ತುಂಗಾಭದ್ರಾ ನದಿಗಿಳಿದು ನಾನೇ ಮರಳು ತುಂಬುತ್ತೇನೆ, ತಾಕತ್ತಿದ್ದರೆ ತಡೆಯಲಿ: ಶಾಸಕ ರೇಣುಕಾಚಾರ್ಯ ಸವಾಲು

Update: 2018-11-11 17:34 GMT

ದಾವಣಗೆರೆ,ನ.11: ಹೊನ್ನಾಳಿ ತುಂಗಾಭದ್ರಾ ನದಿಗೆ ಇಳಿದು ನಾನೇ ಮರಳು ತುಂಬುತ್ತೇನೆ. ತಾಕತ್ತಿದ್ದರೆ ನನ್ನ ತಡೆಯಲಿ ಎಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಾಸಕ ರೇಣುಕಾಚಾರ್ಯ ಸವಾಲು ಹಾಕಿದರು. 

ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಆಕಾಶದಿಂದ ಇಳಿದು ಬಂದಿಲ್ಲ. ನಾನು ತಾಯಿ ಎದೆ ಹಾಲು ಕುಡಿದು ಬಂದಿದ್ದೇನೆ. ನೀನು ಹೇಗೆ ಹುಟ್ಟಿದ್ದಿಯಾ ಎಂದು ಪ್ರಶ್ನಿಸಿದ ಅವರು, ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗೊತ್ತಿಲ್ಲದೆ ತಿಂಗಳಿಗೆ ಒಂದು ಬಾರಿ ಮಜಾ ಮಾಡೋಕೆ ಬರುತ್ತೀಯಾ. ಎಷ್ಟು ದಿನ ಸಚಿವರಾಗಿ ಇರುತ್ತೀಯೊ? ಅದೆಷ್ಟು ದಿನ ನಿಮ್ಮ ಸರಕಾರ ಇರೋತ್ತದೋ ನಾನೂ ನೋಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ವಿರುದ್ಧ ಏಕವಚನದಲ್ಲಿ ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಅವರಿಗೆ ಸ್ಥಳೀಯರ ನಾಡಿ-ಮಿಡಿತ ಗೊತ್ತಿಲ್ಲ. ಕೇವಲ ಜಯಂತಿಗಳಿಗೆ ಬರುವುದು ಮಾತ್ರ ಗೊತ್ತು. ಇದುವರೆಗೂ ಯಾವುದೇ ಶಾಸಕರ ಸಭೆ, ಟಾಸ್ಕ್ ಪೋರ್ಸ್ ಸಭೆ  ಕರೆದಿಲ್ಲ. ಜನರ ಸಮಸ್ಯೆಯ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ ಎಂದು ಹರಿಹಾಯ್ದರು. 

ನಾನು ಕೂಡ ಕಾನೂನು ಗೌರವಿಸುತ್ತೇನೆ. ಆದರೆ ಕೆಲವೊಮ್ಮೆ ಜನರಿಗೋಸ್ಕರ ಕಾನೂನನ್ನು ಸರಳೀಕರಣ ಮಾಡಬೇಕಾಗುತ್ತದೆ. ಇಡೀ ತಾಲೂಕಿನಲ್ಲಿ ಸಾಮಾನ್ಯರಿಗೆ ಮುಕ್ತವಾಗಿ ಮರಳು ಸಿಗುತ್ತಿಲ್ಲ. 11 ಮರಳು ಬ್ಲಾಕ್‍ಗಳಿದ್ದರೂ, ಮರಳಿನ ಅಭಾವ ಉಂಟಾಗಿದೆ. ಪ್ರತಿ ಟನ್‍ಗೆ 1500 ರೂ.ನಿಂದ 3 ಸಾವಿರ ರೂ. ಮರಳು ಮಾರಾಟವಾಗುತ್ತಿದೆ. ಗೋವಿನಕೋವಿ, ಹರಳಹಳ್ಳಿ ಸೇರಿದಂತೆ 4 ಬ್ಲಾಕ್‍ಗಳಲ್ಲಿ ಇನ್ನೂ ಮರಳು ಹರಾಜಾಗಿಲ್ಲ. ಆದರೆ ಉಪವಿಭಾಗಾಧಿಕಾರಿ ಕುಮಾರಸ್ವಾಮಿ '28 ಬ್ಲಾಕ್‍ಗಳಲ್ಲಿ ಮರಳು ಸಿಗುತ್ತಿದೆ. ಸರಕಾರಿ ಕೆಲಸಗಳಿಗೆ ಶೇ.25ರಷ್ಟು ಮರಳು ನೀಡಲಾಗುತ್ತಿದೆ' ಎನ್ನುತ್ತಾರೆ. ಆದರೆ ಸರಕಾರಿ ಕೆಲಸಗಳಿಗೆ ಎಂ.ಸ್ಯಾಂಡ್ ಬಳಸಲಾಗುತ್ತಿದೆ. ಅವರು ನನ್ನ ಜೊತೆ ಬರಲಿ ಸಾಕ್ಷಿ ಸಮೇತ ತೋರಿಸುತ್ತೇನೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.   

ನಾನು ಅಬಕಾರಿ ಸಚಿವನಾಗಿದ್ದಾಗ ಪ್ರತಿಯೊಂದು ಹಳ್ಳಿಹಳ್ಳಿಗಳಿಗೆ ಹೋಗಿ ಜನರ ಸಮಸ್ಯೆಯ ಬಗ್ಗೆ ಆಲಿಸುತ್ತಿದ್ದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಅವರಿಗೆ ಜಿಲ್ಲೆಗೆ ಬಂದು ಹೋಗುವುದನ್ನು ಬಿಟ್ಟರೆ ಬೇರೆ ಏನು ಕೆಲಸ ಮಾಡುತ್ತಿಲ್ಲ ಎಂದರು. 

ಬಿಜೆಪಿ ಮುಖಂಡರಾದ ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ್ ಇತರರು ಇದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News