ಸರ್ಕಾರಿ ಜಾಗವಿರುವ ಕಡೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ: ಸಚಿವ ಸಿ.ಪುಟ್ಟರಂಗಶೆಟ್ಟಿ

Update: 2018-11-11 17:24 GMT

ಮೈಸೂರು,ನ.11: ಸರ್ಕಾರಿ ಜಾಗಗಳು ಎಲ್ಲಿ ಇರುತ್ತವೋ, ಅಂತಹ ಕಡೆಗಳಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ ಮಾಡಲು ಮುಂದಾಗಿದ್ದೇವೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ಮೈಸೂರಿನ ಪುರಭವನದಲ್ಲಿ ಉಪ್ಪಾರ ಸಮಾಜದ ವತಿಯಿಂದ ರವಿವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಸರ್ಕಾರಿ ಜಾಗಗಳಿಗೆ ಕೊರತೆ ಇರುವ ಹಿನ್ನಲೆಯಲ್ಲಿ ಮೊರಾರ್ಜಿ ದೇಸಾಯಿ ಶಾಲೆ ನಿರ್ಮಾಣ ಮಾಡಲು ವಿಳಂಬವಾಗಿದೆ. 10 ಎಕರೆ ಪ್ರದೇಶದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಎಲ್ಲಿ ಸರ್ಕಾರಿ ಜಾಗ ಇರುತ್ತದೊ ಅಂತಹ ಕಡೆಗೆ ಮಾತ್ರ ಶಾಲೆ ಪ್ರಾರಂಭಿಸಲು ಅನುಮತಿ ನೀಡಲಾಗುತ್ತಿದೆ. ವಸತಿ ಶಾಲೆಗಳ ನಿರ್ಮಾಣಕ್ಕೆ ಹಣದ ಕೊರತೆ ಇಲ್ಲ ಎಂದು ಹೇಳಿದರು.

ಈಗಾಗಲೇ ರಾಜ್ಯದಲ್ಲಿ 165 ಮೊರಾರ್ಜಿ ಶಾಲೆಗಳಿದ್ದು, 200 ವಸತಿ ನಿಲಯಗಳಿವೆ. ಬೇಡಿಕೆಗೆ ಅನುಸಾರವಾಗಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅನುಷ್ಠಾನ ಗೊಳಿಸಲಾಗುವುದು ಎಂದ ಅವರು, ರಾಜ್ಯದಲ್ಲಿ ಬಾಡಿಗೆ ಹಾಗೂ ಸರ್ಕಾರಿ ಜಾಗಗಳಲ್ಲಿ ವಸತಿ ನಿಲಯಗಳನ್ನು ನಡೆಸಲಾಗುತ್ತಿದೆ. ನಬಾರ್ಡ್ ಯೋಜನೆಯಡಿಯಲ್ಲಿ ವಸತಿ ನಿಲಯಗಳನ್ನು ದುರಸ್ಥಿ ಮಾಡಲಾಗುವುದು. ಹೊಸ ಮೊರಾರ್ಜಿ ಶಾಲೆಗಳನ್ನು ನಿರ್ಮಾಣ ಮಾಡಲು 17.25 ಕೋಟಿ ರೂ ಹಣ ನೀಡಲಾಗುವುದು. ಅರೆ ಅಲೆಮಾರಿ, ಗೊಲ್ಲರು ಬುಡಕಟ್ಟು, ಬುಡುಬುಡುಕೆ ಸೇರಿದಂತೆ 46 ಸಮುದಾಯಗಳ ಅಭಿವೃದ್ಧಿಗೆ 80 ಕೋಟಿ ರೂ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಆ ಸಮುದಾಯಗಳ ಮೂಲಭೂತ ಸೌಕರ್ಯಕ್ಕಾಗಿ ಹಂತಹಂತವಾಗಿ ಹಣ ಬಿಡುಗಡೆಗೊಳಿಸಲಾಗುವುದು. ರಾಜ್ಯದಲ್ಲಿ ಜಾತಿಗಣತಿ ಮಾಡಲಾಗಿದೆ. ಈಗ ಪ್ರತಿ ಜಾತಿಯಲ್ಲೂ ಕುಲಾಂತರ ಸಮೀಕ್ಷೆ ಮಾಡಲಾಗುವುದು. ನಂತರ ಮುಖ್ಯಮಂತ್ರಿಗಳಿಗೆ ವರದಿ ನೀಡಲಾಗುವುದು ಎಂದರು.

ಕರ್ನಾಟಕ ಮತ್ತು ಕೇರಳದ ನಡುವಿನ ಬಂಡೀಪುರ ರಾಷ್ಟ್ರೀಯ ಹೆದ್ದಾರಿಯ ರಾತ್ರಿ ಸಂಚಾರಕ್ಕೆ ಜನಾಭಿಪ್ರಾಯ ಹಾಗೂ ಪರಿಸರವಾದಿಗಳ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳುವುದಾಗಿ ಇದೇ ವೇಳೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News