ಮೈಸೂರಿನ ಪಾಸ್‍ಪೋರ್ಟ್ ಸೇವಾ ಕೇಂದ್ರದಲ್ಲಿ ಕೊಡಗಿನವರಿಗೂ ಪಾಸ್‍ಪೋರ್ಟ್: ಸಂಸದ ಪ್ರತಾಪ್ ಸಿಂಹ

Update: 2018-11-09 12:21 GMT

ಮಡಿಕೇರಿ, ನ.9 : ಮೈಸೂರಿನ ‘ಪೋಸ್ಟ್ ಆಫೀಸ್ ಪಾಸ್‍ಪೋರ್ಟ್ ಸೇವಾ ಕೇಂದ್ರ’ದಲ್ಲಿ ಕೊಡಗು ಜಿಲ್ಲೆಯ ಜನತೆಗೆ ಪಾಸ್‍ಪೋರ್ಟ್ ಸೇವೆಯನ್ನು ಒದಗಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಪಾಸ್‍ಪೋರ್ಟ್ ಅಪೇಕ್ಷಕರು ಪಾಸ್‍ಪೋರ್ಟ್ ಸೇವೆಗಾಗಿ ಮಂಗಳೂರು ಅಥವಾ ಬೆಂಗಳೂರಿನ ಪಾಸ್‍ಪೋರ್ಟ್ ಕೇಂದ್ರವನ್ನು ಸಂಪರ್ಕಿಸಬೇಕಾಗಿತ್ತು. ಇದರಿಂದಾಗಿ ಪಾಸ್‍ಪೋರ್ಟ್ ಅಪೇಕ್ಷಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಆದ್ದರಿಂದ ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯ ಹಾಗೂ ಸಂಪರ್ಕ ಸಚಿವಾಲಯದ ಸಹಯೋಗದೊಂದಿಗೆ ಮೈಸೂರಿನ ಮೇಟಗಳ್ಳಿ ಅಂಚೆ ಕಚೇರಿಯಲ್ಲಿ ಸ್ಥಾಪನೆಗೊಂಡಿರುವ ‘ಪೋಸ್ಟ್ ಆಫೀಸ್ ಪಾಸ್‍ಪೋರ್ಟ್ ಸೇವಾ ಕೇಂದ್ರ’ದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೊಡಗು ಜಿಲ್ಲೆಯ ಪಾಸ್‍ಪೋರ್ಟ್ ಅಪೇಕ್ಷಕರಿಗೆ ಪಾಸ್‍ಪೋರ್ಟ್ ಸೇವೆಯನ್ನು ಒದಗಿಸುವಂತೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಸಲ್ಲಿಸಲಾಗಿತ್ತು ಎಂದು ಪ್ರತಾಪ್‍ಸಿಂಹ ವಿವರಿಸಿದ್ದಾರೆ. 

ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯ ಮೈಸೂರು ‘ಪೋಸ್ಟ್ ಆಫೀಸ್ ಪಾಸ್‍ಪೋರ್ಟ್ ಸೇವಾ ಕೇಂದ್ರ’ದಲ್ಲಿ ಕೊಡಗು ಜಿಲ್ಲೆಯ ಪಾಸ್‍ಪೋರ್ಟ್ ಅಪೇಕ್ಷಕರಿಗೆ ಪಾಸ್‍ಪೋರ್ಟ್ ಸೇವೆಯನ್ನು ಒದಗಿಸಿಕೊಟ್ಟಿದೆ ಎಂದಿರುವ ಅವರು, ಈ ಹಿನ್ನೆಲೆಯಲ್ಲಿ  ಕೊಡಗು ಜಿಲ್ಲೆಯ ಜನತೆಯ ಪರವಾಗಿ ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಕೊಡಗು ಜಿಲ್ಲೆಯ ಪಾಸ್‍ಪೋರ್ಟ್ ಅಪೇಕ್ಷಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರತಾಪ್‍ಸಿಂಹ ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News