ಹಿಂದುಳಿದ ವರ್ಗದವರಿಂದ ಶಿಕ್ಷಣ ಸಂಸ್ಥೆಗಳ ಉದಯವಾಗಲಿ: ಮಾಜಿ ಸಿಎಂ ಸಿದ್ದರಾಮಯ್ಯ

Update: 2018-11-11 17:15 GMT

ಚಿಕ್ಕಮಗಳೂರು, ನ.11: ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ ನೀಡಬೇಕೆಂಬ ಬಗ್ಗೆ ಕೇವಲ ಸಮಾವೇಶಗಳನ್ನು ಆಯೋಜಿಸಿ ಭಾಷಣ ಮಾಡಿದರೆ ಸಾಲದು. ಕುರುಬ ಸಮುದಾಯದಿಂದ ನಾಡಿನಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಬೇಕು. ಆಗ ಮಾತ್ರ ಈ ಶೋಷಿತ ಸಮುದಾಯಗಳು ಶೈಕ್ಷಣಿವಾಗಿ ಪ್ರಗತಿ ಸಾಧಿಸಿ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಮಾಜಿ ಸಿಎಂ ಹಾಗೂ ಮೈತ್ರಿ ಸರಕಾರ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ರವಿವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿ ಎದುರು ನೂತನವಾಗಿ ನಿರ್ಮಿಸಲಾಗಿರುವ ಕನಕ ಭವನ ಕಟ್ಟಡದ ಲೋಕಾರ್ಪಣೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯ ಕುರುಬ ಸಮುದಾಯಕ್ಕೆ ರವಿವಾರದ ದಿನ ಐತಿಹಾಸಿಕ ದಿನವಾಗಿದೆ. ಕುರುಬ ಸಂಘ ಸ್ಥಾಪನೆಯಾದ ಹಾದಿಯಲ್ಲಿ ಸಮುದಾಯದ ಅನೇಕ ನಾಯಕರ ಪರಿಶ್ರಮವಿದೆ. 1986ರಲ್ಲಿ ಜಿಲ್ಲಾ ಕುರುಬ ಸಂಘದ ಸಮುದಾಯ ಭವನಕ್ಕೆ 5.20 ಎಕರೆ ಜಾಗ ಮಂಜೂರು ಮಾಡಲಾಗಿತ್ತು. ಸಮುದಾಯ ಭವನಕ್ಕೆ ಅಂದೇ ಅಡಿಗಲ್ಲು ಹಾಕಲಾಗಿತ್ತು. ಆದರೆ ಕಾರಣಾಂತರದಿಂದ ಕಟ್ಟಡ ಕಾಮಗಾರಿ ನಡೆದಿರಲಿಲ್ಲ. ಈ ಮಧ್ಯೆ ಜಾಗವನ್ನು ಸರಕಾರ ಹಿಂದಕ್ಕೆ ಪಡೆಯುವ ಬಗ್ಗೆ ಚಿಂತನೆ ನಡೆಸಿತ್ತು. ಆದರೆ ಕಾಗಿನೆಲೆ ಪೀಠದ ಸ್ವಾಮೀಜಿ ಶ್ರಮದಿಂದ ಜಾಗ ಉಳಿಯುವಂತಾಗಿದೆ ಎಂದರು.

32 ವರ್ಷಗಳ ಬಳಿಕ, ತಾನು ಸಿಎಂ ಆಗಿದ್ದ ಅವಧಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿದ್ದು, ಸಮುದಾಯದ ಮುಖಂಡರು ನೀಡಿದ ದೇಣಿಗೆ ಹಾಗೂ ಜನಪ್ರತಿನಿಧಿಗಳು ಒದಗಿಸಿದ ಅನುದಾನದಿಂದ ಸುಮಾರು 7.50 ಕೋ. ರೂ. ವೆಚ್ಚದಲ್ಲಿ ಸುಂದರ ಸಮುದಾಯ ಭವನ ನಿರ್ಮಾಣವಾಗಿದೆ ಎಂದ ಅವರು, ಸಮುದಾಯ ಭವನದ ಸದುಪಯೋಗವಾಗಬೇಕು. ಕಟ್ಟಡಕ್ಕೆ ಸರಕಾರದ ಅನುದಾನದ ಬಳಕೆಯಾಗಿರುವುದರಿಂದ ಸಮುದಾಯದವರೂ ಸೇರಿದಂತೆ ಬಡವರು ನಡೆಸುವ ಕಾರ್ಯಕ್ರಮಗಳಿಗೆ ಕಡಿಮೆ ಬಾಡಿಗೆ ಪಡೆಯಬೇಕೆಂದು ಸಲಹೆ ನೀಡಿದರು. 

ಸಮುದಾಯದ ಏಳಿಗೆಗೆ ಶಿಕ್ಷಣ ಅಗತ್ಯ ಎಂದು ಲಕ್ಷಾಂತರ ರೂ. ಖರ್ಚು ಮಾಡಿ ಸಮಾವೇಶ ನಡೆಸಿ ಭಾಷಣ ಬಿಗಿಯುವುದು ಇದುವರೆಗೂ ನಡೆದಿದೆ. ಮುಂದೆ ಭಾಷಣ ಕಡಿಮೆಯಾಗಬೇಕು. ಹಿಂದುಳಿದ ವರ್ಗದವರ ಶಿಕ್ಷಣಕ್ಕೆ ಶಿಕ್ಷಣ ಸಂಸ್ಥೆಗಳ ಉದಯವಾಗಬೇಕು. ಚಿಕ್ಕಮಗಳೂರು ನಗರದಲ್ಲಿ ಸಮುದಾಯ ಭವನಕ್ಕೆ ಮಂಜೂರಾದ ಜಾಗದಲ್ಲಿ ಉಳಿಕೆ ಜಾಗದಲ್ಲಿ ಜಿಲ್ಲಾ ಕುರುಬರ ಸಂಘದ ವತಿಯಿಂದಲೇ ಶಿಕ್ಷಣ ಸಂಸ್ಥೆಯೊಂದನ್ನು ಆರಂಭಿಸಿ ಎಂದು ಸಮುದಾಯದ ಮುಖಂಡರಿಗೆ ಕಿವಿ ಮಾತು ಹೇಳಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಮುದಾಯ ಭವನದ ಸುತ್ತ ಕಾಂಪೌಂಡ್ ಕಾಮಗಾರಿಗೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಮಾಜಿ ವಿ.ಪ.ಸದಸ್ಯೆ ಹಾಗೂ ಜಿಲ್ಲಾ ಕುರುಬ ಸಂಘದ ಉಪಾಧ್ಯಕ್ಷೆ ಗಾಯತ್ರಿ ಶಾಂತೇಗೌಡ, ಜಿಲ್ಲಾ ಕುರುಬ ಸಂಘದ ಹುಟ್ಟು, ಬೆಳವಣಿಗೆ, ಚಟುವಟಿಕೆಗಳ ಬಗ್ಗೆ ಪ್ರಸ್ತಾಪಿಸಿ ಸಂಘದ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಶಾಸಕರಾದ ಸಿ.ಟಿ.ರವಿ. ಎಂ.ಪಿ ಕುಮಾರಸ್ವಾಮಿ, ಟಿ.ಡಿ.ರಾಜೇಗೌಡ ಮತ್ತಿತರರು ಮಾತನಾಡಿದರು. ಕಾಗಿನೆಲೆ ಪೀಠದ ಶಿವಾನಂದಪುರಿ ಸ್ವಾಮೀಜಿ ಹಾಗೂ ಈಶ್ವರಾನಂದ ಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೂತನ ಕನಕ ಭವನ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು. ಸಿದ್ದರಾಮಯ್ಯ ಆಗಮನದ ವೇಳೆ ಹುಲಿ ಬಂತು ಹುಲಿ ಎಂಬ ಜಯಕಾರ ಮುಗಿಲುಮುಟ್ಟಿತ್ತು. ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್, ಮಾಜಿ ಸಚಿವೆ ಮೋಟಮ್ಮ, ಎಚ್.ಎಂ.ರೇವಣ್ಣ, ಬಿ.ಎಲ್.ಶಂಕರ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಟೇಲ್ ಶಿವರಾಂ, ಶಿವಮೊಗ್ಗ ಜಿಲ್ಲಾಧಿಕಾರಿ ಶಿವಕುಮಾರ್, ವಿಧಾನ ಪರಿಷತ್ ಸದಸ್ಯರಾದ ಧರ್ಮೇಗೌಡ, ಭೋಜೇಗೌಡ, ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ರೇಖಾಹುಲಿಯಪ್ಪಗೌಡ, ಎಂ.ಕೆ.ಪ್ರಾಣೇಶ್ ಮತ್ತಿತರರು ಉಪಸ್ಥಿತರಿದ್ದರು.

ಚಿಕ್ಕಮಗಳೂರು ಜಿಲ್ಲೆಗೆ ತಾನು ಸಿಎಂ ಆಗಿದ್ದ ಅವಧಿಯಲ್ಲಿ ಕುರುಬ ಸಮುದಾಯದವರಿಂದ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮಂಜೂರು ಮಾಡಿಸಿದ್ದೆ. ಇದಕ್ಕಾಗಿ 40 ಎಕರೆ ಸರಕಾರಿ ಹಾಗೂ ಖಾಸಗಿ ಜಾಗವನ್ನು ಗುರುತಿಸಿಯೂ ಆಗಿತ್ತು. ಆದರೆ ಸಮುದಾಯದವರು ಮುಂದೆ ಬರಲಿಲ್ಲ. ಜಿಲ್ಲೆಯಲ್ಲಿನ ನಮ್ಮ ಕುರುಬ ಸಮುದಾಯದವರ ಪೈಕಿ ಒಂದಿಬ್ಬರನ್ನು ಹೊರತುಪಡಿಸಿ ಯಾರೂ ಧನಿಕರಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಈ ವೇಳೆ ಅವರು ಶಾಸಕ ಸಿ.ಟಿ.ರವಿ ಅವರತ್ತ ದಿಟ್ಟಿಸಿ, 'ಏಯ್ ಸಿ.ಟಿ.ರವಿ, ನಿಮ್ಮ ಸಮುದಾಯದವರಲ್ಲಿ ಇದ್ದರಲ್ಲವೇನಪ್ಪಾ' ಎಂದು ಮುಗುಳ್ನಕ್ಕರು. ಇದಕ್ಕೆ ಸಿ.ಟಿ.ರವಿಯೂ ಸಹ ಮುಗುಳ್ನಕ್ಕರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News