ಬಾಯಿ ಕ್ಯಾನ್ಸರ್: ಈ ಅಂಕಿ ಅಂಶ ನೋಡಿದರೆ ಬೆಚ್ಚಿ ಬೀಳುತ್ತೀರಿ!

Update: 2018-11-16 03:53 GMT

ಮುಂಬೈ, ನ.16: ದೇಶದಲ್ಲಿ ಬಾಯಿ ಕ್ಯಾನ್ಸರ್ ವ್ಯಾಪಕವಾಗಿ ಹೆಚ್ಚುತ್ತಿದ್ದು, ಕಳೆದ ಆರು ವರ್ಷಗಳಲ್ಲಿ ಬಾಯಿ ಕ್ಯಾನ್ಸರ್‌ನಿಂದ ಬಳಲುವವರ ಪ್ರಮಾಣ ಶೇಕಡ 114ರಷ್ಟು ಹೆಚ್ಚಿದೆ ಎನ್ನುವ ಆತಂಕಕಾರಿ ವಿಚಾರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಕ್ಯಾನ್ಸರ್ ತಡೆ ಮತ್ತು ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನದಿಂದ ಬಹಿರಂಗವಾಗಿದೆ.

ಈ ವರ್ಷ ಒಟ್ಟು 11.5 ಲಕ್ಷ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿದ್ದು, 2012ರಲ್ಲಿ ಈ ಪ್ರಮಾಣ 10 ಲಕ್ಷದಷ್ಟಿತ್ತು. ಒಟ್ಟಾರೆ ಶೇಕಡ 15.7ರಷ್ಟು ಪ್ರಕರಣಗಳು ಹೆಚ್ಚಿದಂತಾಗಿದೆ. ಜನಸಂಖ್ಯಾ ಹೆಚ್ಚಳ ಹಾಗೂ ಲಭ್ಯವಿರುವ ಉತ್ತಮ ರೋಗಪತ್ತೆ ತಂತ್ರಜ್ಞಾನದಿಂದಾಗಿ ಈ ಹೆಚ್ಚಳ ಪ್ರಮಾಣ ಭಯಾನಕವೇನೂ ಅಲ್ಲ. ಕ್ಯಾನ್ಸರ್ ಸಂಬಂಧಿ ಆರೋಗ್ಯ ಸಂಕೀರ್ಣತೆಗಳಿಂದ 2012ರಲ್ಲಿ 7 ಲಕ್ಷ ಮಂದಿ ಮೃತಪಟ್ಟಿದ್ದರೆ, ಈ ವರ್ಷ ಅದು 7.8 ಲಕ್ಷಕ್ಕೆ ಹೆಚ್ಚಿದೆ. ಒಟ್ಟಾರೆ ಶೇಕಡ 12ರಷ್ಟು ಹೆಚ್ಚಳವಾಗಿದೆ ಎಂದು ಟಾಟಾ ಸ್ಮಾರಕ ಆಸ್ಪತ್ರೆಯ ತಜ್ಞರು ಹೇಳಿದ್ದಾರೆ.

ಆತಂಕಕಾರಿ ವಿಚಾರವೆಂದರೆ ಬಾಯಿ ಮತ್ತು ತುಟಿ ಕ್ಯಾನ್ಸರ್ ಈ ಅವಧಿಯಲ್ಲಿ ಶೇಕಡ 114ರಷ್ಟು ಹೆಚ್ಚಿರುವುದು. ಸ್ತನ ಕ್ಯಾನ್ಸರ್ ನಗರ ಜೀವನಶೈಲಿ ಯೋಗವಾಗಿ ಮಾರ್ಪಟ್ಟಿರುವುದು ಕೂಡಾ ಅಧ್ಯಯನದಿಂದ ತಿಳಿದುಬಂದಿದ್ದು, ಸ್ತನ ಕ್ಯಾನ್ಸರ್ ಏರಿಕೆ ಪ್ರಮಾಣ ಶೇಕಡ 11ರಷ್ಟಿದೆ. 2012ರಲ್ಲಿ 1.4 ಲಕ್ಷ ಸ್ತನ ಕ್ಯಾನ್ಸರ್ ಪ್ರಕರಣ ಪತ್ತೆಯಾಗಿದ್ದರೆ, 2018ರಲ್ಲಿ 1.6 ಲಕ್ಷ ಪ್ರಕರಣಗಳು ವರದಿಯಾಗಿವೆ.

ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಅಭಿವೃದ್ಧಿಪಡಿಸಿದ ವೆಬ್ ಆಧರಿತ ಗ್ಲೋಬೊಕಾನ್ ಕಾರ್ಯಕ್ರಮದ ಅನ್ವಯ ಈ ಅಂಕಿ ಅಂಶ ಅಂದಾಜಿಸಲಾಗಿದ್ದು, 2018ರ ಅಂದಾಜನ್ನು ಐಎಆರ್‌ಸಿ ಬಿಡುಗಡೆ ಮಾಡಿದೆ.

ಆದರೆ ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದ ಗರ್ಭಕಂಠದ ಕ್ಯಾನ್ಸರ್ ಪ್ರಮಾಣ ಈ ಅವಧಿಯಲ್ಲಿ ಶೇಕಡ 21ರಷ್ಟು ಇಳಿಕೆ ಕಂಡಿದ್ದು, 2012ರಲ್ಲಿ 1.23 ಲಕ್ಷ ಪ್ರಕರಣಗಳು ವರದಿಯಾಗಿದ್ದರೆ, ಈ ವರ್ಷ ಕೇವಲ 96 ಸಾವಿರ ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News