್ಲಿ ಪ್ರಧಾನಿ ಮೋದಿ ಹಾಗೂ ಅಂಬಾನಿ ಒಟ್ಟಿಗೆ ಸೇರಿಕೊಂಡು ಕೆಲಸ ಮಾಡಿದ್ದಾರೆ. ರಫೇಲ್ ಒಪ್ಪಂದದ ಬಗ್ಗೆ ತನಿಖೆ ಆರಂಭವಾದರೆ ಮೋದಿ ಬಚಾವಾಗಲು ಸಾಧ್ಯವೇ ಇಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News