ಎಲ್ಲ ಜಿಲ್ಲೆಗಳಲ್ಲಿಯೂ ಉರ್ದು ಕಲಿಕಾ ಕೇಂದ್ರ ಸ್ಥಾಪನೆ: ಅಕಾಡೆಮಿ ಅಧ್ಯಕ್ಷ ಮುಬೀನ್ ಮುನಾವರ್

Update: 2018-11-15 18:39 GMT

ತುಮಕೂರು,ನ.15: ಉರ್ದು ಭಾಷೆಯನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಉರ್ದು ಅಕಾಡೆಮಿ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಉರ್ದು ಕಲಿಕಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಮುಬೀನ್ ಮುನಾವರ್ ತಿಳಿಸಿದ್ದಾರೆ.

ನಗರದ ಧ್ಹಾನಾ ಪ್ಯಾಲೇಸ್ ನಲ್ಲಿ ಉರ್ದು ಅಕಾಡೆಮಿ ಮತ್ತು ತಹರೀಕ್ ಎ-ಉರ್ದು ಅದಬ್ ಜಂಟಿಯಾಗಿ ಆಯೋಜಿಸಿದ್ದ ಉರ್ದು ಶೈಕ್ಷಣಿಕ ಸಮ್ಮೇಳನದಲ್ಲಿ ನಿವೃತ್ತ ಶಾಲಾ ಶಿಕ್ಷಕರಿಗೆ ಅಭಿನಂದಿಸಿ ಮಾತನಾಡುತ್ತಿದ್ದ ಅವರು, ಈಗಾಗಲೇ ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ 50 ಕಲಿಕಾ ಕೇಂದ್ರಗಳು ನಡೆಯುತ್ತಿದ್ದು, ತುಮಕೂರು ಜಿಲ್ಲೆಯ ಜಿಲ್ಲಾ ಕೇಂದ್ರದ ಜೊತೆಗೆ, ಎಲ್ಲಾ ತಾಲೂಕುಗಳಲ್ಲಿಯೂ ಕಲಿಕಾ ಕೇಂದ್ರ ತೆರೆಯಲಿದ್ದೇವೆ ಎಂದರು.

ಕಲಿಯುವಂತದ್ದು ನಿರಂತರವಾಗಿರುತ್ತದೆ. ಯಾರು ಕಲಿಯಲು ಆಸಕ್ತರಿರುತ್ತಾರೋ, ಅವರು ಮಾತ್ರ ಕಲಿಸಲು ಆರ್ಹರು,. ಮಕ್ಕಳಿಗೆ ಧಾರ್ಮಿಕ ಆಚಾರ-ವಿಚಾರಗಳ ಜೊತೆ ಜೊತೆಗೆ, ಭಾಷೆಯ ಬಗ್ಗೆಯೂ ಮನವರಿಕೆ ಮಾಡಿಕೊಡಬೇಕಿದೆ. ಭಾಷೆಯ ಸ್ಪಷ್ಟ ಉಚ್ಚಾರಣೆ ಮತ್ತು ಅದರ ಅರ್ಥವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಉರ್ದು ಪತ್ರಿಕೆಗಳನ್ನು ಓದುವುದನ್ನು ಶಿಕ್ಷಕರು ರೂಢಿಸಿಕೊಳ್ಳಬೇಕೆಂದು ಎಂದು ಮುಬೀನ್ ಮುನಾವರ್ ತಿಳಿಸಿದರು.

ಸರಕಾರ ಉರ್ದು ಭಾಷೆ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದೆಯಾದರೂ ಅದು ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಶೈಕ್ಷಣಿಕ ವರ್ಷ ಆರಂಭವಾಗಿ ಮಧ್ಯವಾರ್ಷಿಕ ಪರೀಕ್ಷೆ ಮುಗಿದರೂ ಇನ್ನೂ ಕೆಲ ತರಗತಿಗಳ ಪಠ್ಯಪುಸ್ತಕ ಬಂದಿಲ್ಲ. ಕೇಳಿದರೆ ಮುದ್ರಣದಲ್ಲಿದೆ ಎನ್ನುತ್ತಾರೆ. ಶಿಕ್ಷಕರ ಕೊರತೆ ಅಪಾರವಾಗಿದೆ. ಈ ಬಗ್ಗೆ ಡಿಡಿಪಿಐ ಅವರನ್ನು ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಅಂಗನವಾಡಿಗಳಲ್ಲಿಯೂ ಉರ್ದು ಭಾಷೆ ಕಲಿಕೆಗೆ ಅಂತಹ ಪ್ರೋತ್ಸಾಹ ದೊರೆಯುತ್ತಿಲ್ಲವೆಂದು ಕರ್ನಾಟಕ ರಾಜ್ಯ ಉರ್ದು ಅಕಾಡೆಮಿ ಅಧ್ಯಕ್ಷ ಮುಬೀನ್ ಮುನಾವರ್ ನುಡಿದರು.

ಶಿಕ್ಷಣ ತಜ್ಞ ಸೈಯದ್ ತನ್ವಿರ್ ಅಹಮದ್ ಮಾತನಾಡಿ, ಮಕ್ಕಳಿಗೆ ಕೇವಲ ಸೂಚನೆ ನೀಡುವ ಶಿಕ್ಷಕರಿಂದ ಯಾವುದೇ ಪ್ರಯೋಜನವಿಲ್ಲ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಶಿಕ್ಷಕರ ಅಗತ್ಯವಿದೆ. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ, ಅವರು ಹಿಂದುಳಿಯಲು ಕಾರಣವೇನು ಎಂಬುದನ್ನು ತಿಳಿದು, ಪರಿಹರಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಿ.ಜಿ.ಗಂಗಹನುಮಯ್ಯ, ಬಡವರ ಮಕ್ಕಳೇ ಕಲಿಯುತ್ತಿರುವ ಸರಕಾರಿ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ಕುಂಠಿತದ ನೆಪದಲ್ಲಿ ಹಲವು ಶಾಲೆಗಳು ಮುಚ್ಚುತ್ತಿವೆ. ಇಂತಹ ಹೊತ್ತಿನಲ್ಲಿ ಉರ್ದು ಅಕಾಡೆಮಿ ಹಮ್ಮಿಕೊಂಡಿರುವ ಈ ಶೈಕ್ಷಣಿಕ ಸಮ್ಮೇಳನ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಇದೊಂದು ಉತ್ತಮ ಕೆಲಸ. ಇದರಲ್ಲಿ ತಾಯಂದಿರ ಜವಾಬ್ದಾರಿ ಹೆಚ್ಚಿದೆ. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ, ಅವರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಬೇಕಾಗಿದೆ ಎಂದರು.

ಕೃಷಿ ವಿಜ್ಞಾನಿ ಡಾ.ಅಬ್ದುಲ್ ಜಬ್ಬರ್ ಮಾತನಾಡಿ, ನನ್ನ ಇಂದಿನ ಸ್ಥಿತಿಗೆ ನನಗೆ ಪಾಠ ಹೇಳಿದ ಗುರುಗಳೇ ಕಾರಣ. ಅವರನ್ನು ಇಂದಿಗೂ ಸ್ಮರಿಸಿಕೊಳ್ಳುತ್ತೇನೆ. ಶಿಸ್ತು ಮತ್ತು ಸಮಯ ಪ್ರಜ್ಞೆಯ ಜೊತೆಗೆ, ತಾವು ಮಕ್ಕಳಿಗೆ ಬೋಧಿಸಿದಂತೆಯೇ ಬದುಕಿದವರು. ಪ್ರತಿಯೊಂದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಿ. ಇಸ್ಲಾಮಿಕ ಭಯೋತ್ಪಾದನೆ ಎಂಬ ಶಬ್ದ ಇತ್ತೀಚಗೆ ಕೇಳಿ ಬರುತ್ತಿದ್ದು, ಈ ಅಪವಾದವನ್ನು ಅಳಿಸಿ ಹಾಕಲು ಉರ್ದು ಶಾಲೆಗಳು ಶಿಕ್ಷಣ ಪಣ ತೊಡುವಂತೆ ಕರೆ ನೀಡಿದರು.

ವೇದಿಕೆಯಲ್ಲಿ ತಹರೀಕ್ ಎ-ಉರ್ದು ನ ಮುಖ್ಯಸ್ಥರಾದ ತಾಜುದ್ದೀನ್ ಶರೀಫ್, ಇಮ್ತಿಯಾಜ್ ಉಮ್ರಿ ಮತ್ತಿತರರು ಉಪಸ್ಥಿತರಿದ್ದರು.
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News