ಮೂಡಿಗೆರೆ: ಟಿಪ್ಪು ಜಯಂತಿ ಸರಳ ಆಚರಣೆಗೆ ಮುಂದಾದ ತಾಲೂಕು ಆಡಳಿತದ ವಿರುದ್ಧ ಆಕ್ರೋಶ

Update: 2018-11-09 12:14 GMT

ಮೂಡಿಗೆರೆ, ನ.9: ತಾಲೂಕು ಆಡಳಿತದಿಂದ ನಡೆಯಲಿರುವ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ತಹಶೀಲ್ದಾರ್ ಪದ್ಮನಾಭ ಶಾಸ್ತ್ರಿ ಮುಂದಾಗಿದ್ದಾರೆಂದು ಆರೋಪಿಸಿ ಶನಿವಾರ ನಡೆಯಲಿರುವ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಬಿಎಸ್ಪಿ ಹಾಗೂ ವಿವಿಧ ಸಂಘ ಸಂಸ್ಥೆಗಳು ಭಹಿಷ್ಕರಿಸುವ ನಿರ್ಧಾರ ಕೈಗೊಂಡಿವೆ.

ಟಿಪ್ಪು ಜಯಂತಿ ಸರಳವಾಗಿ ಆಚರಿಸಲು ಕಳೆದ ವಾರ ತಾಲೂಕು ಕಚೇರಿಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಭೆಗೆ ಬಿಎಸ್ಪಿ ಸೇರಿದಂತೆ ಕೆಲ ಮುಸ್ಲಿಂ ಸಂಘಟನೆ ಮತ್ತು ಕೆಲ ಪ್ರಗತಿಪರ ಸಂಘಟನೆಗಳ ಮುಖಂಡರನ್ನು ಆಹ್ವಾನಿಸದೇ ತಹಶೀಲ್ದಾರ್ ಕಾಟಾಚಾರಕ್ಕೆ ಪೂರ್ವಭಾವಿ ಸಭೆ ಕರೆದಿದ್ದಾರೆಂಬ ಕಾರಣಕ್ಕೆ ಬಿಎಸ್ಪಿ ಸೇರಿದಂತೆ ವಿವಿಧ ಸಂಘಟನೆಗಳು ವಿರೋಧಿಸಿದ್ದವು. ಬಳಿಕ ಗುರುವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದ ಶಾಂತಿ ಸಭೆಯಲ್ಲಿ ಬಿಎಸ್ಪಿ ಮತ್ತು ಮುಸ್ಲಿಂ ಸಂಘಟನೆಗಳ ಮುಖಂಡರು ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕುವುದಾಗಿ ತಿಳಿಸಿ ಸಭೆಯಿಂದ ಹೊರ ಬಂದಿದ್ದರು ಎನ್ನಲಾಗಿದೆ.

ಶಾಂತಿ ಸಭೆಯಲ್ಲಿ ನಡೆದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಿಪಿಐ ಜಗದೀಶ್, ಪಿಎಸ್ಸೈ ಕೆ.ಟಿ.ರಮೇಶ್ ಅವರು ಬಹಿಷ್ಕಾರದ ವಿಷಯವನ್ನು ತಹಶೀಲ್ದಾರರ ಗಮನಕ್ಕೆ ತಂದಿದ್ದಾರೆ. ಅಲ್ಲದೇ ಅಂಜುಮಾನ್-ಇ-ಇಸ್ಲಾಮಿ ಮುಖಂಡರು ಟಿಪ್ಪು ಜಯಂತಿ ಆಚರಣೆಯ ಪೂರ್ವಭಾವಿ ಸಭೆಗೆ ಮುಸ್ಲಿಂ ಮುಖಂಡರನ್ನೇಕೆ ಆಹ್ವಾನಿಸಿಲ್ಲವೆಂದು ಮನವಿಯಲ್ಲಿ ತಹಶೀಲ್ದಾರರಿಗೆ ಪ್ರಶ್ನಿಸಿದ್ದಾರೆ. ನಂತರ ತಹಶೀಲ್ದಾರ್ ಪದ್ಮನಾಭ ಶಾಸ್ತ್ರಿ ಅವರು ಕೂಡಲೇ ಅಧಿಕಾರಿಗಳ ಸಭೆ ಕರೆದು ತಾಲೂಕು ಕಚೆರಿಯಲ್ಲಿ ಕಾರ್ಯಕ್ರಮ ಬೇಡ. ಪ್ರತಿ ವರ್ಷ ನಡೆಸಿದಂತೆ ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ಆಯೋಜಿಸುವ ತೀರ್ಮಾನಕ್ಕೆ ಬಂದರು. ಈ ಹೊತ್ತಿಗಾಗಲೇ ಟಿಪ್ಪು ಜಯಂತಿಯ ಆಹ್ವಾನ ಪತ್ರಿಕೆ ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಹಾಗೂ ಅಧಿಕಾರಿಗಳಿಗೆ ತಲುಪಿಯಾಗಿತ್ತು. ಹಾಗಾಗಿ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲಾತಾಣದಲ್ಲಿ ಪ್ರಕಟಿಸಲು ಕ್ರಮ ಕೈಗೊಳ್ಳಲಾಯಿತು.

ತಾಲೂಕು ಆಡಳಿತ ಅಡ್ಯಂತಾಯ ರಂಗಮಂದಿರದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಸಲು ತೀರ್ಮಾನ ಕೈಗೊಂಡ ಬಗ್ಗೆ ತಿಳಿದ ಬಿಎಸ್ಪಿ ಹಾಗು ವಿವಿಧ ಸಂಘಟನೆಗಳ ಮುಖಂಡರು ಟಿಪ್ಪು ಜಯಂತಿಯನ್ನು ಕಾಟಾಚಾರಕ್ಕೆ ನಡೆಸಲಾಗುತ್ತಿದೆ. ಕೊನೆ ಗಳಿಗೆಯಲ್ಲಿ ತಾಲೂಕು ಆಡಳಿತ ಕಣ್ಣೊರೆಸುವ ತಂತ್ರ ಮಾಡಿದೆ. ಅಲ್ಲದೇ ಈ ಬಾರಿಯ ಟಿಪ್ಪು ಜಯಂತಿಗೆ ಬಿಜೆಪಿ ಹಾಗೂ ಹಿಂದುತ್ವ ಸಂಘಟನೆಯ ವಿರೋಧ ಕೂಡ ವ್ಯಕ್ತವಾಗಿಲ್ಲ. ಆದರೂ ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಿ ಬಾರಿ ಪ್ರಮಾಣದಲ್ಲಿ ಬಂದೂಬಸ್ತ್ ನಿಯೋಜಿಸಿರುವ ಆವಶ್ಯಕತೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತದ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕುತ್ತೇವೆಂದು ಬಿಎಸ್ಪಿ ಮುಖಂಡ ಝಾಕಿರ್ ಹುಸೇನ್, ಯು.ಬಿ.ಮಂಜಯ್ಯ, ಲೋಕವಳ್ಳಿ ರಮೇಶ್, ಮುಸ್ಲಿಂ ಸಂಘಟನೆಯ ಶಬ್ಬೀರ್ ಅಹ್ಮದ್ ಬೇಗ್, ಯಕೂಬ್ ಗೋಣಿಗದ್ದೆ, ಎ.ಸಿ.ಅಯೂಬ್ ಹಾಜಿ ತಿಳಿಸಿದ್ದು,  ಈ ತಿಂಗಳ ಕೊನೆಯ ವಾರದಲ್ಲಿ ಬಿಎಸ್ಪಿ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳು ಸೇರಿಕೊಂಡು ಅದ್ದೂರಿಯಾಗಿ ಟಿಪ್ಪು ಜಯಂತಿ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News