ಮಾಜಿ ಸಚಿವೆ ಇನ್ನೂ ನಾಪತ್ತೆ: ಬಿಹಾರ ಸರಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

Update: 2018-11-12 10:39 GMT

ಹೊಸದಿಲ್ಲಿ,ನ.12: ಅನಾಥಾಲಯ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಬೇಕಾಗಿರುವ ಮಾಜಿ ಸಚಿವೆ ಮಂಜು ಶರ್ಮ ಅವರನ್ನು ಇನ್ನೂ ಪತ್ತೆ ಹಚ್ಚಿ ಬಂಧಿಸದೇ ಇರುವ ಬಗ್ಗೆ ವಿವರಣೆ ನೀಡುವಂತೆ  ಸುಪ್ರೀಂ ಕೋರ್ಟ್  ಸೋಮವಾರ ರಾಜ್ಯದ ಇಬ್ಬರು ಹಿರಿಯ ಅಧಿಕಾರಿಗಳಿಗೆ ಸೂಚಿಸಿದೆಯಲ್ಲದೆ ಈ ವಿಚಾರದಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

“ಫೆಂಟಾಸ್ಟಿಕ್... ಮಾಜಿ ಕ್ಯಾಬಿನೆಟ್ ಸಚಿವರ ಪತ್ತೆಯಿಲ್ಲ. ನೀವು (ಬಿಹಾರ ಸರಕಾರ) ವಿವರಣೆ ನೀಡಬೇಕಿದೆ. ಮಾಜಿ ಸಚಿವೆ ಎಲ್ಲಿದ್ದಾರೆಂದು ಯಾರಿಗೂ ಹೇಗೆ ತಿಳಿದಿಲ್ಲ?,” ಎಂದು ನ್ಯಾಯಾಲಯ ಪ್ರಶ್ನಿಸಿತು.

ನವೆಂಬರ್ 27ರೊಳಗಾಗಿ ಮಂಜು ವರ್ಮ ಅವರ ಪತ್ತೆಯಾಗದೇ ಇದ್ದಲ್ಲಿ ಬಿಹಾರ ಪೊಲೀಸ್ ಮುಖ್ಯಸ್ಥರು ನ್ಯಾಯಾಲಯಕ್ಕೆ ಹಾಜರಾಗಿ ವಿವರಣೆ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.

ಬಿಹಾರದ ಮುಖ್ಯ ಕಾರ್ಯದರ್ಶಿ ಖುದ್ದಾಗಿ ಹಾಜರಾಗಿ ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಸೋಶಿಯಲ್ ಸಾಯನ್ಸಸ್ ಸಂಸ್ಥೆಯ ವರದಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿವೆ ಎಂದು ಉಲ್ಲೇಖಿಸಲಾದ ರಾಜ್ಯದ ಇತರ 14 ಅನಾಥಾಲಯಗಳ ವಿರುದ್ಧ ಕ್ರಮವೇಕೆ ಕೈಗೊಳ್ಳಲಾಗಿಲ್ಲ ಎಂದು ವಿವರಿಸುವಂತೆ ತಿಳಿಸಿದೆ.

ನವೆಂಬರ್ 1ರಂದು ವರ್ಮ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತಲ್ಲದೆ ಶರ್ಮ ಅವರನ್ನೇಕೆ ಬಂಧಿಸಲಾಗಿಲ್ಲ ಎಂದು ಸತತ ಮೂರು ದಿನ ಬಿಹಾರ ಸರಕಾರವನ್ನು ನ್ಯಾಯಾಲಯ ಪ್ರಶ್ನಿಸಿತ್ತು.

ಆಗಸ್ಟ್ ತಿಂಗಳಲ್ಲಿ ಪೊಲೀಸರು ಮುಝಫ್ಫರಪುರ ಅನಾಥಾಲಯದಲ್ಲಿ ನಡೆದಿದೆಯೆನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಬಂಧ ವರ್ಮ ಅವರ ನಿವಾಸಗಳ ಮೇಲೆ ದಾಳಿ ನಡೆಸಿ ಒಂದು ನಿವಾಸದಿಂದ 50 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿತ್ತು.

ಆಗಸ್ಟ್ ತಿಂಗಳಲ್ಲಿಯೇ ಸಮಾಜ ಕಲ್ಯಾಣ ಸಚಿವ ಹುದ್ದೆಗೆ ಅವರು ರಾಜೀನಾಮೆ ನೀಡಿದ್ದರು. ಆಕೆಯ ಪತಿ ಚಂದ್ರಶೇಖರ ವರ್ಮ ಮುಝಫ್ಫರಪುರ ಅನಾಥಾಲಯವನ್ನು ಹಲವು ಬಾರಿ ಭೇಟಿ ನೀಡಿರುವುದು ಬೆಳಕಿಗೆ ಬಂದ ಮೇಲೆ ಈ ಬೆಳವಣಿಗೆ ನಡೆದಿತ್ತು. ಚಂದ್ರಶೇಖರ್ ಅವರ ಸಮೀಪವರ್ತಿ ಬೃಜೇಶ್ ಶರ್ಮ ಎಂಬಾತ ಈ ಪ್ರಕರಣದ ಮುಖ್ಯ ಆರೋಪಿಯಾಗಿದ್ದು ಆತ ಶರಣಾಗತನಾಗಿದ್ದ.

ಮುಝಫ್ಫರಪುರ ಆಶ್ರಯತಾಣದಲ್ಲಿ 40ಕ್ಕೂ ಹೆಚ್ಚು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೆಂಬ ಆರೋಪವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News