ದಾವಣಗೆರೆ: ಖಾಸಗಿ ಬ್ಯಾಂಕ್ ನಿಂದ ರೈತನಿಗೆ ಬಂಧನ ವಾರೆಂಟ್

Update: 2018-11-14 13:50 GMT
ಸಾಂದರ್ಭಿಕ ಚಿತ್ರ

ದಾವಣಗೆರೆ,ನ.14: ಆ್ಯಕ್ಸಿಸ್ ಬ್ಯಾಂಕ್ ದಾವಣಗೆರೆಯ ರೈತನೊಬ್ಬನಿಗೆ ಬಂಧನದ ವಾರೆಂಟ್ ಹೊರಡಿಸುವ ಮೂಲಕ ಅನ್ನದಾತರ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರದ ಆದೇಶವನ್ನೇ ಧಿಕ್ಕರಿಸಿ ಅನ್ನದಾತನಿಗೆ ನೊಟೀಸ್ ನೀಡುತ್ತಿರುವ ಬ್ಯಾಂಕ್‍ಗಳು ಇದೀಗ ಬಂಧನದ ವಾರೆಂಟ್ ಹೊರಡಿಸುವ ಮೂಲಕ ಮುಖ್ಯಮಂತ್ರಿ, ಸರ್ಕಾರದ ಆದೇಶ ಕಡೆಗಣಿಸಿದೆ. 

ನಗರದ ಹದಡಿ ರಸ್ತೆಯ ಆ್ಯಕ್ಸಿಸ್ ಬ್ಯಾಂಕ್ ಹರಿಹರ ತಾಲೂಕಿನ ಬೇವಿನಹಳ್ಳಿ ಗ್ರಾಮದ ರೈತ ಮಹೇಶ್‍ಗೆ ಕೊಲ್ಕತ್ತಾದ ನ್ಯಾಯಾಲಯದಿಂದ ಬಂಧನದ ವಾರೆಂಟ್ ಹೊರಡಿಸಿದೆ. ಮಹೇಶ್ ಆ್ಯಕ್ಸಿಸ್ ಬ್ಯಾಂಕ್‍ನಲ್ಲಿ 2015ರಲ್ಲಿ ಪಡೆದ 3.93 ಲಕ್ಷ ರೂ. ಸಾಲಕ್ಕೆ 3 ತಿಂಗಳಿನಿಂದ ಸಾಲ ಕಟ್ಟಿಲ್ಲವೆಂಬ ಕಾರಣಕ್ಕೆ ಪಶ್ಚಿಮ ಬಂಗಾಳದ ಕೊಲ್ಕತ್ತಾದ ಕೋರ್ಟ್‍ನಿಂದ ಬಂಧನ ವಾರೆಂಟ್ ಹೊರಡಿಸಿದೆ.

ರೈತ ಮಹೇಶ್‍ಗೆ ಆ್ಯಕ್ಸಿಸ್ ಬ್ಯಾಂಕ್‍ನಿಂದ ಯಾವುದೇ ನೊಟೀಸ್ ಸಹ ಬಂದಿಲ್ಲ. ಆದರೆ, ಕೊಲ್ಕತ್ತಾದಿಂದ ದಿಢೀರನೇ ಬಂಧನದ ವಾರೆಂಟ್ ಬಂದಿರುವುದು ತೀವ್ರ ಆತಂಕ ಉಂಟುಮಾಡಿದೆ. ಭತ್ತ ಬೆಳೆಯಲು ಸಾಲ ಮಾಡಿದ್ದ ಮಹೇಶ್‍ ಕಳೆದ 3 ತಿಂಗಳಿನಿಂದ ಸಾಲ ಕಟ್ಟಿಲ್ಲ. ಅಷ್ಟರಲ್ಲಾಗಲೇ ಆ್ಯಕ್ಸಿಸ್ ಬ್ಯಾಂಕ್ ಕೊಲ್ಕತ್ತಾದಿಂದ ಅರೆಸ್ಟ್ ವಾರೆಂಟ್ ಹೊರಡಿಸಿದೆ. ಇತ್ತ ಕುಮಾರಪಟ್ಟಣಂ ಪೊಲೀಸರು ಮಹೇಶನನ್ನು ಬಂಧಿಸಲು ಹುಡುಕಾಟ ನಡಸಿರುವುದು ಆತನಲ್ಲಿ ಮತ್ತಷ್ಟು ಆತಂಕವನ್ನು ಹುಟ್ಟು ಹಾಕಿದೆ. ಕೊಲ್ಕತ್ತಾ ನ್ಯಾಯಾಲಯದ ಅರೆಸ್ಟ್ ವಾರೆಂಟ್ ಬರುತ್ತಿದ್ದಂತೆ ಹರಿಹರ ಸಮೀಪದ ಕುಮಾರಪಟ್ಟಣಂ ಪೊಲೀಸರು ಮಹೇಶ್‍ಗಾಗಿ ತೀವ್ರ ಶೋಧ ಕೈಗೊಂಡಿದ್ದಾರೆ. 

ಮಹೇಶ್‍ಗೆ ವಿಚಾರ ಗೊತ್ತಾಗುತ್ತಿದ್ದಂತೆಯೇ ರೈತ ಮುಖಂಡರೊಂದಿಗೆ ಆ್ಯಕ್ಸಿಸ್ ಬ್ಯಾಂಕ್‍ಗೆ ಬಂದು, ಅಧಿಕಾರಿಗಳನ್ನು ವಾರೆಂಟ್ ವಿಷಯವಾಗಿ ಪ್ರಶ್ನಿಸಿದ್ದಾರೆ. ಅದಕ್ಕೆ ಬ್ಯಾಂಕ್ ಅಧಿಕಾರಿಗಳು, ಮುಖ್ಯಮಂತ್ರಿ ಕುಮಾರಸ್ವಾಮಿ ಬ್ಯಾಂಕ್‍ಗಳಿಗೆ ಆದೇಶ ನೀಡುವುದಕ್ಕೂ ಮುಂಚಿನ ಪ್ರಕರಣ ಇದು. ಮಹೇಶ್‍ಗೆ ಬಂದ ನೋಟೀಸ್ ವಾಪಾಸ್ ಪಡೆಯುವುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News