ಭಾವನೆಗಳ ಕುದುರೆ ಏರಿದ ಪುಟಗಳು

Update: 2018-11-15 18:46 GMT

ಒಡಲ ಖಾಲಿ ಪುಟ ಕಾವೇರಿ ಎಸ್. ಎನ್. ಅವರ ಎರಡನೇ ಕೃತಿ. ಲೇಖನಗಳ ಸಂಗ್ರಹ ಇದಾಗಿದ್ದರೂ ಬಾಲ್ಯದ ನೆನಪುಗಳ ಮೂಲಕ ಪ್ರಬಂಧದ ಗುಣವನ್ನು ಪಡೆದುಕೊಂಡಿರುವ ಹಲವು ಹೃದಯಸ್ಪರ್ಶಿ ಬರಹಗಳಿವೆ. ಬರಹಗಳ ಗುಣಗಳಿಗೆ ತಕ್ಕಂತೆ ಲೇಖಕಿ ನಾಲ್ಕು ಭಾಗಗಳನ್ನು ಮಾಡಿರುವುದು ಓದುಗರಿಗೆ ಅನುಕೂಲವಾಗಿದೆ. ಮೊದಲ ಭಾಗದಲ್ಲಿ ತನ್ನ ಬಾಲ್ಯ ಮತ್ತು ಬದುಕಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಮೇರಿ ಟೀಚರ್ ಮತ್ತು ಇಂಗ್ಲಿಷ್ ಎಂಬ ಮಾಯಾಂಗನೆ, ತಮಗೆ ಅಕ್ಷರ ಕಲಿಸಿದ ಹಿರಿಯರ ಆರ್ದ್ರ ನೆನಪು, ಬಾಲ್ಯದ ತುಂಟತನಗಳು, ಮದುವೆ ಲೋಕ ಇವೆಲ್ಲವನ್ನು ಈ ಅಧ್ಯಾಯದಲ್ಲಿ ತೆರೆದಿಡುತ್ತದೆ. ಈ ಲೇಖನಗಳಿಗೆ ಕಥನ ಗುಣವಿದೆ. ಎಲ್ಲರ ಬದುಕಿನ ಅನುಭವವೂ ಆಗಬಹುದಾದ ನೆನಪುಗಳು ನಮ್ಮನ್ನು ಕಾಡುತ್ತವೆ.

ಎರಡನೆ ಅಧ್ಯಾಯವನ್ನು ವಿಚಾರಗಳಿಗೆ ಮೀಸಲಿಟ್ಟಿದ್ದಾರೆ. ದೇಶವನ್ನು ಕಾಡುವ ನರಹತ್ಯೆಗಳು, ಮಾಧ್ಯಮ-ಮಹಿಳೆ ನಡುವಿನ ವಿಚಾರಗಳು, ಧಾರ್ಮಿಕ ಮನಸ್ಸಿನ ಮೈಲಿಗೆ ಎಂದು ಲೇಖಕಿ ಭಾವಿಸುವ ಮುಟ್ಟು, ರೈತರನ್ನು ನೋಡುವ ಕ್ರಮ, ಶಿಕ್ಷಣ, ಸಮಾಜ ಮೊದಲಾದ ವಿಷಯಗಳನ್ನು ಈ ಭಾಗದಲ್ಲಿ ಚರ್ಚಿಸುತ್ತಾರೆ. ಮೂರನೇ ಅಧ್ಯಾಯವನ್ನು ಅಸಂಗತ ಲಹರಿಯೆಂದು ಲೇಖಕಿ ಕರೆಯುತ್ತಾರೆ. ಬದುಕು, ಅಧ್ಯಾತ್ಮ, ಮೂರ್ತ ಅಮೂರ್ತ ಭಾವನೆಗಳು, ವಿಧಿ ವಿಲಾಸಗಳೆಲ್ಲ ಈ ಅಸಂಗತ ಲಹರಿಯಲ್ಲಿ ಹರಿಯುತ್ತದೆ. ದಟ್ಟ ಭಾವನೆಗಳ ಕೈವಾಡ ಈ ಬರಹಗಳಲ್ಲಿವೆ. ನಾಲ್ಕನೇ ಅಧ್ಯಾಯ ಪ್ರೇಮ ನಿವೇದನೆಗಳಿಗೆ ಮೀಸಲಾಗಿವೆ. ಹದಿಹರೆಯದ ಪುಳಕಗಳು ಇಲ್ಲಿ ಕೆಲಸ ಮಾಡಿವೆ. ಕನಸು, ವಾಸ್ತವ, ಪ್ರೇಮ ನಿವೇದನೆಗಳೇ ಇಲ್ಲಿ ಮುಖ್ಯ. ರಮ್ಯ ಭಾವದಿಂದ ಹುಟ್ಟಿದ ಬರಹಗಳು. ಈ ಕೃತಿಯಲ್ಲಿ ಒಟ್ಟು 40 ಬರಹಗಳಿವೆ.
 ಪ್ರಜೋದಯ ಪ್ರಕಾಶನ ಹಾಸನ ಈ ಕೃತಿಯನ್ನು ಹೊರತಂದಿದೆ. ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಧನ ಸಹಾಯ ಪಡೆದ ಪುಸ್ತಕ ಇದಾಗಿದೆ. 152 ಪುಟಗಳಿರುವ ಈ ಕೃತಿಯ ಮುಖಬೆಲೆ 120 ರೂಪಾಯಿ. ಆಸಕ್ತರು 87922 76742 ದೂರವಾಣಿಯನ್ನು ಸಂಪಕಿರ್ಸಬಹುದು.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News