ಚಾಮರಾಜನಗರ: ಹಣ ಇಲ್ಲದೇ ನಿಲ್ಲಬೇಕಿದ್ದ ಮದುವೆಗೆ ಆಸರೆಯಾದ ಪಿಎಸ್ಐ

Update: 2018-11-10 18:35 GMT

ಚಾಮರಾಜನಗರ,ನ.10: ವಧುವಿನ ಮನೆಯವರಿಂದ ಹಣ ಹೊಂದಿಸಲಾಗದೆ ಮದುವೆ ನಿಲ್ಲುತ್ತಿರುವ ಮಾಹಿತಿ ತಿಳಿದ ಪಿಎಸ್ಐ ತಾವೇ ಮುಂದೆ ನಿಂತು ಮದುವೆ ಮಾಡಿಸಿದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ನಡೆದಿದೆ.

ತಾಲೂಕಿನ ಜ್ಯೋತಿಗೌಡನಪುರದ ಸಿದ್ದರಾಜಶೆಟ್ಟಿ ಪುತ್ರಿ ಅಂಬಿಕಾ ಹಾಗೂ ತಮಿಳುನಾಡಿನ ತಾಳವಾಡಿ ಪಿರ್ಕಾದ ಪಾಳ್ಯ ಗ್ರಾಮದ ರಾಜಣ್ಣನ ಪುತ್ರ ರವೀಂದ್ರ ಎಂಬುವವರಿಗೆ ನ.8, 9 ರಂದು ವಿವಾಹ ನಿಶ್ಚಯವಾಗಿತ್ತು. ಎರಡೂ ಕಡೆಯವರು ಮದುವೆ ತಯಾರಿಯಲ್ಲಿದ್ದರು. ತೆರಕಣಾಂಬಿಯ ವೆಂಕಟೇಶ್ವರ ಭವನದಲ್ಲಿ ವಿವಾಹ ನಡೆಸಲು ಮುಂಗಡ ಹಣ ನೀಡಿ ಲಗ್ನ ಪತ್ರಿಕೆಯನ್ನು ಮುದ್ರಿಸಿ ಬಂಧು ಬಳಗದವರಿಗೆ ಹಂಚಲಾಗಿತ್ತು. ಆದರೆ ವಧುವಿನ ತಂದೆ ರಾಜಣ್ಣನಿಗೆ 2 ಲಕ್ಷ ರೂ. ಸಾಲ ಕೊಡುತ್ತೇನೆ ಎಂದಿದ್ದ ವ್ಯಕ್ತಿ ಕೈ ಕೊಟ್ಟಿದ್ದ. 

ಇದರಿಂದ ಖರ್ಚು ವೆಚ್ಚಕ್ಕೆ ಹಣ ಹೊಂದಿಸಲಾಗದೆ ನಿಗದಿತ ದಿನದಂದು ಮದುವೆ ಮಾಡಿಕೊಡಲು ಸಾಧ್ಯವಾಗಲ್ಲ ಎಂದು ವರನ ಕಡೆಯವರಿಗೆ ವಧು ಮನೆಯವರು ತಿಳಿಸಿದ್ದರು. ಬೇಸತ್ತ ವರ ರವೀಂದ್ರ ಮುಂದಿನ ದಿನಗಳಲ್ಲಿ ತೊಂದರೆಯಾಗದಿರಲೆಂದು 4 ದಿನದ ಹಿಂದೆ ನಗರದ ಪೂರ್ವ ಠಾಣೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ನಗರದ ಪೂರ್ವ ಠಾಣೆಯ ಪಿಎಸ್​ಐ ಪುಟ್ಟರಾಜು ಅವರು ವರ ಮತ್ತು ವಧುವಿನ ಕಡೆಯವರಿಬ್ಬರನ್ನೂ ಕರೆಸಿ ವಿಚಾರಣೆಗೊಳಪಡಿಸಿದಾಗ ಹಣವಿಲ್ಲದ ಕಾರಣ ಮದುವೆ ಮಾಡಿ ಕೊಡಲಾಗುತ್ತಿಲ್ಲ ಎಂದು ತಿಳಿದು ಬಂದಿದೆ. ಬಳಿಕ ಪಿಎಸ್​ಐ ಅವರೇ ವೈಯಕ್ತಿಕವಾಗಿ 20 ಸಾವಿರ ರೂ. ಹಣವನ್ನು ವಧುವಿನ ತಂದೆಗೆ ನೀಡಿ ನಿಗದಿತ ದಿನವೇ ಮದುವೆ ಮಾಡಿಕೊಡಬೇಕು ಎಂದು ಸಲಹೆ ನೀಡಿದ್ದರು. ಜೊತೆಗೆ ಕೈಲಾದಷ್ಟು ಸಹಾಯ ಮಾಡುವಂತೆ ತಮ್ಮ ಸಿಬ್ಬಂದಿಗಳಿಗೆ ಹೇಳಿದ್ದರಿಂದ ಠಾಣೆಯಲ್ಲಿಯೇ ಸುಮಾರು 40 ಸಾವಿರ ರೂ. ಹಣ ಸಂಗ್ರಹಿವಾಗಿತ್ತು. ಇದರಿಂದ ನಿಗದಿತ ಮುಹೂರ್ತದಲ್ಲಿ ಮದುವೆ ಮಾಡಲು ವಧುವಿನ ಮನೆಯವರಿಗೆ ಸಾಧ್ಯವಾಗಿದ್ದು, ಪೊಲೀಸರ ಸಹಾಯ ಹಸ್ತದಿಂದ ಮದುವೆ ನೆರವೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News