ಶಬರಿಮಲೆಗೆ ಭೇಟಿ ನೀಡಿದ್ದ 7,300 ಮಂದಿಯಲ್ಲಿ 200 ಮಂದಿ ಮಾತ್ರ ನೈಜ ಭಕ್ತರು: ಪೊಲೀಸ್ ವಿಶ್ಲೇಷಣೆ

Update: 2018-11-08 09:29 GMT

ತಿರುವನಂತಪುರಂ, ನ.8: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಸೋಮವಾರ ಮತ್ತು ಮಂಗಳವಾರ ಚಿತ್ತಿರ ಅಟ್ಟಂ ಉತ್ಸವಕ್ಕಾಗಿ ಆಗಮಿಸಿದ್ದ 7,300 ಜನರಲ್ಲಿ ಕೇವಲ 200 ಮಂದಿ ನೈಜ ಭಕ್ತರಾಗಿದ್ದರೆಂದು ಪೊಲೀಸರು ನಡೆಸಿದ ವಿಶ್ಲೇಷಣೆಯಿಂದ ತಿಳಿದು ಬಂದಿದೆ.

ದೇವಳಕ್ಕೆ ಈ ಸಂದರ್ಭ ಭೇಟಿ ನೀಡಿದ ಉಳಿದ 7,000 ಮಂದಿ  ಬಿಜೆಪಿ ಮತ್ತು ಆರೆಸ್ಸೆಸ್ ಸಹಿತ ಪ್ರತಿಭಟನೆ ನಡೆಸುವ ಸಂಘಟನೆಗಳಿಗೆ ಸೇರಿದವರಾಗಿದ್ದರೆನ್ನಲಾಗಿದೆ. ಅವರಲ್ಲಿ 200 ಮಂದಿ ಕಳೆದ ತಿಂಗಳು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ದೇವಸ್ಥಾನ ಮೊದಲ ಬಾರಿ ತೆರೆದುಕೊಂಡಾಗ ಪ್ರತಿಭಟಿಸಿದವರಾಗಿದ್ದರು.

ಸೋಮವಾರ ಮತ್ತು ಮಂಗಳವಾರ ದೇವಸ್ಥಾನದ ಸುತ್ತಮುತ್ತ ಪ್ರತಿಭಟನೆ ನಡೆಸಿದವರನ್ನು ಪತ್ತೆ ಹಚ್ಚಲು ಪೊಲೀಸರು ಫೇಸ್ ರೆಕಗ್ನಿಶನ್ ಸಾಫ್ಟ್‍ವೇರ್ ಬಳಸಿದ್ದಾರೆ. ಈ ಬಾರಿ ಪ್ರತಿಭಟನೆಯಲ್ಲಿ ಭಾಗವಹಿಸಿದವರ ಮೇಲೆ ನವೆಂಬರ್ 16ರಂದು ದೇವಸ್ಥಾನ ಮಂಡಲಂ-ಮಕರವಿಳಕ್ಕು ಹಬ್ಬಕ್ಕೆ ತೆರೆದುಕೊಳ್ಳುವ ಸಂದರ್ಭ ನಿಗಾ ಇಡಲಾಗುವುದು ಎಂದು ಹೇಳಲಾಗಿದೆ.

ಈ ಹಿಂದೆಯೇ ಬಂಧಿಸಲ್ಪಟ್ಟು ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡ ಪ್ರತಿಭಟನಾಕಾರರು ಮತ್ತೆ ದೇವಳಕ್ಕೆ ಈ ವಾರ ಇರುಮುಡಿಕಟ್ಟು ಜತೆ ಆಗಮಿಸಿದ್ದರಿಂದ ಅವರನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ.

ಶಬರಿಮಲೆ ತೀರ್ಪು ಪುನರ್ ಪರಿಶೀಲನಾ ಅರ್ಜಿಗಳನ್ನು ನವೆಂಬರ್ 13ರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದೇ ಆದಲ್ಲಿ ನವೆಂಬರ್ 16ರಂದು ಪೊಲೀಸರು ಆಧುನಿಕ ತಂತ್ರಜ್ಞಾನದ ಸಹಾಯ ಪಡೆದು ಇನ್ನಷ್ಟು ಕಟ್ಟೆಚ್ಚರ ವಹಿಸಲು  ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News