ಸೇನೆ ಮತ್ತು ಪೊಲೀಸ್ ಪರಸ್ಪರ ಗೌರವಿಸಬೇಕು: ಬೊಮ್ಡಿಲಾ ಘಟನೆ ಕುರಿತಂತೆ ಕಿರಣ್ ರಿಜಿಜು

Update: 2018-11-11 15:48 GMT

ಹೊಸದಿಲ್ಲಿ,ನ.11: ಅರುಣಾಚಲ ಪ್ರದೇಶದ ಬೊಮ್ಡಿಲಾ ಪಟ್ಟಣದಲ್ಲಿ ಸೇನೆ ಮತ್ತು ಪೊಲೀಸ್ ಸಿಬ್ಬಂದಿಗಳ ನಡುವಿನ ಘರ್ಷಣೆಗಳ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಅವರು,ಇವೆರಡೂ ಸಂಸ್ಥೆಗಳು ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಪರಸ್ಪರ ಗೌರವಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಸೇನೆಯು ನಮ್ಮ ತಾಯ್ನಾಡನ್ನು ರಕ್ಷಿಸುತ್ತಿರುವ ದೇಶದ ಹೆಮ್ಮೆಯಾಗಿದೆ ಮತ್ತು ಪೊಲೀಸರು ಆಂತರಿಕ ಭದ್ರತೆಯ ಸ್ತಂಭವಾಗಿದ್ದಾರೆ ಎಂದು ರಿಜಿಜು ರವಿವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇವೆರಡೂ ಮಹಾನ್ ಸಂಸ್ಥೆಗಳನ್ನು ನಾವು ಗೌರವಿಸಬೇಕು. ಪ್ರತಿಯೋರ್ವ ವ್ಯಕ್ತಿ ಮತ್ತು ಸಂಸ್ಥೆ ಕಾನೂನಿನಡಿಯ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ನಾವು ಪರಸ್ಪರರನ್ನು ಗೌರವಿಸೋಣ ಮತ್ತು ಸದೃಢಗೊಳಿಸೋಣ ಎಂದಿದ್ದಾರೆ.

 ಕಳೆದ ವಾರ ಕೆಲವು ಯೋಧರು ಬೊಮ್ಡಿಲಾ ಪೊಲೀಸ್ ಠಾಣೆಯಲ್ಲಿ ದಾಂಧಲೆ ನಡೆಸಿ ನಷ್ಟವನ್ನುಂಟು ಮಾಡಿದ್ದಲ್ಲದೆ,ಪೊಲೀಸ್ ಸಿಬ್ಬಂದಿಗಳು ಮತ್ತು ನಾಗರಿಕರ ಮೇಲೆ ದಾಳಿಗಳನ್ನು ನಡೆಸಿದ್ದರು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಿಜಿಜು ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭ ಸೇನೆ ಮತ್ತು ಪೊಲೀಸ್ ಸಿಬ್ಬಂದಿಗಳ ನಡುವೆ ಘರ್ಷಣೆಗಳ ಬಳಿಕ ಉಂಟಾಗಿದ್ದ ಸ್ಥಿತಿಯನ್ನು ಪರಿಶೀಲಿಸಿ ವಿವರಗಳನ್ನು ಪಡೆದುಕೊಂಡಿದ್ದರು.

ನಮ್ಮ ಸಮವಸ್ತ್ರಧಾರಿಗಳು ದೇಶಕ್ಕಾಗಿ ತಮ್ಮ ವೈಯಕ್ತಿಕ ಸುಖ ಮತ್ತು ಕುಟುಂಬವನ್ನು ತ್ಯಾಗ ಮಾಡುತ್ತಾರೆ. ಪ್ರಾಥಮಿಕ ಮಾನವ ತಪ್ಪುಗಳು ಸದಾ ನಡೆಯ್ತುಲೇ ಇರುತ್ತವೆ ಮತ್ತು ವಿಷಯವನ್ನು ಬಗೆಹರಿಸಲಾಗುವುದು. ಪೂರ್ವಗ್ರಹದ ಮನಃಸ್ಥಿತಿಯೊಂದಿಗೆ ಸತ್ಯಾಂಶಗಳನ್ನು ತಿಳಿಯದೆ ಹಗುರ ಹೇಳಿಕೆಗಳನ್ನು ನೀಡುವ ಮೂಲಕ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡದಂತೆ ನಾನು ಪ್ರತಿಯೊಬ್ಬರನ್ನೂ ಕೋರುತ್ತೇನೆ ಎಂದು ರಿಜಿಜು ಬರೆದಿದ್ದಾರೆ.

ಬುದ್ಧ ಮಹೋತ್ಸವ ಸಂದರ್ಭದಲ್ಲಿ ಕೆಲವು ಯೋಧರು ನಾಗರಿಕರು ಮತ್ತು ಪೊಲೀಸ್ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದರು. ಸ್ಥಳಕ್ಕೆ ತೆರಳಿದ್ದ ಠಾಣಾಧಿಕಾರಿ ಇಬ್ಬರು ಯೋಧರನ್ನು ಠಾಣೆಗೆ ಕರೆತಂದಿದ್ದರು. ಇದು ಗೊತ್ತಾದಾಗ ಕೆಲವು ಯೋಧರು ಠಾಣೆಗೆ ಆಗಮಿಸಿ ದಾಂಧಲೆೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News