ಪ್ರವಾದಿ ನಿಂದನೆ: ಅಂಕಣಕಾರ ಸಂತೋಷ್ ತಮ್ಮಯ್ಯ ಬಂಧನ

Update: 2018-11-13 11:27 GMT
ಸಂತೋಷ್ ತಮ್ಮಯ್ಯ

ಗೋಣಿಕೊಪ್ಪ, ನ.13: ಟಿಪ್ಪು ಜಯಂತಿಯನ್ನು ವಿರೋಧಿಸುವ ಭರದಲ್ಲಿ ಪ್ರವಾದಿಯನ್ನು ನಿಂದಿಸಿದ ಪ್ರಕರಣದಲ್ಲಿ ಅಂಕಣಕಾರ ವಿರಾಜಪೇಟೆಯ ಸಂತೋಷ್ ತಮ್ಮಯ್ಯ ನನ್ನು ಗೋಣಿಕೊಪ್ಪ ಪೊಲೀಸರು ಬಂಧಿಸಿದ್ದಾರೆ.

ನ. 5ರಂದು ಕೊಡಗು ಕಾವೇರಿ ಪ್ರಜ್ಞಾ ವೇದಿಕೆಯ ವತಿಯಿಂದ ಗೋಣಿಕೊಪ್ಪದ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ನಡೆದ ಟಿಪ್ಪುವಿನ ಕರಾಳ ಮುಖಗಳ ಅನಾವರಣ ವಿಚಾರ ಸಂಕಿರಣದಲ್ಲಿ ಪ್ರವಾದಿಯನ್ನು ನಿಂದಿಸಿ ಭಾಷಣ ಮಾಡಿರುವುದರ ಬಗ್ಗೆ ಸ್ಥಳೀಯ ಪತ್ರಿಕೆಯೊಂದು ವರದಿ ಪ್ರಕಟಿಸಿತ್ತು. ಭಾಷಣದ ವಿರುದ್ಧ ಸಿದ್ದಾಪುರದ ಅಸ್ಕರ್ ಎಂಬವರು ನ. 6ರಂದು ಗೋಣಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿ ಅನ್ವಯ ಸಹಾಯಕ ಅಭಿಯೋಗ ನಿರ್ದೇಶಕರಿಂದ ಕಾನೂನಿನ ಅಭಿಪ್ರಾಯವನ್ನು ಪಡೆದ ಪೊಲೀಸರು ನ. 7 ರಂದು ಅಂಕಣಕಾರ ಸಂತೋಷ್ ತಮ್ಮಯ್ಯ, ರಂಗಕರ್ಮಿ ಅಡ್ಡಂಡ ಕಾರ್ಯಪ್ಪ, ಕೊಡಗಿನ ಬಾಚರಣಿಯಂಡ ಅಪ್ಪಣ್ಣ, ಸಾಮಾಜಿಕ ಹೋರಾಟಗಾರ ಮಂಗಳೂರಿನ ರಾಬರ್ಟ್ ರೊಝಾರಿಯೋ, ಮೈಸೂರಿನ ಆರೆಸ್ಸೆಸ್ ನ ಸುಧಾಕರ್ ಹೊಸಳ್ಳಿ ಎಂಬವರ ವಿರುದ್ಧ ಎಫ್.ಐ.ಆರ್ ದಾಖಲಾಗಿತ್ತು.

ಪ್ರವಾದಿಯನ್ನು ನಿಂದಿಸಿರುವುದನ್ನು ಖಂಡಿಸಿ ಹಾಗೂ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಜಿಲ್ಲೆಯಾದ್ಯಂತ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿತ್ತು.

ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಮಧುಗಿರಿ ಎಂಬಲ್ಲಿ ಅಂಕಣಕಾರ ಸಂತೋಷ್ ತಮ್ಮಯ್ಯನನ್ನು ಸೋಮವಾರ ರಾತ್ರಿ ಬಂಧಿಸಿ ಗೋಣಿಕೊಪ್ಪ ಠಾಣೆಗೆ ಕರೆ ತಂದಿದ್ದಾರೆ.

ಪತ್ರಿಕೆಯ ವರದಿ ಆಧಾರದಲ್ಲಿ ಪ್ರಕರಣ ದಾಖಲು ಮಾಡಿರುವುದರ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿರುವ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಸಂಕೀರ್ಣದಲ್ಲಿ ತಾನೂ ಭಾಗವಹಿಸಿದ್ದು, ಯಾರೊಬ್ಬರೂ ಪ್ರವಾದಿಯ ಬಗ್ಗೆ ಮಾತನಾಡಲಿಲ್ಲ ಎಂದು ಹೇಳಿದ್ದಾರೆ. ಆದರೆ ಇದೀಗ ಭಾಷಣಕ್ಕೆ ಸಂಬಂಧಿಸಿದ ಆಡಿಯೊ, ವೀಡಿಯೊ ರೆಕಾರ್ಡಿಂಗ್ ಪೊಲೀಸರಿಗೆ ಲಭ್ಯವಾಗಿದೆ ಎಂಬ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News