ಬಾಯಿಗೆ ಬಂದಂತೆ ಮಾತನಾಡುವುದು ನಿಲ್ಲಿಸಿ: ರಾಜಕಾರಣಿಗಳಿಗೆ ಮಾಜಿ ಶಾಸಕ ವೈ.ಎಸ್.ವಿ.ದತ್ತ ಕಿವಿಮಾತು

Update: 2018-11-13 12:01 GMT

ಶಿವಮೊಗ್ಗ, ನ. 13: ಇತ್ತೀಚಿನ ದಿನಗಳಲ್ಲಿ ಕೆಲ ರಾಜಕಾರಣಿಗಳು ಬಾಯಿಗೆ ಬಂದಂತೆ ಮಾತನಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಯಾರೇ ಆಗಲಿ ಮಾತನಾಡುವ ಮುನ್ನ ಯೋಚಿಸಿ, ಮಾತನಾಡ ಬೇಕು ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಅಭಿಪ್ರಾಯಪಟ್ಟಿದ್ದಾರೆ. 

ಮಂಗಳವಾರ ನಗರದ ಬಸವೇಶ್ವರ ಪದವಿ ಪೂರ್ವ ಕಾಲೇಜ್‍ನಲ್ಲಿ ಕನ್ನಡ ರಾಜೋತ್ಸವದ ಅಂಗವಾಗಿ ಬಸವೇಶ್ವರ ಅಕಾಡೆಮಿ ಆಫ್ ಏಜುಕೇಷನ್ ಆಯೋಜಿಸಿದ್ದ 'ಕುಮಾರವ್ಯಾಸ ಭಾರತ' ಕೃತಿಯ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಇತ್ತೀಚೆಗೆ ರಾಜಕಾರಣಿಯೋರ್ವರು, 'ನನ್ನನ್ನು ಜೈಲಿಗೆ ಕಳುಹಿಸಿದ ಪರಿಣಾಮದಿಂದ ಮಾಜಿ ಮುಖ್ಯಮಂತ್ರಿಗಳು ತಮ್ಮ ಪುತ್ರನನ್ನು ಕಳೆದುಕೊಳ್ಳುವಂತಾಯಿತು' ಎಂದು ಹೇಳಿದ್ದರು. ಅದರ ಪರಿಣಾಮ ಏನಾಯಿತು ಎಂಬುವುದು ಪ್ರಸ್ತುತ ಎಲ್ಲರಿಗೂ ಗೊತ್ತಿದೆ ಎಂದು ಜನಾರ್ದನ ರೆಡ್ಡಿಯವರ ಹೆಸರೇಳದೆ ತಿಳಿಸಿದರು. 

ಈ ಕಾರಣದಿಂದ ಮಾತುಗಳೇ ಎಲ್ಲ ಸಮಸ್ಯೆಯ ಮೂಲವಾಗಿದೆ ಎಂಬುವುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಅದರಲ್ಲಿಯೂ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಾತಿನ ಮಹತ್ವ ಅರಿತುಕೊಳ್ಳಬೇಕು. ಆರೋಗ್ಯಕರ ರೀತಿಯಲ್ಲಿ ನಮ್ಮ ಸಂಭಾಷಣೆಗಳಿರಬೇಕು. ಇಲ್ಲದಿದ್ದರೆ ಸಮಸ್ಯೆಗಳು ನಮ್ಮನ್ನು ಬೆನ್ನು ಹತ್ತಿ ಬರುತ್ತವೆ ಎಂದರು. 

ಮಹತ್ವದ ಕೃತಿ: ಕುಮಾರವ್ಯಾಸ ಹಾಗೂ ಪಂಪ ಕನ್ನಡ ಸಾಹಿತ್ಯ ಲೋಕಕ್ಕೆ ದೇವರು ಕೊಟ್ಟ ವರ ಪುತ್ರರಾಗಿದ್ದಾರೆ. ಹತ್ತನೆ ಶತಮಾನದ ಆದಿಕವಿ ಪಂಪ ಹಾಗೂ ಹದಿನೈದನೆ ಶತಮಾನದ ಕುಮಾರವ್ಯಾಸರ ಕೃತಿಗಳು ಇಂದಿಗೂ ಅಜರಾಮರವಾಗಿವೆ ಎಂದು ಗುಣಗಾನ ಮಾಡಿದರು. 

ಕುಮಾರವ್ಯಾಸ ಭಾರತವು ಜನಸಾಮಾನ್ಯರು ಓದಿ ಅರ್ಥೈಸಿಕೊಳ್ಳಬಹುದಾಗಿದೆ. ಈ ಕಾರಣದಿಂದಲೇ ಪಂಪ ಭಾರತಕ್ಕಿಂತ ಕುಮಾರವ್ಯಾಸ ಭಾರತವು ಜನಮಾನಸದಲ್ಲಿ ಹೆಚ್ಚು ಪ್ರಚಲಿತವಾಗಿದೆ. ಕಥೆಯನ್ನು ಇಂದಿನ ಸಂದರ್ಭಕ್ಕೆ ತಕ್ಕ ಹಾಗೆ ಹೇಳಿರುವುದು ಕುಮಾರವ್ಯಾಸ ಭಾರತದ ವಿಶೇಷತೆಯಾಗಿದೆ. ಈ ಕೃತಿ ಬರೆದು ಸುಮಾರು 600 ವರ್ಷಗಳಾದರೂ ಕೂಡ ಇಂದಿಗೂ ಜನಜೀವನ ಹಾಗೂ ಪ್ರಸ್ತುತ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳಿಗೆ ಹೊಂದಾಣಿಕೆಯಾಗುತ್ತದೆ ಎಂದರೆ ಕವಿಯ ಮನಸ್ಥಿತಿ ಹಾಗೂ ದೂರದೃಷ್ಟಿತ್ವ ಅರ್ಥವಾಗುತ್ತದೆ ಎಂದರು. 

ಸಮಾರಂಭದಲ್ಲಿ ಕಾಲೇಜ್‍ನ ಪ್ರಾಂಶುಪಾಲ ಕುಮಾರ್, ಉಪನ್ಯಾಸಕರಾದ ಯಶೋಧ, ಪ್ರತಿಭಾ, ರಾಜು, ಗೋವಿಂದನಾಯಕ್, ಉಮೇಶ್ ಸೇರಿದಂತೆ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News