ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಟಿಪ್ಪು ಸುಲ್ತಾನ್ ಕೊಡುಗೆ ಅಪಾರ: ಚಟ್ನಳ್ಳಿ ಮಹೇಶ್ ಶ್ಲಾಘನೆ

Update: 2018-11-10 11:05 GMT

ಮಡಿಕೇರಿ, ನ.10 : ದೇಶಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರಲ್ಲಿ ಟಿಪ್ಪು ಸುಲ್ತಾನ್ ಒಬ್ಬರು. ಅಪ್ರತಿಮ ದೇಶಭಕ್ತ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಪ್ರಾರಂಭಿಸಿದ್ದೇ ಟಿಪ್ಪು ಸುಲ್ತಾನ್. ಮೂರು ಭಾರಿ ಬ್ರಿಟೀಷ್ ರೊಂದಿಗೆ ಯುದ್ಧ ಮಾಡಿದ್ದರು. ಈ ಯುದ್ಧಗಳು ಆಂಗ್ಲೋ-ಮೈಸೂರು ಯುದ್ಧ ಎಂದೇ ಇತಿಹಾಸದಲ್ಲಿ ದಾಖಲಾಗಿವೆ ಎಂದು ವಾಗ್ಮಿ ಚಟ್ನಳ್ಳಿ ಮಹೇಶ್ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಮೂರನೇ ಮಹಾಯುದ್ಧದ ಸಂದರ್ಭ ಲಾರ್ಡ್ ಕಾರ್ನ್ ವಾಲಿಸ್ ಸೈನ್ಯದ ಬೆಂಗಾವಲನ್ನು ಕುಸಿಯುವಂತೆ ಮಾಡಿ, ಅಂದಿನ ಯುದ್ಧ ವಿರಾಮ ಒಪ್ಪಂದ ಪ್ರಕಾರ ಬ್ರಿಟೀಷ್ ಕಂಪನಿಗೆ ಕೊಡಬೇಕಾದ ಹಣ ಭರಿಸಲು ಸಾಧ್ಯವಾಗದೆ, ಹೆತ್ತ ಮಕ್ಕಳನ್ನೇ ಒತ್ತೆ ಇಟ್ಟ ಪ್ರಸಂಗ ಟಿಪ್ಪು ಸುಲ್ತಾನ್ ರಾಷ್ಟ್ರಪ್ರೇಮಕ್ಕೆ ಜ್ವಲಂತ ಸಾಕ್ಷಿ ಎಂದು ಮಹೇಶ್ ಅವರು ತಿಳಿಸಿದರು.

ಮೈಸೂರು ರಾಜ್ಯದ ಅಭಿವೃದ್ಧಿಗೆ ಟಿಪ್ಪು ಸುಲ್ತಾನ್ ದೂರ ದೃಷ್ಟಿಹೊಂದಿದ್ದರು. ಆ ನಿಟ್ಟಿನಲ್ಲಿ ಕೃಷಿ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ರೈತರ ಸಂಕಷ್ಟ ನಿವಾರಿಸಲು ರೇಷ್ಮೆ ಬೆಳೆ ಪರಿಚಯಿಸಿದರು ಎಂದು ಮಹೇಶ್ ಅವರು ನುಡಿದರು.  ಟಿಪ್ಪು ಸುಲ್ತಾನ್ ವೀರಸೇನಾನಿ. ಟಿಪ್ಪು ಶ್ರೀರಂಗಪಟ್ಟಣದ ಅರಸು ಮಾತ್ರವಾಗಿರದೇ ಬ್ರಿಟೀಷ್‍ರ ಈಸ್ಟ್ ಇಂಡಿಯ ಕಂಪನಿಯ ಆಡಳಿತದಲ್ಲಿ ನಲುಗುತ್ತಿದ್ದ ರಾಷ್ಟ್ರವನ್ನು ಅವರ ಕಪಿಮುಷ್ಟಿಯಿಂದ ಬಿಡಿಸಲು ಕನಸು ಕಂಡ ಕಾರಣಿಕ. ಬ್ರಿಟೀಷರೊಂದಿಗೆ ನಿರಂತರ ಸೆಣಸಿದ ಛಲಗಾರ. ಹಗಲಿರುಳು ಬ್ರಿಟೀಷರನ್ನು ದುಃಸ್ವಪ್ನದಂತೆ ನಿರಂತರ ಕಾಡಿದ ದೇಶ ಪ್ರೇಮಿಯಾಗಿದ್ದರು ಎಂದರು.  

‘ಇಂದಿನ ಕೃಷ್ಣರಾಜ ಸಾಗರ (ಕೆಆರ್ ಎಸ್) ನಿರ್ಮಾಣಕ್ಕೆ 1794ರಲ್ಲಿ ಶಂಕುಸ್ಥಾಪನೆ ಹಾಗೂ ರೇಷ್ಮೆ ಪರಿಚಯಿಸಿದ ಕೀರ್ತಿ ಟಿಪ್ಪು ಸುಲ್ತಾನ್‍ಗೆ ಸಲ್ಲುತ್ತದೆ. ಹಾಗೆಯೇ ನೂರಾರು ಕೆರೆಗಳನ್ನು ನಿರ್ಮಿಸಿ ಕುಡಿಯುವ ನೀರು ಮತ್ತು ಕೃಷಿಗೆ ಆದ್ಯತೆ ನೀಡಿದ್ದರು ಎಂದು ಮಹೇಶ್ ಅವರು ಸ್ಮರಿಸಿದರು.

ಟಿಪ್ಪು ಪಾಳೆಗಾರಿಕೆ ಮತ್ತು ಉಳಿಗಮಾನ್ಯ ಪದ್ಧತಿಯನ್ನು ವಿರೋಧಿಸುತ್ತಿದ್ದರು, ಕೃಷಿ ವಾಣಿಜ್ಯಿಕರಣ ಜೊತೆಗೆ ಶೇ 100 ರಷ್ಟು ಪಾನನಿಷೇಧ ಮಾಡಿದ್ದರು. ಬಡ್ಡಿ ರಹಿತ ಸಾಲ, ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಟಿಪ್ಪು ಸುಲ್ತಾನ್ ಕಾಲದಲ್ಲಿಯೇ ಕಾಣಬಹುದು  ಎಂದು ಅವರು ಹೇಳಿದರು. ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಮತ್ತು ಸ್ವಾತಂತ್ರ್ಯ ನೀಡಲು ಶ್ರಮಿಸಿದ ಟಿಪ್ಪು ಸುಲ್ತಾನ್, ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯ ಸಂಕೇತ ಎಂದು ಮಹೇಶ್ ಅವರು ಪ್ರತಿಪಾದಿಸಿದರು. 

ರಾಷ್ಟ್ರದ ಹೈದರಾಬಾದ್‍ನ ನಿಝಾಮರು ಸೇರಿದಂತೆ ಹಲವರು ಬ್ರಿಟೀಷರ ಸಹಾಯಕ ಸೈನ್ಯ ಪದ್ಧತಿ ಒಪ್ಪಿಕೊಂಡು ರಾಜ್ಯಭಾರ ಮಾಡುತ್ತಿದ್ದರು, ಆದರೆ ಟಿಪ್ಪು ಇದಕ್ಕೆ ವಿರುದ್ಧವಾಗಿದ್ದ, ದೇಶದಲ್ಲಿ ತಳವೂರಲು ಪ್ರಯತ್ನಿಸುತ್ತಿದ್ದ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದ, ಜೊತೆಗೆ ರಾಕೆಟ್ ಕ್ಷಿಪಣಿ ನಿರ್ಮಾಣ ಮಾಡಿದ್ದರು ಎಂದು ಅವರು ಹೇಳಿದರು.

ಟಿಪ್ಪು ಆಡಳಿತಾವಧಿಯಲ್ಲಿಯೇ ತಮ್ಮ ಪ್ರಾಂತ್ಯದಲ್ಲಿ ಸಾಮಾಜಿಕ ಮತ್ತು ರಾಜಕೀಯ ಜಾಗೃತಿ ಮೂಡಿಸಿದ್ದ, ಹಿಂದೆ ಪಾಳೆಗಾರರು ರಾಜ್ಯಭಾರ ಮಾಡುತ್ತಿದ್ದರು. ಅದನ್ನು ಬಿಡಿಸಲು ಟಿಪ್ಪು ಪ್ರಯತ್ನಿಸಿದ, ಪಾಳೆಗಾರರು, ಸಂಸ್ಥೆಗಳ ವಶದಲ್ಲಿಯೇ ಭೂಮಿ ಇದ್ದವು, ಆದರೆ ಎಲ್ಲಾ ಬಡವರಿಗೂ ಉದ್ಯೋಗ, ಭೂಮಿ ಹಂಚಿಕೆ, ಸಮಾನ ಅವಕಾಶ ಕಲ್ಪಿಸಲು ಟಿಪ್ಪು ಪ್ರಯತ್ನಿಸಿದ್ದ ಎಂಬುದನ್ನು ಮರೆಯುವಂತಿಲ್ಲ ಎಂದರು.

ಬ್ರಿಟೀಷರ ವಿರುದ್ಧ ನಾಲ್ಕು ಯುದ್ದ ಮಾಡಿದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ. ಉಳುವವನೆ ಹೊಲದೊಡೆಯ ಎಂಬುದನ್ನು ಪ್ರಥಮ ಬಾರಿಗೆ ಸಾರಿದ್ದರು. ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ್ದರು ಎಂದು ಮಹೇಶ್ ಅವರು ವಿವರಿಸಿದರು.   

ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಲಾಯಿತು. ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿ.ಪಂ.ಸಿಇಒ ಪ್ರಿಯ, ಜಿ.ಪಂ.ಸದಸ್ಯರಾದ ಕೆ.ಪಿ.ಚಂದ್ರಕಲಾ, ಸುನಿತಾ, ಕುಮುದ ಧರ್ಮಪ್ಪ, ನಗರಸಭಾ ಸದಸ್ಯರಾದ ಜುಲೇಕಾಬಿ ಅಮಿನ್ ಮೊಹಿಸಿನ್, ಪೀಟರ್, ಮನ್ಸೂರ್, ಉದಯ ಕುಮಾರ್, ಯತೀಶ್ ಕುಮಾರ್, ಉಸ್ಮಾನ್, ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಪ್ರವೀಣ್ ಕುಮಾರ್, ಜಗದೀಶ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರ ರಾಜ್, ದರ್ಶನ್, ಧಾರ್ಮಿಕ ಮುಖಂಡರು, ನಾನಾ ಇಲಾಖೆ ಅಧಿಕಾರಿಗಳು ಇತರರು ಹಾಜರಿದ್ದರು. 

ಕಾರ್ಯಕ್ರಮವನ್ನು ಉದ್ಘಾಟಿಸಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರು ಗೈರು ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News