ನ್ಯಾಯಾಲಯಕ್ಕೆ ಶರಣಾದ ಉತ್ತರ ಪ್ರದೇಶ ಉಪಮುಖ್ಯಮಂತ್ರಿ

Update: 2018-11-16 11:28 GMT

ಲಕ್ನೋ, ನ.16: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ಎರಡು ಪ್ರಕರಣಗಳು ಹಾಗೂ ದುರ್ಗಾ ಪೆಂಡಾಲ್ ಸಮಿತಿ ಕುರಿತಾದ ಹತ್ತು ವರ್ಷ ಹಳೆಯ ವಿವಾದ ಕುರಿತಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಪ್ರಯಾಗ್‍ರಾಜ್ ನ್ಯಾಯಾಲಯದ ಮುಂದೆ ಇಂದು ಶರಣಾಗಿದ್ದಾರೆ. ಈ ಬೆಳವಣಿಗೆಯ ತಕ್ಷಣ ಅವರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ಮೌರ್ಯ ವಿರುದ್ಧದ ಎರಡು ಪ್ರಕರಣಗಳನ್ನು ಸರಕಾರ ಸ್ಥಾಪಿಸಿದ ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ದುರ್ಗಾ ಪೂಜಾ ಸಮಿತಿಯ ದಾಖಲೆಗಳನ್ನು ಫೋರ್ಜರಿಗೊಳಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗುತ್ತಿದೆ ಎಂಬ 2008ರಲ್ಲಿ ದಾಖಲಿಸಲಾದ ದೂರಿನಲ್ಲಿ ಮೌರ್ಯ ಅವರ ಹೆಸರು ಉಲ್ಲೇಖವಾಗಿರುವುದರಿಂದ ಅವರ ವಿರುದ್ಧ ಜಾಮೀನುರಹಿತ  ವಾರಂಟ್ ಜಾರಿಯಾಗಿತ್ತು. ಮೌರ್ಯ ಅವರ ವಿರುದ್ಧದ ಆರೋಪಗಳನ್ನು ಅವರ ವಕೀಲರು ನಿರಾಕರಿಸಿದ್ದು, ಅದು ಅವರ ರಾಜಕೀಯ ವಿರೋಧಿಗಳ ಕೃತ್ಯ ಎಂದು ಆಪಾದಿಸಿದ್ದಾರೆ.

2014ರಲ್ಲಿ ಸಂಸದೀಯ ಚುನಾವಣೆಯನ್ನು ಫುಲ್ಪುರ್ ಕ್ಷೇತ್ರದಿಂದ ಸ್ಪರ್ಧಿಸಿದಾಗ ಸಲ್ಲಿಸಿದ ಅಫಿಡವಿಟ್‍ನಲ್ಲಿ ತಮ್ಮ ವಿರುದ್ಧ ಇರುವ ಸುಮಾರು ಒಂದು ಡಜನ್ ಪ್ರಕರಣಗಳನ್ನು ಅವರು ಉಲ್ಲೇಖಿಸಿದ್ದರು. ನಂತರ ಆದಿತ್ಯನಾಥ್ ಸರಕಾರದಲ್ಲಿ ಉಪಮುಖ್ಯಮಂತ್ರಿಯಾದ ಅವರು ತಮ್ಮ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News