ತುಮಕೂರು: ಗೌರವ ಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಧರಣಿ

Update: 2018-11-16 11:58 GMT

ತುಮಕೂರು ನ.16: ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಟೌನ್‍ಹಾಲ್ ವೃತ್ತದಲ್ಲಿ ನೇತೃತ್ವದಲ್ಲಿ ಸಮಾವೇಶಗೊಂಡ ನೂರಾರು ಮಂದಿ ಆಶಾ ಕಾರ್ಯಕರ್ತೆಯರು ಬಿ.ಹೆಚ್. ರಸ್ತೆ ಮೂಲಕ ಜಿ.ಪಂ. ಕಚೇರಿವರೆಗೆ ಮೆರವಣಿಗೆ ನಡೆಸಿ ಪ್ರತಿಭಟಿಸಿದರು. 

ರಾಜ್ಯದ ಆರೋಗ್ಯ ಇಲಾಖೆಯಡಿ ಗ್ರಾಮೀಣ ಮತ್ತು ನಗರ ಕೊಳಚೆ ಪ್ರದೇಶಗಳಲ್ಲಿ ಸುಮಾರು 40 ಸಾವಿರ ಮಂದಿ ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದು, ಆರೋಗ್ಯ ಇಲಾಖೆಯ ಆಯುರಾರೋಗ್ಯವೇ ಆಗಿದ್ದಾರೆ. ಸದಾ ಜನತೆಯ ಮಧ್ಯೆ ಇದ್ದು, ಇಲಾಖೆಯ ಸೇವೆ ಗಳನ್ನು ಅಚ್ಚುಕಟ್ಟಾಗಿ ತಲುಪಿಸುವ ಕಾರ್ಯವನ್ನು ಚಾಚೂ ತಪ್ಪದೇ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆಯಿಂದ ವಹಿಸಿದ ಕೆಲಸ ಕಾರ್ಯ ಗಳನ್ನು ಮಾಡುತ್ತಿರುವ ಇವರು ಇಲಾಖೆಯ ಪ್ರಗತಿಗೆ ಆಧಾರ ಸ್ತಂಭಗಳಾಗಿದ್ದಾರೆ. ಹೀಗಿದ್ದರೂ ಸಹ ಆಶಾ ಕಾರ್ಯಕರ್ತೆಯರಿಗೆ ನೀಡುವ ಕೇಂದ್ರದ ಪ್ರೋತ್ಸಾಹ ಧನ ಮತ್ತು ರಾಜ್ಯದ ಗೌರವಧನ ವೇತನ ಮಾದರಿಯನ್ನು ಪದೇ ಪದೇ ಬದಲಾಯಿಸುತ್ತಿರುವುದರಿಂದ ವರ್ಷಕ್ಕೆ ಮೂರ್ನಾಲ್ಕು ಬಾರಿ ವೇತನ ಪಡೆಯುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬಹುತೇಕ ಆಶಾ ಕಾರ್ಯಕರ್ತೆಯರು ತಮ್ಮ ಈ ದುಡಿಮೆಯಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಆಶಾ ವೇತನವನ್ನು ಎಂಸಿಟಿಎಸ್ ಅಥವಾ ಆರ್‍ಸಿಎಚ್ ಪೋರ್ಟಲ್‍ಗೆ ಹೊಂದಿಸಿರುವುದರಿಂದ ತಿಂಗಳು ಪೂರ್ತಿ ಮಾಡಿದ ಕೆಲಸಕ್ಕೆ ಅರೆಬರೆ ವೇತನ ಪಡೆಯುವಂತಾಗಿದ್ದು, ಕೆಲಸ ಮಾಡಿದಷ್ಟು ವೇತನವನ್ನು ನೀಡಬೇಕು ಎಂದು ಒತ್ತಾಯಿಸಿದರು. 

ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ಕನಿಷ್ಠ 6 ಸಾವಿರ ರೂ. ವೇತನ ನಿಗದಿಪಡಿಸಿ, ಪ್ರತಿ ತಿಂಗಳು ನಿಯತವಾಗಿ ವೇತನ ನೀಡಬೇಕು. ಆಶಾ ಸಾಫ್ಟ್ ರದ್ದುಪಡಿಸಬೇಕು. ಆರ್‍ಸಿಎಚ್ ಪೋರ್ಟಲ್‍ಗೆ ಆಶಾ ವೇತನ ಲಿಂಕ್ ಮಾಡಿರುವುದನ್ನು ರದ್ದು ಮಾಡಿ ದುಡಿದಷ್ಟು ವೇತನವನ್ನು ಪ್ರತಿ ತಿಂಗಳು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. 

ಆಶಾ ಕಾರ್ಯಕರ್ತರಿಗೆ ಉಚಿತ ವಸತಿ ಸೌಲಭ್ಯ ಒದಗಿಸುವ ಹಿಂದಿನ ಸಚಿವರ ಭರವಸೆಯನ್ನು ಜಾರಿಗೊಳಿಸಬೇಕು. ಹಿಂದಿನ ಸರ್ಕಾರದ ಭರವಸೆಯಂತೆ ಆಶಾ ಕ್ಷೇಮಾಭಿವೃದ್ಧಿ ಸ್ಥಾಪಿಸಿ ಅವರ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ, ಮರಣ ಹೊಂದಿದಲ್ಲಿ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಅಲ್ಲದೆ ಪಿಂಚಣಿ ಯೋಜನೆ ರೂಪಿಸಬೇಕು ಎಂದರು.  

ನಗರ ಆಶಾಗಳಿಗೆ ನಗರ ಜೀವನ ಮಟ್ಟಕ್ಕೆ ತಕ್ಕಂತೆ ಹೆಚ್ಚಿನ ಪ್ರೊತ್ಸಾಹ ಧನ ನಿಗದಿಪಡಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ಜಿ.ಪಂ. ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಕಳುಹಿಸುವಂತೆ ಮನವಿ ಮಾಡಿದರು. 

ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ಡಿ. ನಾಗಲಕ್ಷ್ಮಿ, ಎಸ್.ಎನ್. ಸ್ವಾಮಿ, ಲತಾ, ಅಶ್ವಿನಿ ಸೇರಿದಂತೆ ನೂರಾರು ಮಂದಿ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News