ಅಯೋಧ್ಯೆಯ ಮುಸ್ಲಿಮರಿಗೆ ರಕ್ಷಣೆ ಕೋರಿದ ಬಾಬರಿ-ರಾಮ ಜನ್ಮಭೂಮಿ ಪ್ರಕರಣದ ಅರ್ಜಿದಾರನ ಕುಟುಂಬ

Update: 2018-11-15 10:32 GMT

ಹೊಸದಿಲ್ಲಿ, ನ.15: ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಬಹಳಷ್ಟು ವರ್ಷಗಳ ಹಿಂದೆ ಪ್ರಕರಣ ದಾಖಲಿಸಿದ್ದ  ಹಾಶಿಂ ಅನ್ಸಾರಿ ಎಂಬವರ ಪುತ್ರ ಇಕ್ಬಾಲ್ ಅನ್ಸಾರಿ ತಮ್ಮ ಕುಟುಂಬ ಸದಸ್ಯರು ಹಾಗೂ ಅಯೋಧ್ಯೆಯ ಮುಸ್ಲಿಮರಿಗೆ ರಕ್ಷಣೆ ಕೋರಿದ್ದಾರೆ.

ತಮ್ಮ ತಂದೆ 2016ರಲ್ಲಿ ನಿಧನರಾದ ನಂತರ ಅವರು ದಾಖಲಿಸಿದ್ದ ಪ್ರಕರಣವನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಇಕ್ಬಾಲ್ ಅನ್ಸಾರಿ ಅವರು ವಿಶ್ವ ಹಿಂದು ಪರಿಷದ್ ನವೆಂಬರ್ 25ರಂದು ಅಯೋಧ್ಯೆಯಲ್ಲಿ ನಡೆಸಲಿರುವ ರ್ಯಾಲಿ (ಧರ್ಮ ಸಭಾ)  ಹಿನ್ನೆಲೆಯಲ್ಲಿ ರಕ್ಷಣೆ ಕೋರಿದ್ದಾರೆ.

“ಪ್ರಕರಣ ಸುಪ್ರೀಂ ಕೋರ್ಟಿನ ಮುಂದಿರುವಾಗ ರ್ಯಾಲಿಯ ಅಗತ್ಯವೇನಿದೆ ?, ಅಯೋಧ್ಯೆಯ ಮುಸ್ಲಿಮರು ತಮ್ಮ ಭದ್ರತೆಯ ಬಗ್ಗೆ ಆತಂಕಿತರಾಗಿದ್ಧಾರೆ.  ರಾಜ್ಯ ಸರಕಾರ ನಮ್ಮ ಕುಟುಂಬ ಹಾಗೂ ಅಯೋಧ್ಯೆಯ ಮುಸ್ಲಿಮರಿಗೆ ರಕ್ಷಣೆಯ ಭರವಸೆ ನೀಡದೇ ಇದ್ದರೆ ನಮಗೆ ಅಯೋಧ್ಯೆ ಬಿಟ್ಟು ತೆರಳದೇ ಅನ್ಯ ಮಾರ್ಗವಿಲ್ಲ'' ಎಂದಿದ್ದಾರೆ ಅನ್ಸಾರಿ.

ಅಯೋಧ್ಯೆಯಲ್ಲಿ ವಿಹಿಂಪ ಡಿಸೆಂಬರ್ 6, 1992ರ ಮಾದರಿಯ ಸನ್ನಿವೇಶ ನಿರ್ಮಿಸಲು ಯತ್ನಿಸುತ್ತಿದೆ. ವಿಧಾನಸೌಧವನ್ನು ಘೇರಾವ್ ಮಾಡುವ ಬದಲು ವಿಹಿಂಪ ಅಯೋಧ್ಯೆಯಲ್ಲಿ ರ್ಯಾಲಿ ಆಯೋಜಿಸಿದೆ. ಇಲ್ಲಿಯ ತನಕ ಜಿಲ್ಲಾಡಳಿತದ ಯಾರು ಕೂಡ ನಮಗೆ ರಕ್ಷಣೆಯ ಭರವಸೆ ನೀಡಿಲ್ಲ'' ಎಂದು ಅವರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News