ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯ ಚರ್ಚೆಗೆ ಮಂಗಳೂರಿನಲ್ಲಿ ಚಾಲನೆ !

Update: 2018-11-15 07:53 GMT

ಮಂಗಳೂರು. ನ.15: ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪರನ್ನು  ಕೆಳಗಿಳಿಸಿ ಯುವನಾಯಕನಿಗೆ ಪಟ್ಟ ಕಟ್ಟಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ. 

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳೂರಿಗೆ ಆಗಮಿಸಿ  ಬಿಜೆಪಿ  ಮತ್ತು ಆರ್ ಎಸ್ ಎಸ್ ಮುಖಂಡರ ಜೊತೆ ಅಧ್ಯಕ್ಷರ ಬದಲಾವಣೆಯ ವಿಚಾರದಲ್ಲಿ ಚರ್ಚಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕರಾದ ಸುನೀಲ್ ಕುಮಾರ್ ಮತ್ತು ಅರವಿಂದ ಲಿಂಬಾವಳಿ ಅವರು ರಾಜ್ಯ ಬಿಜೆಪಿ ಅಧ್ಯಕ್ಷರ ರೇಸ್ ನಲ್ಲಿರುವುದು ಬಹಿರಂಗಗೊಂಡಿದೆ.

ಇವರಲ್ಲಿ ಯಾರಾದರು ಒಬ್ಬರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವ ಬಗ್ಗೆ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಯುವನಾಯಕನ ನಾಯಕತ್ವದಲ್ಲಿ ಲೋಕಸಭೆ ಚುನಾವಣೆ ಎದುರಿಸುವ ಬಗ್ಗೆ ಪಕ್ಷದ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ  ಮಂಗಳವಾರ ಮಂಗಳೂರಿಗೆ ಆಗಮಿಸಿ ಆರ್ ಎಸ್ ಎಸ್ ಬೈಠಕ್ ನಲ್ಲಿ ಮುಖಂಡರೊಂದಿಗೆ ಮುಂದಿನ ಲೋಕಸಭಾ ಚುನಾವಣೆ ಎದುರಿಸಲು ಕೈಗೊಳ್ಳಬೇಕಾದ ತಯಾರಿಯ ಬಗ್ಗೆ ಅಭಿಪ್ರಾಯ ಕೇಳಿದ್ದಾರೆ.  ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಅಮಿತ್ ಶಾ  ಮಾತುಕತೆ ನಡೆಸಿದ್ದಾರೆ.

ಇಂದು ಬೆಳಗ್ಗೆ  ಅಮಿತ್ ಶಾ  ರಾಜ್ಯ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿ ಬಿಜೆಪಿ ಅಧ್ಯಕ್ಷರ ಬದಲಾವಣೆಯ ವಿಚಾರದಲ್ಲಿ ಅಭಿಪ್ರಾಯ ಕೇಳಿದ್ದಾರೆ ಎನ್ನಲಾಗಿದೆ. ಆದರೆ ಈ ವಿಚಾರದಲ್ಲಿ ತನ್ನ ಯಾವುದೇ ನಿರ್ಧಾರವನ್ನು ಅಮಿತ್ ಶಾ ತಿಳಿಸಿಲ್ಲ. ಲೋಕಸಭಾ ಚುನಾವಣೆಗೆ ತಯಾರಿ ನಡೆಸುವಂತೆ ಪಕ್ಷದ ಮುಖಂಡರಿಗೆ ಆದೇಶ ನೀಡಿ ಅಮಿತ್ ಶಾ ದಿಲ್ಲಿಗೆ ವಿಶೇಷ ವಿಮಾನದಲ್ಲಿ ವಾಪಸಾಗಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News