ಸಿಎಂ ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರು: ತಜ್ಞ ವೈದ್ಯರಿಂದ ಚಿಕಿತ್ಸೆ

Update: 2018-11-11 14:33 GMT

ಮೈಸೂರು,ನ.11: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಏಳು ಜನ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೀರಂಬಳ್ಳಿ ಬಳಿಯ ಕಬಿನಿ ಹಿನ್ನೀರಿನಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಪತ್ನಿ ಅನಿತಾ, ಪುತ್ರ ನಿಖಿಲ್ ಜೊತೆ ವಾಸ್ತವ್ಯ ಹೂಡಿರುವ ಅವರು ವೈದ್ಯರ ಸಲಹೆ ಮೇಲೆ ವಿಶ್ರಾಂತಿ ಪಡೆಯುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ವಾಸ್ತವ್ಯ ಹೂಡಿರುವ ಮುಖ್ಯಮಂತ್ರಿಗ ದೇಹ ಸ್ಥಿತಿಯಲ್ಲಿ ವ್ಯತ್ಯಾಸ ಉಂಟಾಗಿ ಆರೋಗ್ಯ ಸಮಸ್ಯೆಯಾಗಿದೆ ಎಂದು ಹೇಳಲಾಗುತ್ತಿದೆ. ತಕ್ಷಣ ಬೆಂಗಳೂರಿನಿಂದ ತಜ್ಞ ವೈದ್ಯರನ್ನು ಕರೆಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

ಕಳೆದ ಹಲವು ದಿನಗಳ ಹಿಂದೆ ಹೃದಯ ಬೈಪಾಸ್ ಸರ್ಜರಿ ಮಾಡಿಸಿಕೊಂಡಿರುವ ಅವರಿಗೆ ಮತ್ತೆ ಸಮಸ್ಯೆ ಎದುರಾಗಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಮುಖ್ಯಮಂತ್ರಿಯನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡುತ್ತಿಲ್ಲ. ಈಗಾಗಲೇ ರೆಸಾರ್ಟ್ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ತಜ್ಞ ವೈದ್ಯರು ಚಿಕಿತ್ಸೆ ನೀಡಿ ಅಲ್ಲೇ ಮೊಕ್ಕಾಂ ಹೂಡಿದ್ದಾರೆ.

ಈ ಮಧ್ಯೆ ಪುತ್ರ ನಿಖಿಲ್ ಕುಮಾರಸ್ವಾಮಿ ಕಬಿನಿ ಹಿನ್ನೀರಿನಲ್ಲಿ ಸಫಾರಿ ಮಾಡಿದ್ದಾರೆ. ಸದ್ಯ ವೈದ್ಯರ ಸಲಹೆಯಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News