ಚಿಕ್ಕಮಗಳೂರು: ಅತ್ಯಾಧುನಿಕ ಕೆ.ಆರ್.ಆಸ್ಪತ್ರೆ ಕಟ್ಟಡ ಲೋಕಾರ್ಪಣೆ

Update: 2018-11-11 17:45 GMT

ಚಿಕ್ಕಮಗಳೂರು, ನ.11: ವೈದ್ಯರ ಕೈಗುಣ ಅವರ ಬುದ್ಧಿಶಕ್ತಿ ಮತ್ತು ಪ್ರತಿಭೆಯ ಫಲ ಎಂದು ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಿಸಿದರು.

ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿ ಡಾ.ಕೆ.ಎಸ್.ಯೋಗೀಶ್ ನೇತೃತ್ವದಲ್ಲಿ ನಿರ್ಮಾಣಗೊಂಡಿರುವ ಕೆ.ಆರ್.ಎಸ್.ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಲೋಕಾರ್ಪಣಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ದೂರದ ನಗರಗಳ ಆಸ್ಪತ್ರೆಗಳಿಗೆ ಹೋಗುವ ಅನಿವಾರ್ಯತೆಯನ್ನು ಕಡಿಮೆಮಾಡಿ ಅಲ್ಲಿಯ ಸೌಲಭ್ಯಗಳನ್ನೆ ಇಲ್ಲಿ ನೀಡುತ್ತಿರುವುದು ಸಾಹಸದ ಕಾರ್ಯ ಎಂದರು.

ಈ ಪ್ರದೇಶದ ಜನರು ನಿರೋಗಿಗಳಾಗಿರುವಂತೆ ಆಸ್ಪತ್ರೆ ಬೆಳೆಯಬೇಕು. ಆಸ್ಪತ್ರೆಯ 9 ವಿಭಾಗಗಳೂ ವಿಶೇಷವಾಗಿ ನಿರ್ಮಾಣಗೊಂಡಿವೆ. 2ಕೋಟಿ ವೆಚ್ಚದ ಶಸ್ತ್ರಚಿಕಿತ್ಸಾ ವಿಭಾಗವಂತೂ ಅದ್ಭುತವಾಗಿದೆ. ತಜ್ಞ ವೈದ್ಯರುಗಳ ಸೇವೆ ಸದಾಕಾಲ ಲಭ್ಯವಿರುವುದು ಒಳ್ಳೆಯ ಸಂಗತಿ. ಅನೇಕ ಸಂದರ್ಭಗಳಲ್ಲಿ ರೋಗಿಗಳು ದೂರದ ಮಹಾನಗರಗಳ ದೊಡ್ಡ ಆಸ್ಪತ್ರೆಗಳಿಗೆ ತಲುಪುವ ವೇಳೆಗೆ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳು ಅಧಿಕ. ದೊಡ್ಡ ವೈದ್ಯರುಗಳನ್ನೆ ಇಲ್ಲಿಗೆ ಕರೆಯಿಸಿ ಕೈಗೆಟಕುವಂತೆ ಮಾಡಿರುವುದು ಪುಣ್ಯದ ಕಾರ್ಯವೆಂದು ಸ್ವಾಮೀಜಿ ಶ್ಲಾಘಿಸಿದರು.

ಶಾಸಕ ಸಿ.ಟಿ.ರವಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಡೂರು ಶಾಸಕ ಬೆಳ್ಳಿ ಪ್ರಕಾಶ್, ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಸಾಹಿತಿ ಚಟ್ನಳ್ಳಿ ಮಹೇಶ್, ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಮಾಜಿ ಸಚಿವ ಸಗೀರ್ ಅಹ್ಮದ್ ಮತ್ತು ಮಾಜಿ ಮುಖ್ಯ ಸಚೇತಕ ಕೆ.ಬಿ.ಮಲ್ಲಿಕಾರ್ಜುನ ಮಾತನಾಡಿದರು. 

ಕೆಆರ್‍ಎಸ್ ಆಸ್ಪತ್ರೆಯ ರೂವಾರಿ ಡಾ.ಕೆ.ಎಸ್.ಯೋಗೀಶ್, ಗರಸಭಾ ಅಧ್ಯಕ್ಷೆ ಶಿಲ್ಪಾ ರಾಜಶೇಖರ್, ಜಿ.ಪಂ.ಸದಸ್ಯ ಬೀಕನಹಳ್ಳಿ ಸೋಮಶೇಖರ್, ತರಳಬಾಳು ಕೇಂದ್ರಸಮಿತಿ ಸದಸ್ಯ ಎಲ್.ವಿ.ಬಸವರಾಜು, ನಗರಸಭಾ ಸದಸ್ಯ ತಮ್ಮಯ್ಯ ಮತ್ತು ರಾಜಶೇಖರ್, ನಗರಸಭಾ ಆಯುಕ್ತೆ ತುಷಾರಮಣಿ,  ವಿನ್ಯಾಸಗಾರ ಆಶ್ರಯ್, ಕಟ್ಟಡ ನಿರ್ಮಾಣ ಮಾಡಿದ ಅನುಗ್ರಹ ಕನ್ಸ್‍ಸ್ಟ್ರಕ್ಷನ್ಸ್ ಮಾಲಕ ಎಂ.ಜಿ.ಮಲ್ಲಿಕಾರ್ಜುನ, ನಾಗರತ್ನ ಮತ್ತು ಸಿದ್ದಲಿಂಗೇಗೌಡ ಮತ್ತಿತರರನ್ನು ಗೌರವಿಸಲಾಯಿತು. ಮಲ್ಲಿಗೆ ಸುಧೀರ್ ತಂಡದಿಂದ ವಚನಗಾಯನ ಆಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News