ಕೇಂದ್ರ ಸರಕಾರದ ಅನುದಾನದ ಕೊರತೆ: ರಾಜ್ಯದಲ್ಲಿ ವಿದ್ಯಾರ್ಥಿಗಳ ಸಮವಸ್ತ್ರ ಒಂದು ಜತೆಗೆ ಇಳಿಕೆ

Update: 2018-11-14 14:35 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.14: ರಾಜ್ಯಾದ್ಯಂತ ಅನುದಾನದ ಕೊರತೆಯಿಂದಾಗಿ ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಎರಡು ಜತೆ ಸಮವಸ್ತ್ರವನ್ನು ಒಂದು ಜತೆಗೆ ಇಳಿಸಲಾಗಿದೆ.

2019-20ನೆ ಸಾಲಿನ ಶಾಲಾ ವಿದ್ಯಾರ್ಥಿಗಳು ಒಂದೇ ಸಮವಸ್ತ್ರದಲ್ಲೆ ಶಾಲೆಗೆ ಹೋಗಬೇಕು. ಇಷ್ಟು ವರ್ಷ ಸರ್ವ ಶಿಕ್ಷಣ ಅಭಿಯಾನ (ಎಸ್‌ಎಸ್‌ಎ) ನೀಡುತ್ತಿದ್ದ ಎರಡನೇ ಜೊತೆ ಸಮವಸ್ತ್ರ ದೊರೆಯುವುದಿಲ್ಲ. ಹೀಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡುವ ಒಂದರಲ್ಲೆ ವರ್ಷವಿಡೀ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.

ಕೇಂದ್ರ ಸರಕಾರದ ಅನುದಾನ ಕೊರತೆಯಿಂದಾಗಿ ಸರ್ವ ಶಿಕ್ಷಣ ಅಭಿಯಾನ ಬಹುತೇಕ ಯೋಜನೆಗಳನ್ನು ಕೈ ಬಿಡಲು ನಿರ್ಧರಿಸಿದೆ. ಹೀಗಾಗಿ ಮೊದಲಿಗೆ ಈ ಎರಡನೇ ಜತೆ ಸಮವಸ್ತ್ರ ನೀಡದಿರಲು ನಿರ್ಧರಿಸಿದೆ.

ಸರ್ವ ಶಿಕ್ಷಣ ಅಭಿಯಾನಕ್ಕೆ 2018 ರಲ್ಲಿ 1700 ಕೋಟಿ ರೂ.ಗಳಷ್ಟು ಅನುದಾನ ಸಿಗಬೇಕಿತ್ತು. ಆದರೆ, ಕೇಂದ್ರ ಸರಕಾರ ಕೇವಲ 577 ಕೋಟಿ ರೂ. ನೀಡಿದೆ. ಇದರಲ್ಲಿಯೂ ಮೊದಲನೇ ಹಂತದಲ್ಲಿ 370 ಕೋಟಿ ದೊರಕಿದ್ದು, ಅದರಲ್ಲಿಯೇ ಎಸ್‌ಎಸ್‌ಎ ಗುರುಚೇತನ, ಒಲಂಪಿಯಾಡ್, ನಲಿ-ಕಲಿ, ಚಿಣ್ಣರ ಪ್ರವಾಸ ಸೇರಿ ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ.

ಅಲ್ಲದೆ, ಇದೇ ಹಣದಲ್ಲಿ ಎಸ್‌ಎಸ್‌ಎ ಶಿಕ್ಷಕರು ಮತ್ತು ಆರ್‌ಎಂಎಸ್‌ಎ ಶಿಕ್ಷಕರಿಗೆ ವೇತನ ನೀಡಬೇಕಾಗಿದೆ. ಆದುದರಿಂದಾಗಿ, ಸರಕಾರ ನೀಡುವ ಅನುದಾನದ ಬಹುಪಾಲು ಹಣ ವೇತನಕ್ಕಾಗಿಯೆ ಖರ್ಚಾಗುತ್ತಿದೆ. ಎಸ್‌ಎಸ್‌ಎ, ಆರ್‌ಎಂಎಸ್‌ಎ ಶಿಕ್ಷಕರಿಗೆ ವಾರ್ಷಿಕ ವೇತನಕ್ಕಾಗಿ 328 ಕೊಟಿ ರೂ. ಅವಶ್ಯಕತೆ ಇದೆ. ಎರಡನೇ ಜತೆ ಸಮವಸ್ತ್ರಕ್ಕೆ ಕನಿಷ್ಠ 80 ಕೊಟಿ ರೂ. ಅವಶ್ಯಕತೆ ಇದೆ.

ಸರಕಾರಕ್ಕೆ ಮನವಿ: ಸರ್ವ ಶಿಕ್ಷಣ ಅಭಿಯಾನ ಅನುದಾನದಲ್ಲಿ ಕೇಂದ್ರ ಶೇ.60 ಮತ್ತು ರಾಜ್ಯ ಶೇ.40 ಅನುದಾನವನ್ನು ನೀಡುತ್ತಿದೆ. ಪ್ರತಿ ವರ್ಷ ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ ಯೋಜನಾ ಅನುಮೋದನಾ ಮಂಡಳಿ(ಪಿಎಬಿ) ಸಭೆ ವಿಳಂಬವಾಗಿದೆ. ಮಾರ್ಚ್‌ನಲ್ಲಿ ನಡೆಯಬೇಕಿದ್ದ ಸಭೆ ಆಗಸ್ಟ್‌ನಲ್ಲಿ ನಡೆದಿದೆ. ಇದರಿಂದಾಗಿ ಅನುದಾನವೂ ವಿಳಂಬವಾಗಿದೆ. ಈ ಸಂಬಂಧ ಎಸ್‌ಎಸ್‌ಎ ಸಿಎಂಗೆ ಪತ್ರ ಬರೆದಿದ್ದಾರೆ. ಸಿಎಂ ಎಂಎಚ್‌ಆರ್‌ಡಿಗೆ ಪತ್ರ ಬರೆದು ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೇಂದ್ರ ಸರಕಾರ ಪ್ರತಿ ವಿದ್ಯಾರ್ಥಿಗೆ 200 ರೂ. ಅಂತೆ ಸುಮಾರು 3.50 ಲಕ್ಷ ವಿದ್ಯಾರ್ಥಿಗಳಿಗೆ(ಎಲ್ಲ ಬಾಲಕಿಯರು, ಎಸ್ಸಿ, ಎಸ್ಟಿ, ಬಡತನ ರೇಖೆಗಿಂತ ಕೆಳಗಿರುವವರು) ಅನುದಾನ ಬಿಡುಗಡೆ ಮಾಡುತ್ತದೆ. ಇತರ ಸಾಮಾನ್ಯ ವರ್ಗದ 8.17 ವಿದ್ಯಾರ್ಥಿಗಳಿಗೆ 16.35 ಕೋಟಿ ಅಗತ್ಯವಿದ್ದು, ಇದನ್ನು ರಾಜ್ಯ ಸರಕಾರ ಭರಿಸುತ್ತದೆ. ಇನ್ನುಳಿದಂತೆ ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವರ್ಗದ ಹೆಣ್ಣು ಮಕ್ಕಳು, ಎಸ್ಸಿ, ಎಸ್ಟಿ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಬಾಲಕರಿಗೆ ಸಮವಸ್ತ್ರ ನೀಡಲು ಕೇಂದ್ರ ಸರಕಾರ ಅನುದಾನ ನೀಡುತ್ತದೆ. ಉಳಿದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಸಮವಸ್ತ್ರದಿಂದ ವಂಚಿತರಾಗಬಾರದು ಎಂಬ ಉದ್ದೆಶದಿಂದ ಈ ಮಕ್ಕಳಿಗಾಗಿ ರಾಜ್ಯ ಸರಕಾರ ಅನುದಾನ ಬಿಡುಗಡೆ ಮಾಡುತ್ತದೆ.

ಈ ವರ್ಷ ಬೇಗ?: ಕಳೆದ ವರ್ಷ ಸಮವಸ್ತ್ರ, ಪಠ್ಯಪುಸ್ತಕ ವಿತರಣೆ ವಿಳಂಬದಿಂದ ಎಚ್ಚೆತ್ತ ಶಿಕ್ಷಣ ಇಲಾಖೆ 2019-20ನೇ ಸಾಲಿನ ಸಮವಸ್ತ್ರ ಪೂರೈಕೆಗೆ ಟೆಂಡರ್ ಕರೆದು ಕಾರ್ಯಾದೇಶ ನೀಡಿದೆ. ಮೊದಲ ಹಂತವಾಗಿ ಕೆಎಚ್‌ಡಿಸಿ ಸಂಸ್ಥೆಗೆ 50 ಲಕ್ಷ ಮೀಟರ್ ಸಮವಸ್ತ್ರದ ಬಟ್ಟೆ ಸರಬರಾಜಿಗಾಗಿ ಕಾರ್ಯಾದೇಶ ನೀಡಿದೆ. ಅಲ್ಲದೆ, ಉಚಿತ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಮತ್ತು ಶಾಲಾ ದಿನಚರಿ ಪುಸ್ತಕಗಳ ಮುದ್ರಣಕ್ಕಾಗಿ 170 ಕೋಟಿ ರೂ. ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಆಡಳಿತಾತ್ಮಕ ಅನುಮೋದನೆ ನೀಡಿದೆ.

ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಕೇಂದ್ರ ಸರಕಾರದಿಂದ ಸಿಗಬೇಕಾಗಿರುವ ಅನುದಾನ ಸರಿಯಾದ ಸಮಯಕ್ಕೆ ಸಿಗದೇ ಇದ್ದುದರಿಂದ ಈ ವರ್ಷ ಎರಡನೇ ಸಮವಸ್ತ್ರ ನೀಡಲು ಸಾಧ್ಯವಾಗುತ್ತಿಲ್ಲ.

-ಎಂ.ಟಿ.ರೇಜು, ರಾಜ್ಯ ಯೋಜನಾ ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News