ಖ್ಯಾತ ಅರ್ಥಶಾಸ್ತ್ರಜ್ಞ ಶ್ರೀನಿವಾಸನ್ ನಿಧನ

Update: 2018-11-12 04:42 GMT

ಚೆನ್ನೈ, ನ. 12: ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ 1991ರ ಆರ್ಥಿಕ ಸುಧಾರಣಾ ಪರ್ವದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟಿ.ಎನ್. ಶ್ರೀನಿವಾಸನ್ (85) ಚೆನ್ನೈನಲ್ಲಿ ಕೊನೆಯುಸಿರೆಳೆದರು.

ಅಭಿವೃದ್ಧಿ ಅರ್ಥಶಾಸ್ತ್ರಕ್ಕೆ ನೀಡಿದ ಗಣನೀಯ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿತ್ತು. ಶ್ರೀನಿವಾಸನ್ ಯಾಲೆ ವಿವಿಯ ಅರ್ಥಶಾಸ್ತ್ರ ವಿಭಾಗದ ವಿಶ್ರಾಂತ ಪ್ರೊಫೆಸರ್.

1977-80ರ ಅವಧಿಯಲ್ಲಿ ವಿಶ್ವ ಬ್ಯಾಂಕಿನ ಅಭಿವೃದ್ಧಿ ಸಂಶೋಧನಾ ಕೇಂದ್ರದ ವಿಶೇಷ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಕಳೆದ ನಾಲ್ಕು ದಶಕಗಳಲ್ಲಿ ಎಂಐಟಿ, ಸ್ಟನ್‌ಫೋರ್ಡ್ ವಿವಿ ಹಾಗೂ ಇಂಡಿಯನ್ ಸ್ಟೆಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ವಿದೇಶಿ ವ್ಯಾಪಾರ ಕ್ಷೇತ್ರದ ಸುಧಾರಣೆಗಳ ಸಂಬಂಧದ ಇವರ ಸಂಶೋಧನಾ ಪ್ರಬಂಧ ಮನಮೋಹನ್ ಸಿಂಗ್ 1991ರಲ್ಲಿ ಜಾರಿಗೆ ತಂದ ಆರ್ಥಿಕ ಸುಧಾರಣೆಗಳಿಗೆ ಮೂಲವಾಗಿತ್ತು. ಮಾರುಕಟ್ಟೆಯ ಇತಿಮಿತಿಯ ಅರಿವು ಹೊಂದಿದ್ದ ಇವರು ವ್ಯಾಪಾರ ನಿಯಂತ್ರಣದಲ್ಲಿ ಸರ್ಕಾರದ ಪಾತ್ರವನ್ನೂ ಪ್ರತಿಪಾದಿಸಿದ್ದರು.

ಕೇಂದ್ರದ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯನ್, ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಸೇರಿದಂತೆ ಹಲವು ಮಂದಿ ಶ್ರೀನಿವಾಸನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News