ಮೂಡಿಗೆರೆ: ಮಾಜಿ ಜಿ.ಪಂ. ಸದಸ್ಯನ ಮೇಲೆ ಹಲ್ಲೆ ಖಂಡಿಸಿ ವಿವಿಧ ಪಕ್ಷ, ಸಂಘಟನೆಗಳಿಂದ ಧರಣಿ

Update: 2018-11-05 11:34 GMT

ಮೂಡಿಗೆರೆ, ನ.5: ಕೋಮಾರ್ಕ್ ರಾಜ್ಯಾಧ್ಯಕ್ಷ, ಮಾಜಿ ಜಿ.ಪಂ. ಸದಸ್ಯ ಶಿವಣ್ಣ ಅವರ ಮೇಲೆ ಚಿಕ್ಕಮಗಳೂರು ನಗರ ಠಾಣೆ ಪಿಎಸ್‍ಐ ರಘು ಹಾಗೂ ಮೂವರು ಸಿಬ್ಬಂದಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಹಾಗೂ ಅವರ ಅಮಾನತ್ತಿಗೆ ಒತ್ತಾಯಿಸಿ ಸೋಮವಾರ ಪಟ್ಟಣದಲ್ಲಿ ವಿವಿಧ ರಾಜಕೀಯ ಪಕ್ಷಗಳು, ರೈತ ಸಂಘ ಮತ್ತು ಬೆಳೆಗಾರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. 

ಈ ವೇಳೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಚಿಕ್ಕಮಗಳೂರು ನಗರ ಠಾಣೆ ಪಿಎಸ್‍ಐ ರಘು ಅವರು, ಕೋಮಾರ್ಕ್ ರಾಜ್ಯಾಧ್ಯಕ್ಷ ಶಿವಣ್ಣ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ರೌಡಿಯಂತೆ ವರ್ತಿಸಿದ್ದಾರೆ. ಪಿಎಸ್‍ಐ ರಘು ಹಿಂದೆ ಚುನಾವಣೆ ವೇಳೆ ರಾಜಕೀಯ ಪಕ್ಷವೊಂದು ಸಾಗಿಸುತ್ತಿದ್ದ 80 ಲಕ್ಷ ಹಣವನ್ನು ವಶ ಪಡೆದು, 7 ಲಕ್ಷ ಹಣವನ್ನು ಮಾತ್ರ ಲೆಕ್ಕ ತೋರಿಸಿ ಉಳಿದ ಹಣವನ್ನು ಲಪಟಾಯಿಸಿದ್ದಾನೆ. ಇಂತಹ ಅನೇಕ ಆರೋಪಗಳು ಪಿಎಸ್‍ಐ ಮೇಲೆ ಇದೆ. ಇಂತಹ ಖದೀಮ ಅಧಿಕಾರಿ ನಮ್ಮ ಜಿಲ್ಲೆಗೆ ಅವಶ್ಯಕತೆಯಿಲ್ಲ. ಆತನನ್ನು ಕೂಡಲೇ ಅಮಾನತ್ತುಪಡಿಸಬೇಕು. ಇಲ್ಲವಾದರೆ ಎಸ್‍ಪಿ ಕಚೇರಿ ಎದುರು ದರಣಿ ನಡೆಸುತ್ತೇನೆಂದು ಎಚ್ಚರಿಸಿದರು.

ಎಂಎಲ್‍ಸಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಕಳೆದ ತಿಂಗಳು 22ರಂದು ರಾತ್ರಿ 12:30 ರವೇಳೆ ಅರೆಕುಡಿಗೆ ಶಿವಣ್ಣ ಅವರು, ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ತೆರಳಲು ಬಸ್‍ಗಾಗಿ ಅಲ್ಲಿನ ಟಿ.ಸಿ.ಯನ್ನು ವಿಚಾರಿಸಿದಾಗ, ಆತ ಉಡಾಫೆಯಾಗಿ ಮಾತನಾಡಿದ್ದಾನೆ. ಬಳಿಕ ಅಲ್ಲಿಗೆ ಮುಪ್ತಿಯಲ್ಲಿ ಬಂದ ಪೊಲೀಸ್ ಪೇದೆಯೊಬ್ಬ ಶಿವಣ್ಣ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಪಿಎಸ್‍ಐ ರಘು ಮುಪ್ತಿಯಲ್ಲಿ ಬಂದು ಶಿವಣ್ಣ ಅವರನ್ನು ಠಾಣೆಗೆ ಕರೆದೊಯ್ದು ಮಾರಣಾಂತಿಹ ಹಲ್ಲೆ ನಡೆಸಿದ್ದಾನೆ. ಎಸ್‍ಪಿ ಹರೀಶ್ ಪಾಂಡೆ ಅವರು ಪಿಎಸ್‍ಐ ರಘು ಪರ ವಹಿಸಿ ಆತನನ್ನು ಉಳಿಸಲು ಕಸರತ್ತು ನಡೆಸಿದ್ದಾರೆ. ಇದು ಎಸ್‍ಪಿ ನಡವಳಿಕೆಗೆ ಶೋಭೆ ತರುವುದಿಲ್ಲ. ಪಿಎಸ್‍ಐ ಸಹಿತ ಮೂವರು ಸಿಬ್ಬಂದಿಗಳನ್ನು ಕೂಡಲೇ ಅಮಾನತ್ತುಗೊಳಿಸಬೇಕು. ಇಲ್ಲವಾದರೆ ವಿಧಾನಸಭೆ ಮತ್ತು ಪರಿಷತ್ ಅಧಿವೇಶನದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಆತನ ಅಮಾನತ್ತಿಗೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಪಿಎಸ್‍ಐ ರಘು ವರ್ತನೆ ಸರಿಯಿಲ್ಲ. ಈ ಹಿಂದೆಯೂ ಬಿಜೆಪಿ ಮುಖಂಡ ಪುಣ್ಯಪಾಲ್ ಎಂಬುವರ ಮೇಲೆ ಹಲ್ಲೇ ನಡೆಸಿ ಗಾಯಗೊಳಿಸಿದ್ದ. ಆತನ ವರ್ತನೆ ಬಗ್ಗೆ ಹಿಂದಿನ ಎಸ್‍ಪಿ ಅಣ್ಣಮಲೈ ಅವರಿಗೆ ದೂರು ನೀಡಿದಾಗ ಪಿಎಸ್‍ಐಗೆ ಸದ್ಯದಲ್ಲೇ ಭಡ್ತಿ ಇದೆ ಎಂದಿದ್ದರಿಂದ ಸುಮ್ಮನಾಗಿದ್ದೆವು. ಪಿಎಸ್‍ಐ ರಘು ಮಾನಸಿಕ ರೋಗಿಯಾಗಿದ್ದಾನೆ. ಆತನಿಗೆ ನನ್ನ ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಕೊಡಿಸಲು ಸಿದ್ದನಿದ್ದೇನೆ. ಇದೇ ಸ್ಥಿತಿಯಲ್ಲಿ ಆತ ಇಲಾಖೆಯಲ್ಲಿ ಮುಂದುವರೆದರೆ ಅಮಾಯಕರಿಗೆ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಆತನನ್ನು ಇಲಾಖೆ ಹೊರ ಹಾಕಬೇಕು ಎಂದು ಒತ್ತಾಯಿಸಿದರು.

ನಂತರ ಪ್ರತಿಭಟನಕಾರರು ಪಟ್ಟಣದ ಪ್ರಮುಖ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆ ವೇಳೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಬಿಜೆಪಿ ಮುಖಂಡರಾದ ಕೆಂಜಿಗೆ ಕೇಶವ, ಹಳಸೆ ಶಿವಣ್ಣ, ಬಿ.ಎನ್.ಜಯಂತ್, ದುಂಡುಗ ಪ್ರಮೋದ್, ವಿ.ಕೆ.ಶಿವೇಗೌಡ, ಸುದರ್ಶನ್, ಮನೋಜ್, ಗಜೇಂದ್ರ, ಜಯಪಾಲ್, ಚಂದ್ರೇಶ್, ಲತಾ ಲಕ್ಷ್ಮಣ್, ಜೆ.ಎಸ್.ರಘು, ಜೆಡಿಎಸ್‍ನ ಬಿ.ಎಂ.ಬೈರೇಗೌಡ, ಎಸ್.ಎ.ವಿಜೇಂದ್ರ, ಲೋಹಿತ್, ಜೇನುಬೈಲ್ ನಾಗೇಶ್, ಕಾಂಗ್ರೆಸ್‍ನ ಚನ್ನಕೇಶವ, ಸುರೇಂದ್ರ ಕುಂದೂರು, ರೈತ ಸಂಘದ ಡಿ.ಆರ್.ದುಗ್ಗಪ್ಪಗೌಡ, ಪುಟ್ಟಸ್ವಾಮಿಗೌಡ, ಬಿಳ್ಳೂರು ನಾಗೇಶ್, ಸಂಗಮಪುರ ರಾಜು, ಸಿಪಿಐನ ದೇವವೃಂದ ರವಿ, ಬೆಳೆಗಾರ ಸಂಘದ ಬಾಲರಾಜ್, ಕತ್ಲೆಕಾನ್ ಮನು, ಕೃಷ್ಣೇಗೌಡ ಮತ್ತಿತರರಿದ್ದರು. 

ನನ್ನ ಪತಿ ಶಿವಣ್ಣ ಮದುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರು ತಪ್ಪು ಮಾಡಿದ್ದರೆ ಪೊಲೀಸ್ ಇಲಾಖೆಯ ಸೆಕ್ಷನ್‍ಗಳನ್ನೆಲ್ಲಾ ಬಳಸಿ ಜೈಲಿಗೆ ಹಾಕಬಹುದಿತ್ತು. ಅವರ ಮೇಲೆ ಹಲ್ಲೆ ನಡೆಸಲು ಅಧಿಕಾರ ಕೊಟ್ಟವರಾರು? ಪಿಎಸ್‍ಐ ರಘು ಅಮಾಯಕರ ಮೇಲೆ ಹಲ್ಲೆ ನಡೆಸುವುದು ಬಿಟ್ಟು, ದೇಶದ ಗಡಿಗೆ ಹೋಗಿ ಸೈನಿಕರೊಂದಿಗೆ ಸೇರಿಕೊಂಡು ಹೋರಾಡಲಿ. ಆತ ಮಾನಸಿಕ ಅಸ್ವಸ್ಥನಾಗಿದ್ದು, ಚಿಕಿತ್ಸೆ ಅಗತ್ಯವಿದೆ. 

-ಪೂರ್ಣೀಮಾ ಶಿವಣ್ಣ, ಶಿವಣ್ಣ ಅವರ ಪತ್ನಿ 

ಗಣ್ಯ ವ್ಯಕ್ತಿ ಎಂಬುವುದನ್ನು ತಿಳಿಯದೆ ಅನಾಗರಿಕನಂತೆ ವರ್ತಿಸಿರುವ ಪಿಎಸ್‍ಐ ನಡೆ ಸರಿಯಿಲ್ಲ. ಶಿವಣ್ಣ ಹಿಂದೆ ಜಿ.ಪಂ. ಸದಸ್ಯರಾಗಿದ್ದಾಗ ಪಿಎಸ್‍ಐ ಬಣಕಲ್ ಠಾಣೆಯಲ್ಲಿ ಕೆಲ ದಿನ ಕರ್ತವ್ಯ ನಿರ್ವಹಿಸಿದ್ದ. ಆ ವೇಳೆ 5 ಮಂದಿ ಅಮಾಯಕ ರೈತರನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡಲು ಪಿಎಸ್‍ಐ ಲಂಚ ಕೇಳಿದ್ದ. ಲಂಚ ನೀಡದೇ ರೈತರನ್ನು ಶಿವಣ್ಣ ಬಿಡಿಸಿದ್ದರು. ಲಂಚ ಸಿಗಲಿಲ್ಲವೆಂಬ ಕಾರಣಕ್ಕೆ ಅಂದಿನ ಸಿಟ್ಟನ್ನು ಪ್ರತಿಕಾರಕ್ಕಾಗಿ ಶಿವಣ್ಣನ ಮೇಲೆ ಹಲ್ಲೆ ನಡೆಸಿದ್ದಾನೆ.ಇದು ಪೊಲೀಸ್ ರಾಜ್ಯವೋ ಅಥವಾ ಪ್ರಜಾಪ್ರಭುತ್ವ ರಾಜ್ಯವೋ ತಿಳಿಯದಂತಾಗಿದೆ.

-ಡಿ.ಬಿ.ಸುಬ್ಬೇಗೌಡ, ಹಿರಿಯ ಕಾಫಿ ಬೆಳೆಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News