ಶಬರಿಮಲೆಯಲ್ಲಿ ಸಂಪ್ರದಾಯಗಳು ಮತ್ತು ಭಕ್ತರ ಭಾವನೆಗಳನ್ನು ಗೌರವಿಸಬೇಕು:ಶ್ರೀ ಶ್ರೀ ರವಿಶಂಕರ್

Update: 2018-11-15 17:42 GMT

ಫುಜೈರಾ ಸಿಟಿ(ಯುಎಇ),ನ.15: ಶಬರಿಮಲೆ ಕ್ಷೇತ್ರಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶಾವಕಾಶದ ವಿಷಯದಲ್ಲಿ ಸಂಪ್ರದಾಯಗಳು ಮತ್ತು ಭಕ್ತರ ಭಾವನೆೆಗಳನ್ನು ಗೌರವಿಸಬೇಕು ಮತ್ತು ಅಯ್ಯಪ್ಪ ಸ್ವಾಮಿಯ ದೇವಸ್ಥಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಲಿಂಗ ಸಮಾನತೆಯನ್ನು ಅನ್ವಯಿಸುವ ಅಗತ್ಯವಿಲ್ಲ ಎಂದು ಆರ್ಟ್ ಆಫ್ ಲಿವಿಂಗ್ ಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರು ಗುರುವಾರ ಇಲ್ಲಿ ಹೇಳಿದರು.

ಯೋಗಾಚರಣೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಫುಜೈರಾ ಆಡಳಿತಗಾರರ ಆಹ್ವಾನದ ಮೇರೆಗೆ ಯುಎಇಗೆ ನಾಲ್ಕು ದಿನಗಳ ಭೇಟಿಯಲ್ಲಿರುವ ಶ್ರೀ ಶ್ರೀ ಅವರು, ಧರ್ಮ ಮತ್ತು ನಂಬಿಕೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಯಾವುದೇ ಬದಲಾವಣೆಯನ್ನು ಆಧ್ಯಾತ್ಮಿಕ ನಾಯಕರೊಂದಿಗೆ ಸಮಾಲೋಚನೆಗಳ ಬಳಿಕವೇ ಮಾಡಬೇಕು ಎಂದರು.

ಇಲ್ಲಿ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಸಂಸ್ಥೆಗೆ ಸಂದರ್ಶನವನ್ನು ನೀಡಿದ ಅವರು,ಸಂಪ್ರದಾಯವೆನ್ನುವುದಿರುತ್ತದೆ,

ಜೊತೆಗೆ ಜನರ ಭಾವನೆಗಳೂ ಇರುತ್ತವೆ. ನಾವು ಅವುಗಳನ್ನು ಗೌರವಿಸಬೇಕು ಎಂದರು.

ಶಬರಿಮಲೆ ದೇವಸ್ಥಾನದ ವಿಷಯದಲ್ಲಿ ಲಿಂಗ ಸಮಾನತೆಯ ವಿಷಯ ಉದ್ಭವಾಗುವುದಿಲ್ಲ. ವಾಸ್ತವದಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜ್ಯಸ್ಥಾನವಿದೆ. ಮಹಿಳೆಯರಿಗೆ ಸುರಕ್ಷತೆಯ ಭರವಸೆಯಿದ್ದಾಗ, ವೃತ್ತಿಜೀವನದಲ್ಲಿ ಅಸಮಾನ ಅವಕಾಶಗಳಿದ್ದಾಗ ಮತ್ತು ಹೆಣ್ಣುಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆಯುವಂತಿದ್ದಾಗ ನಿಜವಾದ ಸಮಾನತೆಯಿರುತ್ತದೆ ಎಂದರು.

 ಆದರೆ ಈ ದೇವಸ್ಥಾನದ ವಿವಾದವು ಜನರಲ್ಲಿ ಇಷ್ಟೊಂದು ಭಾವನಾತ್ಮಕ ನೋವು ಮತ್ತು ಆಘಾತವನ್ನುಂಟು ಮಾಡಿದೆ. ಇದನ್ನು ನಿವಾರಿಸಬಹುದಿತ್ತು ಎಂದರು. ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶಾವಕಾಶವನ್ನು ಕಲ್ಪಿಸಿರುವ ತನ್ನ ಸೆ.28 ತೀರ್ಪಿನ ಪುನರ್‌ಪರಿಶೀಲನೆಗ ಸರ್ವೋಚ್ಚ ನ್ಯಾಯಾಲಯವು ಒಪ್ಪಿಕೊಂಡಿರುವುದು ತನಗೆ ಸಂತಸವನ್ನುಂಟು ಮಾಡಿದೆ ಎಂದು ಅವರು ಹೇಳಿದರು.

ಸರ್ವೋಚ್ಚ ನ್ಯಾಯಾಲಯದಲ್ಲಿ ಶಬರಿಮಲೆಗೆ ಸಂಬಂಧಿಸಿದ ವಾಸ್ತವಾಂಶಗಳನ್ನು ಸಂಪೂರ್ಣವಾಗಿ ಮಂಡಿಸಿರಲಿಕ್ಕಿಲ್ಲ ಎಂದ ಅವರು,ಈ ದೇವಸ್ಥಾನಕ್ಕೆ ಭೇಟಿ ನೀಡುವ ಇತರ ಧರ್ಮಗಳ ಜನರೂ ಅಲ್ಲಿಯ ಪುರಾತನ ಸಂಪ್ರದಾಯಗಳನ್ನು ಪಾಲಿಸುತ್ತಿದ್ದಾರೆ ಎಂದರು.

ಶಬರಿಮಲೆ ಯಾತ್ರೆಯಲ್ಲಿ 41 ದಿನಗಳ ಕಡ್ಡಾಯ ವ್ರತಾಚರಣೆ ಮುಖ್ಯವಾಗಿದೆ. ಋತುಚಕ್ರವನ್ನು ಹೊಂದಿರುವ ಮಹಿಳೆಯರು ಈ ಕಠಿಣ ವ್ರತವನ್ನು ಆಚರಿಸಲು ಸಾಧ್ಯವಿಲ್ಲ ಮತ್ತು ಇದೇ ಕಾರಣದಿಂಂದ ಅವರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದ ಅವರು ತನ್ನ ವಾದಕ್ಕೆ ಸಮರ್ಥನೆಯಾಗಿ ಚರ್ಚ್‌ಗಳಲ್ಲಿ ಪಾದರಕ್ಷೆಗಳಿಗೆ ಅವಕಾಶವಿರುವುದು ಮತ್ತು ದೇವಸ್ಥಾನಗಳು ಹಾಗೂ ಮಸೀದಿಗಳಲ್ಲಿ ಅವಕಾಶವಿಲ್ಲದಿರುವುದನ್ನು ಬೆಟ್ಟು ಮಾಡಿದರು. ಇವೆಲ್ಲ ಕೆಲವು ಸಾಂಸ್ಕೃತಿಕ, ಸಾಂಪ್ರದಾಯಕ ಪದ್ಧತಿಗಳಾಗಿವೆ. ಚರ್ಚ್‌ಗಳಲ್ಲಿ ಪಾದರಕ್ಷೆಗಳನ್ನು ಧರಿಸಬಹುದಾದರೆ ನೀವು ದೇವಸ್ಥಾನಗಳಲ್ಲಿ ಪಾದರಕ್ಷೆ ಧರಿಸಿ ಏಕೆ ಪ್ರಾರ್ಥಿಸುವುದಿಲ್ಲ ಎಂದು ಪ್ರಶ್ನಿಸಿದರೆ ಅದು ಸೂಕ್ತವಲ್ಲ ಎಂಬ ಉತ್ತರ ದೊರೆಯುತ್ತದೆ. ತರ್ಕವು ಒಂದೇ ಆಗಿದ್ದರೂ ಅದನ್ನು ಎಲ್ಲ ಸಂದರ್ಭಗಳಲ್ಲಿಯೂ ಅನ್ವಯಿಸಲಾಗುವುದಿಲ್ಲ. ಏಕೆಂದರೆ ಅದು ನಮ್ಮ ಸಂಪ್ರದಾಯವಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News