ಅಧಿಕಾರ ಕೇಂದ್ರೀಕರಣ ಭಾರತದ ಪ್ರಮುಖ ಸಮಸ್ಯೆ: ಆರ್ ಬಿಐ ಮಾಜಿ ಗವರ್ನರ್ ರಘುರಾಮ ರಾಜನ್

Update: 2018-11-11 08:16 GMT

ಹೊಸದಿಲ್ಲಿ, ನ.11: ಭಾರತದ ರಾಜಕೀಯ ನಿರ್ಧಾರಗಳಲ್ಲಿ ಅಧಿಕಾರದ ಅತಿಯಾದ ಕೇಂದ್ರೀಕರಣವು ದೇಶದ ಪ್ರಮುಖ ಸಮಸ್ಯೆ ಎಂದು ದೇಶದ ಹಿರಿಯ ಅರ್ಥಶಾಸ್ತ್ರಜ್ಞ ಮತ್ತು ಆರ್ ಬಿಐ ಮಾಜಿ ಗವರ್ನರ್ ರಘುರಾಮ ರಾಜನ್ ಅಭಿಪ್ರಾಯಪಟ್ಟಿದ್ದಾರೆ.

ದೇಶದ ಕೇಂದ್ರೀಯ ಬ್ಯಾಂಕ್ ಹಾಗೂ ಸರ್ಕಾರದ ನಡುವೆ ಸ್ವಾಯತ್ತತೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಮುಸುಕಿನ ಗುದ್ದಾಟದ ಹಿನ್ನೆಲೆಯಲ್ಲಿ ರಾಜನ್ ಈ ಹೇಳಿಕೆ ನೀಡಿದ್ದಾರೆ.

ಬರ್ಕ್‍ಲೆಯಲ್ಲಿರುವ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಅನಾವರಣಗೊಂಡ ಏಕತೆಯ ಪುತ್ಥಳಿಯನ್ನು ಉಲ್ಲೇಖಿಸಿ, ಇಂಥ ಯೋಜನೆಗೂ ಪ್ರಧಾನಿ ಸಚಿವಾಲಯದ ಅನುಮೋದನೆ ಬೇಕಾಗುತ್ತದೆ ಎಂದು ಹೇಳಿದಾಗ ಸಭಿಕರು ನಗೆಗಡಲಲ್ಲಿ ತೇಲಿದರು.

ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 143ನೇ ಜಯಂತಿ ಸಂದರ್ಭದಲ್ಲಿ ಅಕ್ಟೋಬರ್ 31ರಂದು ಗುಜರಾತ್‍ನ ನರ್ಮದಾ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿಶ್ವದ ಅತಿ ಎತ್ತರದ ಅಂದರೆ 182 ಮೀಟರ್ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.

ಆರ್‍ಬಿಐ ಗವರ್ನರ್ ಹುದ್ದೆಯನ್ನು ಮೂರು ವರ್ಷ ಕಾಲ ನಿಭಾಯಿಸಿದ ಬಳಿಕ ರಾಜನ್, 2016ರಲ್ಲಿ ಅಧ್ಯಾಪನ ವೃತ್ತಿಗೆ ಮರಳಿದ್ದರು.

ಯೋಜನೆಗಳು ಪೂರ್ಣಗೊಳ್ಳುವುದು ಕೂಡಾ ಪ್ರಧಾನಿ ನಿರ್ಧಾರವನ್ನು ಅವಲಂಬಿಸಿರುತ್ತದೆ ಎಂದು ಹೇಳಿದ ಅವರು, "ಉದಾಹರಣೆಗೆ, ದೊಡ್ಡ ಪುತ್ಥಳಿಯನ್ನು ನಾವು ಸಮಯಕ್ಕೆ ಸರಿಯಾಗಿ ಮುಗಿಸಿದ್ದೇವೆ" ಎಂದು ಹೇಳಿದಾಗಲೂ ಪ್ರೇಕ್ಷಕರು ನಗೆಗಡಲಲ್ಲಿ ತೇಲಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News