ಶಬರಿಮಲೆ ತೀರ್ಪನ್ನು ಮರು ಪರಿಶೀಲಿಸಲು ಒಪ್ಪಿದ ಸುಪ್ರೀಂ ಕೋರ್ಟ್

Update: 2018-11-13 11:43 GMT

ಹೊಸದಿಲ್ಲಿ,ನ.13 : ಶಬರಿಮಲೆಯಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶಾವಕಾಶ ಒದಗಿಸಿ ತಾನು ಸೆಪ್ಟೆಂಬರ್ 28ರಂದು ನೀಡಿದ ಆದೇಶವನ್ನು ತೆರೆದ ನ್ಯಾಯಾಲಯದಲ್ಲಿ ಮರು ಪರಿಶೀಲಿಸಲು ಸುಪ್ರೀಂ ಕೋರ್ಟ್ ಇಂದು  ಒಪ್ಪಿದೆ. ಹಿಂದಿನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ 49 ಅಪೀಲುಗಳನ್ನು ನ್ಯಾಯಾಲಯ ಜನವರಿ 22ರಿಂದ ವಿಚಾರಣೆ ನಡೆಸಲಿದೆ.

ಈ ಹಿಂದೆ ದೇವಳದಲ್ಲಿ 10ರಿಂದ 50 ವರ್ಷ ಪ್ರಾಯದ ಮಹಿಳೆಯರಿಗಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ತನ್ನ ಈ ಹಿಂದಿನ ಆದೇಶದಲ್ಲಿ ತೆರವುಗೊಳಿಸಿತ್ತಲ್ಲದೆ ಇಂತಹ ನಿರ್ಬಂಧಗಳು ಅಗತ್ಯ ಧಾರ್ಮಿಕ ಪದ್ಧತಿಗಳು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತನ್ನ ತೀರ್ಪಿನಲ್ಲಿ ತಿಳಿಸಿತ್ತು.

ಆದರೆ ನಿರ್ಬಂಧಗಳನ್ನು ನ್ಯಾಯಾಲಯ ತೆಗೆದು ಹಾಕಿದ ಹೊರತಾಗಿಯೂ 50 ವರ್ಷ ಕೆಳಗಿನ ಪ್ರಾಯದ ಒಬ್ಬಳೇ ಒಬ್ಬಳು ಮಹಿಳೆಗೆ  ದೇವಳ ಪ್ರವೇಶಿಸುವುದು ಇಲ್ಲಿಯ ತನಕ ಸಾಧ್ಯವಾಗಿಲ್ಲ. ಒಂದು ಡಜನಿಗೂ ಅಧಿಕ ಮಹಿಳೆಯರು ದೇವಳವನ್ನು ಭಾರೀ ಪೊಲೀಸ್ ಸುರಕ್ಷೆಯೊಂದಿಗೆ ಪ್ರವೇಶಿಸಲು ಯತ್ನಿಸಿದರೂ ಸಫಲರಾಗಿಲ್ಲ. ಭಕ್ತರು ನಡೆಸುತ್ತಿರುವ ಭಾರೀ ಪ್ರತಿಭಟನೆಗಳು ಶಬರಿಮಲೆ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆಯನ್ನೂ ಒಡ್ಡಿತ್ತು.

ಹತ್ತರಿಂದ 50 ವರ್ಷ ಪ್ರಾಯದ ಮಹಿಳೆಯರಿಗೆ ದೇವಳ ಪ್ರವೇಶ ನಿಷೇಧ ಮಹಿಳಾ ವಿರೋಧಿಯಲ್ಲ ಹಾಗೂ ಮಹಿಳೆಯರು ಅದನ್ನು ಸ್ವಯಂ ಪ್ರೇರಣೆಯಿಂದ ಒಪ್ಪಿಕೊಂಡಿದ್ದಾರೆಂದು ದೇವಳದ  ಆಡಳಿತ ನಿರ್ವಹಿಸುವ  ತಿರುವಾಂಕೂರು ದೇವಸ್ವಂ ಮಂಡಳಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News