ತಾಜ್‌ಮಹಲ್‌ ಆವರಣದ ಮಸೀದಿಯಲ್ಲಿ ದೈನಂದಿನ ನಮಾಝ್ ಗೆ ನಿಷೇಧ

Update: 2018-11-05 03:36 GMT

ಆಗ್ರಾ, ನ.5: ವಿಶ್ವವಿಖ್ಯಾತ ತಾಜ್‌ಮಹಲ್ ಆವರಣದಲ್ಲಿರುವ ಮಸೀದಿಯಲ್ಲಿ ಶುಕ್ರವಾರ ಹೊರತುಪಡಿಸಿ, ಪ್ರತಿ ದಿನ ನಮಾಝ್ ಮಾಡುವುದನ್ನು ನಿಷೇಧಿಸಿ ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯ (ಎಎಸ್‌ಐ) ಹೊರಡಿಸಿರುವ ಆದೇಶ ಹೊಸ ವಿವಾದಕ್ಕೆ ಕಾರಣವಾಗಿದೆ.

ಸುಪ್ರೀಂಕೋರ್ಟ್ ಕಳೆದ ಜುಲೈನಲ್ಲಿ ನೀಡಿರುವ ಆದೇಶಕ್ಕೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಎಸ್‌ಐ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಭದ್ರತಾ ಕಾರಣಗಳ ಹಿನ್ನೆಲೆಯಲ್ಲಿ ಸ್ಥಳೀಯರನ್ನು ಹೊರತುಪಡಿಸಿ, ಶುಕ್ರವಾರದ ಪ್ರಾರ್ಥನೆಯಲ್ಲಿ ಹೊರಗಿನವರು ಭಾಗವಹಿಸುವುದನ್ನು ನಿಷೇಧಿಸಿದ ಸ್ಥಳೀಯ ಆಡಳಿತದ ಕ್ರಮವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು.

ಶುಕ್ರವಾರ ತಾಜ್‌ಮಹಲ್ ಸಾರ್ವಜನಿಕ ವೀಕ್ಷಣೆಗೆ ಮುಚ್ಚಿರುವುದರಿಂದ, ಸ್ಥಳೀಯರು ಅಪರಾಹ್ನದಿಂದ 2 ಗಂಟೆವರೆಗೆ ಯಾವುದೇ ಪ್ರವೇಶ ಶುಲ್ಕ ನೀಡದೇ ನಮಾಝ್ ನಲ್ಲಿ ಭಾಗವಹಿಸಲು ಅವಕಾಶವಿದೆ. ಆದರೆ ಇತರ ದಿನಗಳಲ್ಲಿ, ತಾಜ್‌ಮಹಲ್ ವೀಕ್ಷಣೆಗೆ ಟಿಕೆಟ್ ಪಡೆದ ಯಾರು ಬೇಕಾದರೂ, ಮಸೀದಿಗೆ ಭೇಟಿ ನೀಡಿ ನಮಾಝ್ ಸಲ್ಲಿಸಲು ಇದುವರೆಗೆ ಅವಕಾಶವಿತ್ತು.

ಅಚ್ಚರಿಯ ನಡೆಯಲ್ಲಿ ರವಿವಾರ ಎಎಸ್‌ಐ ಅಧಿಕಾರಿಗಳು, "ವಝು ಕೆರೆ"ಯನ್ನು ಆವರಣವನ್ನು ಮುಚ್ಚಿದ್ದಾರೆ. ಪವಿತ್ರ ನಮಾಝ್ ಸಲ್ಲಿಸುವ ಮುನ್ನ ಇಲ್ಲಿ ಶುಚಿಗೊಂಡು ಪ್ರವಾಸಿಗರು ಪ್ರಾರ್ಥನೆಗೆ ತೆರಳುತ್ತಿದ್ದರು. ಎಎಸ್‌ಐ ಕ್ರಮ ಹಲವು ಪ್ರವಾಸಿಗರಿಗೆ ರವಿವಾರ ನಿರಾಸೆ ತಂದಿದೆ.

ಮಸೀದಿಯ ಇಮಾಮ್ ಹಾಗೂ ಸಿಬ್ಬಂದಿಗೆ ಕೂಡಾ ಶುಕ್ರವಾರ ಮಾತ್ರ ಬರುವಂತೆ ಸೂಚಿಸಲಾಗಿದೆ. ಮಸೀದಿಯಲ್ಲಿ ಪ್ರಾರ್ಥನೆಯ ನೇತೃತ್ವ ವಹಿಸುವ ಇಮಾಮ್ ಸೈಯದ್ ಸಾದಿಕ್ ಅಲಿ ಕುಟುಂಬ, ಹಲವು ದಶಕಗಳಿಂದ ಮಾಸಿಕ 15 ರೂ. ಗೌರವಧನ ಪಡೆಯುತ್ತಿದೆ. ಎಎಸ್‌ಐ ನಡೆಯ ಬಗ್ಗೆ ಕುಟುಂಬ ಅಚ್ಚರಿ ವ್ಯಕ್ತಪಡಿಸಿದೆ.
ತಾಜ್ ಮಹಲ್ ಇಂತೇಝಾಮಿಯಾ ಸಮಿತಿಯ ಅಧ್ಯಕ್ಷ ಸೈಯದ್ ಇಬ್ರಾಹಿಂ ಹುಸೇನ್ ಝೈದಿ, "ಹಲವು ವರ್ಷಗಳಿಂದ ಈ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಅದನ್ನು ನಿಲ್ಲಿಸಲು ಯಾವುದೇ ಸಕಾರಣಗಳಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಮುಸ್ಲಿಂ ವಿರೋಧಿ ಮನೋಭಾವವನ್ನು ಹೊಂದಿದ್ದು, ಈ ಸಂಬಂಧ ಸೋಮವಾರ ಎಎಸ್‌ಐ ಅಧಿಕಾರಿಗಳನ್ನು ಭೇಟಿ ಮಾಡಿ ಆಕ್ಷೇಪ ಸಲ್ಲಿಸಆಗುವುದು'' ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News