ಶಿವಮೊಗ್ಗ, ತುಮಕೂರು ಮನಪಾ ಮೇಯರ್- ಉಪ ಮೇಯರ್ ಚುನಾವಣೆಗೆ ಇನ್ನೂ ನಿಗದಿಯಾಗದ ದಿನಾಂಕ

Update: 2018-11-11 18:18 GMT

ಶಿವಮೊಗ್ಗ, ನ. 11: ತಡವಾಗಿಯಾದರೂ ಮೈಸೂರು ಮಹಾನಗರ ಪಾಲಿಕೆ ಮೇಯರ್ - ಉಪ ಮೇಯರ್ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನ. 17 ರಂದು ಚುನಾವಣೆ ನಡೆಯಲಿದೆ. ಆದರೆ ಶಿವಮೊಗ್ಗ ಹಾಗೂ ತುಮಕೂರು ಪಾಲಿಕೆಗಳಿಗೆ ಮಾತ್ರ ಇನ್ನೂ ಮೂಹೂರ್ತ ಕೂಡಿ ಬಂದಿಲ್ಲ. ಇನ್ನಷ್ಟೆ ಚುನಾವಣೆಯ ದಿನಾಂಕ ಘೋಷಣೆಯಾಗಬೇಕಾಗಿದೆ. 

ಶಿವಮೊಗ್ಗ, ತುಮಕೂರು ಪಾಲಿಕೆ ಮೇಯರ್ - ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿ ಪಟ್ಟಿ ಪ್ರಕಟಗೊಂಡು ಈಗಾಗಲೇ ಎರಡು ತಿಂಗಳಾಗುತ್ತಾ ಬಂದಿದೆ. ಇತ್ತೀಚೆಗೆ ಚುನಾಯಿತ ಕಾರ್ಪೋರೇಟರ್ ಗಳ ಹೆಸರುಗಳನ್ನು ಕೂಡ ರಾಜ್ಯಪತ್ರದಲ್ಲಿ ಅದಿಕೃತವಾಗಿ ಪ್ರಕಟಿಸಲಾಗಿದೆ. ಇದೆಲ್ಲದರ ಹೊರತಾಗಿಯೂ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳದಿರುವುದು ಹಲವು ರೀತಿಯ ಚರ್ಚೆಗೆ ಗ್ರಾಸವೊದಗಿಸಿದೆ. 

ಶಿವಮೊಗ್ಗ ಲೋಕಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ, ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂಬ ಮಾತುಗಳು ಸ್ಥಳೀಯ ಪಾಲಿಕೆ ವಲಯದಿಂದ ಕೇಳಿಬಂದಿದ್ದವು. ಆದರೆ ಚುನಾವಣೆ ಪೂರ್ಣಗೊಂಡು, ಫಲಿತಾಂಶ ಘೋಷಿತವಾಗಿದೆ. ಮಾದರಿ ನೀತಿ-ಸಂಹಿತೆ ಕೂಡ ಅಂತ್ಯವಾಗಿದೆ. ಇಷ್ಟೆಲ್ಲದರ ಹೊರತಾಗಿಯೂ ಇಲ್ಲಿಯವರೆಗೂ ವೇಳಾಪಟ್ಟಿ ಮಾತ್ರ ಪ್ರಕಟವಾಗಿಲ್ಲ.

ಅಧಿಕಾರವಿಲ್ಲ: ಕಾನೂನು ಪ್ರಕಾರ ಮೇಯರ್ - ಉಪ ಮೇಯರ್ ಆಯ್ಕೆಯಾದ ನಂತರ ನಡೆಯುವ ಮೊದಲ ಸಾಮಾನ್ಯ ಸಭೆಯಿಂದ, ಚುನಾಯಿತ ಕಾರ್ಪೋರೇಟರ್ ಗಳ ಅಧಿಕಾರಾವಧಿ ಅದಿಕೃತವಾಗಿ ಕಾರ್ಯಾರಂಭಗೊಳ್ಳಲಿದೆ. ಆದರೆ ಶಿವಮೊಗ್ಗ, ತುಮಕೂರು ಪಾಲಿಕೆ ಸದಸ್ಯರು ಆಯ್ಕೆಯಾಗಿ ಎರಡೂವರೆ ತಿಂಗಳಾಗುತ್ತಾ ಬಂದರೂ ಇಲ್ಲಿಯವರೆಗೂ ಹಕ್ಕು ಚಲಾಯಿಸಲು ಸಾಧ್ಯವಾಗದಿರುವುದು ನೂತನ ಕಾರ್ಪೋರೇಟರ್ ಗಳಲ್ಲಿ ನಿರಾಸೆಯ ಭಾವ ಉಂಟು ಮಾಡಿದೆ. ಅಧಿಕಾರಕ್ಕಾಗಿ ಜಾತಕ ಪಕ್ಷಿಗಳಂತೆ ಕಾದು ಕುಳಿತುಕೊಳ್ಳುವಂತಾಗಿದೆ. ಜೊತೆಗೆ ಪಾಲಿಕೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವಂತೆ ಮಾಡಿದೆ. 

ವಿಳಂಬವೇಕೆ?: ಮೇಯರ್ - ಉಪ ಮೇಯರ್ ಗೆ ಮೀಸಲಾತಿ ನಿಗದಿಯಾಗಿ, ಅದು ಕಾನೂನು ರೀತ್ಯ ಸಮರ್ಪಕವಾಗಿದ್ದರೆ ಕಾಲಮಿತಿಯಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಿ ಆಯ್ಕೆ ಪ್ರಕ್ರಿಯೆ ಆರಂಭಿಸಬೇಕು ಎಂದು ಕೆಎಂಸಿ ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಇದಕ್ಕೂ ಮುನ್ನ ಕಾರ್ಪೋರೇಟರ್ ಗಳ ಹೆಸರು ರಾಜ್ಯಪತ್ರದಲ್ಲಿ ಅಧಿಕೃತವಾಗಿ ರಾಜ್ಯ ಸರ್ಕಾರ ಪ್ರಕಟಿಸಬೇಕು. ಪ್ರಸ್ತುತ ಕಾರ್ಪೋರೇಟರ್ ಗಳ ಹೆಸರು ಗೆಜೆಟ್‍ನಲ್ಲಿ ಪ್ರಕಟಗೊಂಡಿದೆ. ಆದಾಗ್ಯೂ ಮೇಯರ್- ಉಪ ಮೇಯರ್ ಆಯ್ಕೆ ಪ್ರಕ್ರಿಯೆ ಆರಂಭವಾಗದಿರುವುದೇಕೆ ಎಂಬ ಯಕ್ಷಪ್ರಶ್ನೆ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಮನೆ ಮಾಡಿದೆ. 

ಮೀಸಲಾತಿ ವಿವರ: ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸ್ಥಾನವನ್ನು ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪ ಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ನಿಗದಿಗೊಳಿಸಲಾಗಿದೆ. ಹಾಗೆಯೇ ತುಮಕೂರು ಪಾಲಿಕೆ ಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ 'ಎ' ಮಹಿಳೆ ಮತ್ತು ಉಪ ಮೇಯರ್ ಸ್ಥಾನವನ್ನು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿರಿಸಲಾಗಿದೆ. 

ಬಲಾಬಲ: ಕಳೆದ ಆಗಸ್ಟ್ 31 ರಂದು ಈ ಮೂರು ಪಾಲಿಕೆಗಳ ವಾರ್ಡ್‍ಗಳಿಗೆ ಚುನಾವಣೆ ನಡೆದಿತ್ತು. ಸೆಪ್ಟೆಂಬರ್ 3 ರಂದು ಮತ ಎಣಿಕೆಯಾಗಿತ್ತು. ಅದೇ ದಿನ ಮೂರು ಪಾಲಿಕೆಗಳ ಮೇಯರ್ - ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿ ಕೂಡ ಸರ್ಕಾರ ಘೋಷಿಸಿತ್ತು. 

ಶಿವಮೊಗ್ಗ, ತುಮಕೂರು ಹಾಗೂ ಮೈಸೂರು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಅತೀ ಹೆಚ್ಚಿನ ಸ್ಥಾನ ಪಡೆದುಕೊಂಡಿದೆ. ಆದರೆ ಆ ಪಕ್ಷಕ್ಕೆ ಒಂದು ಕಡೆ ಮಾತ್ರ ಆಡಳಿತ ಚುಕ್ಕಾಣಿ ಲಭ್ಯವಾಗಲಿದೆ. ಉಳಿದೆರೆಡು ಕಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಧಿಕಾರದ ಗದ್ದುಗೆಯೇರುವುದು ಖಚಿತವಾಗಿದೆ. 
ಶಿವಮೊಗ್ಗ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದು, ನಿರಾಯಾಸವಾಗಿ ಆಡಳಿತ ಚುಕ್ಕಾಣಿ ಹಿಡಿಯಲಿದೆ. ತುಮಕೂರು ಹಾಗೂ ಮೈಸೂರು ಪಾಲಿಕೆಗಳಲ್ಲಿ 'ದೋಸ್ತಿ'ಗಳಿಗಿಂತ ಬಿಜೆಪಿ ಪಕ್ಷ ಹೆಚ್ಚಿನ ಸ್ಥಾನ ಪಡೆದುಕೊಂಡಿದ್ದರೂ ಅಧಿಕಾರ ಗದ್ದುಗೆ ಸಾಧ್ಯವಿಲ್ಲವಾಗಿದೆ. ಇಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮೈತ್ರಿ ಆಡಳಿತ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. 

Writer - ವರದಿ: ಬಿ. ರೇಣುಕೇಶ್

contributor

Editor - ವರದಿ: ಬಿ. ರೇಣುಕೇಶ್

contributor

Similar News