ಹನೂರು: ಅಧಿಕಾರಿಗಳ ಗ್ರಾಮ ವಾಸ್ತವ್ಯ, ಸಮಾಲೋಚನೆ, ಅಹವಾಲು ಸ್ವಿಕಾರ ಕಾರ್ಯಕ್ರಮ

Update: 2018-11-04 14:24 GMT

ಹನೂರು,ನ.4: ಗ್ರಾಮ ವಾಸ್ತವ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪರಿಕಲ್ಪನೆಯಾಗಿದ್ದು, ನಾನೂ ಸಹ ಈ ಪರಿಕಲ್ಪನೆಗೆ ಪ್ರೇರೇಪಿತನಾಗಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿ, ಗ್ರಾಮೀಣ ಜನರ ಕಷ್ಟ ಮತ್ತು ಅನಾನುಕೂಲಗಳ ವಾಸ್ತವ ಅರಿತರೆ ಯೋಜನೆಗಳ ಕ್ರಿಯಾಯೋಜನೆ ಮಾಡಲು ಅನುಕೂಲ ಮತ್ತು ನೈಜ ಕ್ರಿಯಾ ಯೋಜನೆ ಮಾಡಲು ಸಾಧ್ಯ ಎಂದು ಚಾಮರಾಜನಗರ  ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಡಾ.ಹರೀಶ್ ಕುಮಾರ್ ತಿಳಿಸಿದರು. 

ಮಲೈಮಹದೇಶ್ವರಬೆಟ್ಟದ ಕಾಡಂಚಿನ ಗಡಿ ಭಾಗದ ಗೋಪಿನಾಥಮ್ ಗ್ರಾಮ ಪಂ.ನ ಆಲಂಬಾಡಿ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಹಾಗೂ ಬುಡಕಟ್ಟು ಜನಾಂಗದವರೊಡನೆ ಸಮಾಲೋಚನೆ ಮತ್ತು ಅಹವಾಲು ಸ್ವಿಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬುಡಕಟ್ಟು ಜನಾಂಗದವರು ಹಲವಾರು ತಲೆಮಾರುಗಳಿಂದ ಅರಣ್ಯಗಳಲ್ಲಿಯೇ ವಾಸವಿದ್ದು, ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಮೂಲಭೂತ ಸೌಕರ್ಯ ಸಿಗಬೇಕು ಎಂದ ಅವರು, ಈ ದಿನದ ಗ್ರಾಮ ವಾಸ್ತವ್ಯದ ಶ್ರೇಯಸ್ಸು ಮಾದ್ಯಮದವರಿಗೆ ಸಲ್ಲಬೇಕು ಎಂದು ಹೇಳಿದರು.  

ಅರಣ್ಯ ಇಲಾಖೆಯಲ್ಲಿರುವ ಬಿಗಿ ಕಾನೂನುಗಳು ಮತ್ತು ಕಂದಾಯ ಇಲಾಖೆಯಲ್ಲಿರುವ ತಾಂತ್ರಿಕ ತೊಡಕುಗಳಿಂದಾಗಿ ಅರಣ್ಯ ವಾಸಿಗಳಿಗೆ ಯಾವುದೇ ದಾಖಲಾತಿಗಳಿಲ್ಲದೆ ಸರ್ಕಾರದ ಸೌಲಭ್ಯಗಳು ನೀಡಲಾಗುತ್ತಿಲ್ಲ. ಮಾನವೀಯ ನೆಲೆಯಲ್ಲಿ ಕಾನೂನುಗಳನ್ನು ಸರಳೀಕರಿಸಿದರೆ ಸೌಲಭ್ಯಗಳನ್ನು ಒದಗಿಸಲು ಸಾಧ್ಯ ಎಂದು ತಿಳಿಸಿದರು. ಜಿಲ್ಲಾ ಪಂ. ನ ಸುಮಾರು 33 ಇಲಾಖೆಗಳಲ್ಲಿ ಗಿರಿಜನ ಉಪಯೋಜನೆಯಲ್ಲಿ ಸೌಲಭ್ಯಗಳಿದ್ದು, ಪ್ರತಿ ಇಲಾಖೆಯ ಅಧಿಕಾರಿಗಳು ಅರಣ್ಯವಾಸಿ ಬುಡಕಟ್ಟು ಜನರ ಮೂಲ ಭೂತ ಸೌಕರ್ಯ ನೀಡಲು ಯೋಜನೆ ರೂಪಿಸಲು ತಿಳಿಸಿದರು. 

ಈಗಾಗಲೇ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ಮೊಬೈಲ್ ಕ್ಲಿನಿಕ್ ಸೇವೆ ಲಭ್ಯವಿದ್ದು, ಬುಡಕಟ್ಟ ಜನಾಂಗದ ಮುಖಂಡರೇ ನಿರ್ಧರಿಸಿ ಯಾವ ದಿನ ಯಾವ ಊರಿಗೆ ಮೊಬೈಲ್ ಕ್ಲಿನಿಕ್ ಸೇವೆ ಅವಶ್ಯಕತೆ ಎದೆ ಎಂದು ತಿಳಿಸಲು ಸೂಚಿಸಿದರು.

ವಸತಿ ಯೋಜನೆಗಳಿಗೆ ಹಣ ಬಿಡುಗಡೆ ವಿಳಂಬ ಕುರಿತು ಮಾತನಾಡಿದ ಡಾ.ಹರೀಶ್ ಕುಮಾರ್, ಜಿಲ್ಲೆಯಲ್ಲಿ ಸುಮಾರು 18 ಸಾವಿರ ಮನೆಗಳಿಗೆ ಸಂಬಂಧಿಸಿದಂತೆ ಕಂಪ್ಯೂಟರ್ ಮೂಲಕ  ದಾಖಲೆಗಳನ್ನು ಪರಶೀಲಿಸಿದಾಗ ಸುಮಾರು 6000 ಮನೆಗಳು ಕಟ್ಟಿರುವುದಕ್ಕೆ ಸಂಬಂಧಿಸಿದಂತೆ ಪಾರದರ್ಶವಾಗಿ ಯೋಜನೆ ರೂಪಿಸಿಲ್ಲ ಎಂಬುದು ತಿಳಿದು ಬರುತ್ತಿದೆ. ಒಂದೇ ಕುಟುಂಬಕ್ಕೆ ಎರಡೆರಡು ಬಾರಿ ಮನೆ ಮಂಜೂರು ಮಾಡಿರುವುದಕ್ಕೆ ಸಂಬಂಧಿಸದಂತೆ ಪರೀಕ್ಷಿಸಲು ಸಮಯ ತೆಗೆದುಕೊಂಡಿದ್ದು, ಚುನಾವಣೆ ಬಂದು ಸರ್ಕಾರ ಬದಲಾದದ್ದು ವಸತಿಯೋಜನೆಗಳಿಗೆ ಹಣ ಬಿಡುಗಡೆ ವಿಳಂಬವಾಗಲು ಕಾರಣ ಎಂದು ತಿಳಿಸಿದರು. ಇನ್ನು ಹದಿನೈದು ದಿನಗಳಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ನವಗ್ರಾಮ ಪ್ರಗತಿ ನಿರ್ಮಾಣ ಪ್ರಸ್ತಾವನೆ: ಜಿಲ್ಲಾ ಬುಡಕಟ್ಟು ಇಲಾಖೆಯ ಕೃಷ್ಣಪ್ಪ ಮಾತನಾಡಿ, ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಸಚಿವ ಕೃಷ್ಣಬೈರೇಗೌಡರು ನವಗ್ರಾಮ ಪ್ರಗತಿ ನಿರ್ಮಾಣ ಪ್ರಸ್ತಾವನೆ ನೀಡಲು ಸೂಚಿಸಿದ್ದು, ನಲ್ಲಿಕತ್ರಿ, ಪಾಲಾರ್, ಆಲಂಬಾಡಿ, ಗೊಂಬೆಗಲ್ಲು, ತುಳಸಿಪುರ ಬುಡಕಟ್ಟು ಗ್ರಾಮಗಳ ಮೂಲಭೂತ ಸೌಕರ್ಯಕ್ಕಾಗಿ 3 ತಿಂಗಳ ಹಿಂದೆಯೇ ಒಟ್ಟು 5 ಕೋಟಿ ರೂ. ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. 

ಆಲಂಬಾಡಿ ಗ್ರಾಮದ ಮೂಲಬೂತ ಸೌಕರ್ಯ ಕಲ್ಪಿಸಲು 80 ಲಕ್ಷ ರೂ ಪ್ರಸ್ತಾವನೆ ಸಲ್ಲಿಸಿದ್ದು, ಕುಡಿಯುವ ನೀರು ಮತ್ತು ಚರಂಡಿ ನಿರ್ಮಾಣಕ್ಕೆ 20 ಲಕ್ಷ, ಸಿ.ಸಿ ರಸ್ತೆ ನಿರ್ಮಾಣಕ್ಕೆ 40 ಲಕ್ಷ, ಸೋಲಾರ್ ದೀಪ ಅಳವಡಿಕೆಗೆ 20 ಲಕ್ಷ ಅಂದಾಜಿಸಲಾಗಿದೆ ಎಂದು ತಿಳಿಸಿದರು. ಪಾಲಾರ್ ಗ್ರಾಮದ ಮೂಲಭೂತ ಸೌಕರ್ಯ ಒದಗಿಸಲು 60 ಲಕ್ಷ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. 

ಅರಣ್ಯ ಹಕ್ಕುಪತ್ರ ಮತ್ತು ದಾಖಲಾತಿಗಳು: ಕೊಳ್ಳೇಗಾಲ ವಿಭಾಗದಲ್ಲಿ ಸುಮಾರು 1525 ಕುಟುಂಬಗಳು ಅರಣ್ಯ ಹಕ್ಕು ಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದು , ಕೇವಲ 25 ಕುಟುಂಬಗಳಿಗೆ ಅರಣ್ಯ ಹಕ್ಕುಪತ್ರ ನೀಡಲಾಗಿದೆ. ಸೂಕ್ತ ದಾಖಲಾತಿ ನೀಡಿ ಅರಣ್ಯ ಹಕ್ಕುಪತ್ರ ಪಡೆಯಬೇಕೆಂದು ತಿಳಿಸಿದರು. ಅರಣ್ಯ ಹಕ್ಕುಪತ್ರ ಪಡೆಯಲು 3 ತಲೆಮಾರಿನ ಕುಟುಂಬಗಳು ವಾಸವಿರುವುದಕ್ಕೆ ಸಂಬಂಧಿಸಿದಂತೆ ಯಾವುದಾದರು ಹಿರಿಯರ ಸಮಾಧಿ ದಾಖಲೆ, ಯಾವುದಾದರು ದೇವಸ್ಥಾನ ಇದ್ದ ದಾಖಲೆ ಮತ್ತು ಆಧಾರಗಳಿದ್ದರೆ ದಾಖಲೆ ಒದಗಿಸಿ ಅರಣ್ಯ ಹಕ್ಕುಪತ್ರ ಪಡೆಯಬಹುದೆಂದು ತಿಳಿಸಿದರು.

ಇತರೆ ಜನಾಂಗಕ್ಕೂ ಅರಣ್ಯ ಹಕ್ಕುಪತ್ರ ಪಡೆಯಲು ಅವಕಾಶವಿದ್ದು, ಇತರೆ ಪಾರಂಪರಿಕ ಅರಣ್ಯ ಹಕ್ಕು ಖಾಯ್ದೆಯಡಿ ಹಕ್ಕು ಪತ್ರ ಪಡೆಯಬಹುದು. ಗ್ರಾಮೀಣ ಮಟ್ಟದ ಅರಣ್ಯ ಹಕ್ಕು ಸಮಿತಿಗೆ ದಾಖಲಾತಿಗಳನ್ನು ಒದಗಿಸಿ ಅರಣ್ಯ ಹಕ್ಕುಪತ್ರ ಪಡೆಯಲು ಜಿಲ್ಲಾ ಬುಡಕಟ್ಟು ಇಲಾಖೆಯ ಕೃಷ್ಣಪ್ಪ ತಿಳಿಸಿದರು.

ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅರಣ್ಯ ಹಕ್ಕುಪತ್ರದ ಮೂಲಕ ಸರ್ಕಾರದ ಎಲ್ಲಾ ಸೌಲಭ್ಯ ಪಡೆಯಲು ಅರಣ್ಯ ಹಕ್ಕು ದಾಖಲಾತಿ ಎಂದು ಪರಿಗಣಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಅನುಮೋದನೆ ನೀಡಿದ್ದಲ್ಲಿ ಅರಣ್ಯ ಹಕ್ಕುಪತ್ರದ ಮೂಲಕ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಅರಣ್ಯವಾಸಿಗಳು ಪಡೆಯಲು ಸಾಧ್ಯ ಎಂದು ತಿಳಿಸಿದರು. 

ಸಾಂಸ್ಕೃತಿಕ ಕಾರ್ಯಕ್ರಮ: ಗ್ರಾಮ ವಾಸ್ತವ್ಯ ಸಭೆ ಮುಗಿದ ನಂತರ ಅಧಿಕಾರಿಗಳ ಮತ್ತು ಗ್ರಾಮಸ್ಥರ ಒಳಗೊಂಡು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಈ ಸಂದರ್ಭ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಸಾದ್, ಕೃಷಿ  ಜಂಟಿ ನಿರ್ದೇಶಕ ತಿರುಮಲೇಶ್, ಮ.ಮ.ಮಕ್ಕಳ ಇಲಾಖೆ ಉಪ ನಿರ್ದೇಶಕ ಬಸವರಾಜು, ಸಹಾಯಕ ಕೃಷಿ ಅಧಿಕಾರಿ ಮಹದೇವ್, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಗೋಪಾಲ್, ಸ್ವಚ್ಚ  ಭಾರತ್ ಅಭಿಯಾನದ ಸ್ಯಾಮುವೆಲ್, ಮಹದೇವ್, ಸಿ.ಡಿ.ಪಿ.ಓ ನಾಗೇಶ್, ಮ.ಮ ಬೆಟ್ಟದ ವೈದ್ಯಾಧಿಕಾರಿ ಡಾ.ಚೇತನ್, ಗೋಪಿನಾಥ ಗ್ರಾ.ಪಂ ಅಧ್ಯಕ್ಷ ಮುರುಗೇಶ್, ಪಿ.ಡಿ.ಓ ರಾಜೇಶ್, ಮಹದೇಶ್ವರಬೆಟ್ಟದ ಗ್ರಾ.ಪಂ ಕಾರ್ಯದರ್ಶಿ ರಾಜ್‍ಕುಮಾರ್, ಸಮಾಜ ಕಲ್ಯಾಣಾಧಿಕಾರಿ ಗಂಗಾಧರ್, ರಂಗಸ್ವಾಮಿ ತಾಲೂಕು ಬುಡಕಟ್ಟು ಜನಾಂಗದ ಅಧ್ಯಕ್ಷ ದೊಡ್ಡಯ್ಯ, ಜಿಲ್ಲಾ ಬುಡಕಟ್ಟು ಜನಾಂಗದ ಅಧ್ಯಕ್ಷ ಮಾದೇಗೌಡ, ಮುಖಂಡರುಗಳಾದ ಮಾದೇವ, ಚಂದ್ರು, ಸಿ.ಮಾದಪ್ಪ, ಮುತ್ತಯ್ಯ, ಆಲಂಬಾಡಿ ಶಿಕ್ಷಕ ಜಯರಾಮ್, ಮಹದೇವಸ್ವಾಮಿ ಮುಂತಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News