ಧನಾತ್ಮಕ ಪತ್ರಿಕೆಗಳು ಮಾತ್ರ ಸಮಾಜಕ್ಕೆ ಉಪಕಾರಿಯಾಗಬಲ್ಲವು: ಡಾ.ನಾ ಡಿಸೋಜ

Update: 2018-11-13 11:46 GMT

ಸಾಗರ, ನ. 13: ಕೆಲವು ಜಾತಿ - ಮತ, ಧರ್ಮ - ದೇವರು, ಕೆಲವು ವ್ಯಕ್ತಿ ಪಕ್ಷಗಳಿಗೆ ಸುದ್ದಿಗಳು ಹಾಗು ಲೇಖನಗಳು ಸೀಮಿತವಾಗದ ಪತ್ರಿಕೆಗಳು ಇವತ್ತು ಬಹಳ ಮುಖ್ಯ ಎಂದು ಡಾ. ನಾ ಡಿಸೋಜ ಅವರು ಅಭಿಪ್ರಾಯಪಟ್ಟರು.

ಸಾಗರದಲ್ಲಿ ನಡೆದ ಸಂಪದ ಸಾಲು ಪತ್ರಿಕೆ ಮತ್ತು ಸಂಪದ ಫೌಂಡೇಶನ್ ವತಿಯಿಂದ ನಡೆದ  ರಾಜ್ಯ ಮಟ್ಟದ ಕತೆ,  ಕವನ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತಾಡಿದರು.

ಸಂಪದ ಸಾಲು ಪತ್ರಿಕೆಯ ಹನ್ನೊಂದನೇ ವರ್ಷದ ವಿಶೇಷದ ಸಂದರ್ಭ ನಡೆದ ಕತೆ, ಕವನ ಸ್ಪರ್ಧೆಯಲ್ಲಿ ರಾಜ್ಯ ಮತ್ತು ಅಂತರ್ ರಾಜ್ಯ, ರಾಷ್ಟ್ರದಲ್ಲಿರುವ ಕನ್ನಡಿಗರು ಸೇರಿದಂತೆ 1819 ಕವನಗಳು ಮತ್ತು 819 ಕತೆಗಳು ಭಾಗವಹಿಸಿದ್ದವು. ಡಾ.ನಾ ಡಿಸೋಜ ಅವರ ನೇತೃತ್ವದಲ್ಲಿ ತೀರ್ಪು ಪ್ರಕಟಿಸಲಾಗಿತ್ತು.

ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಗ್ರಂಥಾಲಯ ಇಲಾಖೆ ಮುಖ್ಯಸ್ಥರಾದ ಡಾ. ಸತೀಶ್ ಕುಮಾರ್ ಹೊಸಮನಿ, ಇಂತಹ ಪತ್ರಿಕೆ ಮತ್ತು ಪುಸ್ತಕಗಳ ಅಭಿವೃದ್ಧಿಗಾಗಿ ನಮ್ಮ ಗ್ರಂಥಾಲಯ ಶ್ರಮಿಸುತ್ತಿದೆ ಎಂದರು.

ಬರವಣಿಗೆಗಳು ಇನ್ನೊಬ್ಬರಿಗೆ ಸ್ಪೂರ್ತಿ ನೀಡುವಂತಿರಬೇಕು ಆಗ ಮಾತ್ರ ಆ ಬರವಣಿಗೆ ಮತ್ತು ಪತ್ರಿಕೆಗಳಿಗೆ ಬೆಲೆ ಬರುತ್ತದೆ ಎಂದು ಮಥನ ಹೋಮ್ ಇಂಡಸ್ಟ್ರೀಸ್ ನ ಬಿ. ಆರ್. ಉಮೇಶ್ ಹೇಳಿದರು.

ಹನ್ನೊಂದು ವರ್ಷಗಳ ಹಿಂದಿನಿಂದ ಈವರೆಗಿನ ನಿರಂತರ ಪ್ರಯತ್ನ ಮತ್ತು ಆ ಪ್ರಯತ್ನದ ಪ್ರಯಾಣದಲ್ಲಿ ಆದ ಅವಮಾನ, ಕಷ್ಟಗಳ ಬಗ್ಗೆ ಮತ್ತು ಅದನ್ನು ಎದುರಿಸಿ ಪಾಸಿಟಿವ್ ಜರ್ನಲಿಸಂ ಕಟ್ಟಲು ಶ್ರಮಿಸಿದ ಅನುಭವಗಳನ್ನು ಸಂಪದ ಸಾಲು ಪತ್ರಿಕೆಯ ಮತ್ತು ಸಂಪದ ಫೌಂಡೇಶನ್ ನ ವೆಂಕಟೇಶ ಸಂಪ ಅವರು ಪ್ರಸ್ತಾವಿಕ ಮಾತಿನಲ್ಲಿ ಹಂಚಿಕೊಂಡರು.

ಶುಭಾ ನಾಗರಾಜ್ ಮತ್ತು ಮಂಜುಳ ಎ ಎನ್ ಪ್ರಾರ್ಥಿಸಿದರು. ನಾರಾಯಣಮೂರ್ತಿ ವಂದಿಸಿದರು. ನಿರ್ಮಲಾ ಹೆಗಡೆ ಗೋಳಿಕೊಪ್ಪ ಕಾರ್ಯಕ್ರಮ ನಿರೂಪಿಸಿದರು. 

ಡಾ.ರತ್ನಾಕರ್ ಮಲ್ಲಮೂಲೆ ಅವರ "ಭೂತ" ಕವಿತೆ ಪ್ರಥಮ ಬಹುಮಾನವಾಗಿ, ವಿನಾಯಕ ಅರಳಸುರಳಿ ಅವರ "ದೇವರ ಹೊತ್ತವನು" ಕವನ ದ್ವಿತೀಯ ಬಹುಮಾನವಾಗಿ, ಡಾ. ಅಜಿತ್ ಹೆಗಡೆ, ಹರೀಶಿ ಅವರ "ವೇದಾಂತದ ವಿಗತ" ಕವನಕ್ಕೆ ತೃತೀಯ ಬಹುಮಾನ ಸಂದಿವೆ. 

ಕತೆಗೆ ಪ್ರಥಮವಾಗಿ ಮಂಜುನಾಥ ಹಿಲಿಯಾಣ ಅವರ "ಸೀತಾ ಪ್ರಲಾಪ" ಕತೆ, ವಿಷ್ಣು ಭಟ್ ಹೊಸ್ಮನೆ ಅವರ "ಪಯಣ" ಕತೆಗೆ ದ್ವಿತೀಯ ಬಹುಮಾನ, ಎಚ್ ಎಸ್ ಅರ್ಪಣಾ ಅವರ "ಪಂಕ್ತಿಬೇಧ" ಕತೆಗೆ ತೃತೀಯ ಬಹುಮಾನ ನೀಡಲಾಗಿದೆ. ಈ ಸಂದರ್ಭ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News