ಬಿಜೆಪಿ ನಾಯಕ ತೇಜಿಂದರ್ ಅವರ ‘ಶಬರಿಮಲೆ ಉಳಿಸಿ’ ಕಾರ್ಯಕ್ರಮದ ಪೋಸ್ಟರ್ ನಲ್ಲಿ ಬಂಧಿತ ಆರೆಸ್ಸೆಸ್ಸಿಗನ ನಕಲಿ ಚಿತ್ರ

Update: 2018-11-13 06:12 GMT

ಹೊಸದಿಲ್ಲಿ,ಅ.13 : ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹೇರಬೇಕೆಂದು ಒತ್ತಾಯಿಸಲು ದಿಲ್ಲಿ ಬಿಜೆಪಿ ವಕ್ತಾರ ತೇಜಿಂದರ್ ಬಗ್ಗಾ ಅವರು ದಿಲ್ಲಿಯಲ್ಲಿ ರವಿವಾರ ಆಯೋಜಿಸಿದ್ದ ‘ಶಬರಿಮಲೆ ಉಳಿಸಿ’ ಸಮಾರಂಭದಲ್ಲಿ ಈಗಾಗಲೇ ಬಂಧಿತನಾಗಿರುವ ಆರೆಸ್ಸೆಸ್ ಕಾರ್ಯಕರ್ತನೊಬ್ಬ ಕಾಣಿಸಿಕೊಂಡಿರುವ  ನಕಲಿ ಚಿತ್ರದ ಪೋಸ್ಟರ್ ಬಳಿಸಿರುವುದು  ಇದೀಗ ಆಡಳಿತ ಬಿಜೆಪಿಗೆ ದೊಡ್ಡ ಮುಜುಗರ ತಂದಿದೆ.

ರವಿವಾರದ ಸಮಾರಂಭದ ವೇದಿಕೆಯ ಹಿನ್ನೆಲೆಯಲ್ಲಿದ್ದ ದೊಡ್ಡ ಪೋಸ್ಟರ್‍ನಲ್ಲಿ ಕಪ್ಪು ಬಣ್ಣದ ಉಡುಗೆ ತೊಟ್ಟಿದ್ದ ವ್ಯಕ್ತಿಯೊಬ್ಬನ ಒಂದು ಕೈಯ್ಯಲ್ಲಿ ಅಯ್ಯಪ್ಪನ ಮೂರ್ತಿ ಇದ್ದರೆ ಇನ್ನೊಂದು ಕೈಯ್ಯಲ್ಲಿ ಬೆತ್ತವಿದೆ. ಪೊಲೀಸ್ ಅಧಿಕಾರಿಯದ್ದೆಂದು ಊಹಿಸಬಹುದಾದ ಬೂಟು ಧರಿಸಿದ ವ್ಯಕ್ತಿಯೊಬ್ಬನ ಕಾಲು ಆ ವ್ಯಕ್ತಿಯ ಎದೆಯ ಮೇಲಿದೆ. ಇದೇ ಚಿತ್ರವಿರುವ ಸ್ಟಿಕ್ಕರ್‍ಗಳನ್ನೂ ಸಭೆಯಲ್ಲಿ ವಿತರಿಸಲಾಗಿದೆ.

``ನೂರು ಕೋಟಿ ಹಿಂದೂಗಳ ನಂಬಿಕೆಯ ಮೇಲೆ ಪ್ರಹಾರ. #ಸೇವ್‍ಶಬರಿಮಲೆ'' ಎಂದು ಪೋಸ್ಟರ್‍ನಲ್ಲಿ ಬರೆಯಲಾಗಿದೆ. ಬಗ್ಗಾ ಸಹಿತ ವೇದಿಕೆಯಲ್ಲಿದ್ದವರು ಇದೇ ಪೋಸ್ಟರಿನ ಸಣ್ಣ ಚಿತ್ರಗಳನ್ನು ಕೈಯ್ಯಲ್ಲಿ  ಹಿಡಿದಿರುವ ಫೋಟೋ ಕೂಡ ಇದೆ. ಪೋಸ್ಟರ್‍ನಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ, 39 ವರ್ಷದ ಆರೆಸ್ಸೆಸ್ ಕಾರ್ಯಕರ್ತ ರಾಜೇಶ್ ಆರ್ ಕುರುಪು  ಎಂಬಾತನನ್ನು ನವೆಂಬರ್ 5ರಂದು ಕೇರಳದ ಅಲಪ್ಪುಝ ಜಿಲ್ಲೆಯಿಂದ  ಬಂಧಿಸಲಾಗಿತ್ತು.  ಹಿಂದೂಗಳ ಮೇಲೆ ಪೊಲೀಸರ ದಾಳಿ ಎಂದು ಬಿಂಬಿಸುವ ನಕಲಿ ಚಿತ್ರಗಳನ್ನು ಪಸರಿಸಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತು.

ಪೋಸ್ಟರ್‍ನಲ್ಲಿ ಕಾಣಿಸಿಕೊಂಡಿರುವ ಚಿತ್ರ ಕಾಲ್ಪನಿಕ ಎಂದು ಬಗ್ಗಾ ಸ್ಪಷ್ಟೀಕರಣ ನೀಡಿದ್ದಾರೆ. ಇದೇ ಚಿತ್ರವಿರುವ ಸುಮಾರು 5,000 ಸ್ಟಿಕ್ಕರ್‍ಗಳನ್ನು ವಿತರಿಸಲಾಗಿದ್ದು  ಮುಂದಿನ ಒಂದು ವಾರಗಳ ಕಾಲ ಅಭಿಯಾನ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ. ಅತ್ತ ಎಎಪಿ ಶಾಸಕ ಕಪಿಲ್ ಶರ್ಮ ಕೂಡ ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು ಬಗ್ಗಾ ಅವರು ವೈಯಕ್ತಿಕ ನೆಲೆಯಲ್ಲಿ ಆಯೋಜಿಸಿದ್ದರೆಂದು ಬಿಜೆಪಿ ವಕ್ತಾರರೊಬ್ಬರು ಹೇಳಿದ್ದಾರೆ.

ಮನ್ನಾರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರ ಪ್ರಕಾರ ಕುರುಪ್ ವಿರುದ್ಧ ಐಪಿಸಿ ಸೆಕ್ಷನ್ 153, 500, 118 ಹಾಗೂ 120 ಅನ್ವಯ ಪ್ರಕರಣವನ್ನು ಡಿವೈಎಫ್‍ಐ ಕಾರ್ಯಕರ್ತರೊಬ್ಬರ ದೂರಿನ ಆಧಾರದಲ್ಲಿ ದಾಖಲಿಸಲಾಗಿದೆ. ಕಳೆದ ತಿಂಗಳು ನಿಲಕ್ಕಲ್‍ನಲ್ಲಿ ಅಯ್ಯಪ್ಪ ಭಕ್ತರ ಮೇಲೆ ನಡೆದ ಪೊಲೀಸ್ ಲಾಠಿಚಾರ್ಜ್ ವಿರೋಧಿಸಿ ಈ ಫೋಟೋ ಫೇಸ್ ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾಗಿ ಹೇಳಿದ್ದ ಆತ ಅವುಗಳನ್ನು ತೆಗೆದು ಹಾಕಿದರೂ ಅದಾಗಲೇ ಅವುಗಳು ವೈರಲ್ ಆಗಿದ್ದವು.

ಒಂದು ಫೋಟೋದಲ್ಲಿ ಪೊಲೀಸ್ ಅಧಿಕಾರಿಯೊಬ್ಬನ ಕಾಲು ಆತನ ಎದೆಯ ಮೇಲಿದ್ದರೆ ಇನ್ನೊಂದು ಚಿತ್ರದಲ್ಲಿ ಕುಡುಗೋಲು ಕುತ್ತಿಗೆಯಲ್ಲಿಟ್ಟಿರುವುದು ಕಾಣಿಸುತ್ತದೆ. ಹಲವು ಮಂದಿ ಇವು ನೈಜ ಚಿತ್ರಗಳೆಂದೇ ನಂಬಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News