"ಮಣ್ಣು-ಕಬ್ಬಿಣದ ಅದಿರು ತಿನ್ನುವ ‘ಪುಣ್ಯಕೋಟಿ ಕಥೆ’ ಎಲ್ಲರಿಗೂ ಗೊತ್ತು"

Update: 2018-11-16 13:49 GMT
ಕೆ.ಟಿ ಶ್ರೀಕಂಠೇಗೌಡ

ಬೆಂಗಳೂರು, ನ. 16: ‘ನಾಲ್ಕು ಕಾಲಿನ ಪುಣ್ಯಕೋಟಿ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ, ಕಬ್ಬಿಣದ ಅದಿರು, ಮಣ್ಣು, ಕಲ್ಲು ತಿನ್ನುವ ಎರಡು ಕಾಲಿನ ಈ ಪುಣ್ಯಕೋಟಿ ಕಥೆ ರಾಜ್ಯದ ಜನತೆಗೆ ಗೊತ್ತಿದೆ’ ಎಂದು ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಮಾಜಿ ಸಚಿವ ಜನಾರ್ದನ ರೆಡ್ಡಿಯವರನ್ನು ಲೇವಡಿ ಮಾಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬಿಣದ ಅದಿರು ಲೂಟಿಗೈದು ಜೈಲು ಸೇರಿ, ಜಾಮೀನಿಗಾಗಿ ನ್ಯಾಯಾಧೀಶರಿಗೆ ಲಂಚಕೊಟ್ಟು ಅವರನ್ನೂ ಜೈಲಿಗೆ ಕಳುಹಿಸಿದ ಜನಾರ್ದನ ರೆಡ್ಡಿ, ರಾಜ್ಯಕ್ಕೆ ಒಂದು ಕಪ್ಪು ಚುಕ್ಕೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ವಿರುದ್ಧ ಉದ್ಧಟತನದ ಹೇಳಿಕೆಗಳನ್ನು ನೀಡುವುದನ್ನು ಜನಾರ್ದನ ರೆಡ್ಡಿ ಮೊದಲು ಬಿಡಬೇಕು. ಜತೆಗೆ ಇಂತಹ ಅನೈತಿಕ ಹಿನ್ನಲೆಯುಳ್ಳ ವ್ಯಕ್ತಿಗೆ ಬಿಜೆಪಿ ಬೆಂಬಲ ನೀಡಲು ಮುಂದಾದರೆ ಜೆಡಿಎಸ್ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ರೂಪಿಸಲಿದೆ ಎಂದು ಅವರು ಎಚ್ಚರಿಸಿದರು.

ಬಿಜೆಪಿ ಸ್ಪಷ್ಟಣೆ ನೀಡಲಿ: ತಾನು ಬಿಜೆಪಿಗೆ ಹಣ ಸಹಾಯ ಮಾಡಿದ್ದೇನೆ ಎಂದು ಜನಾರ್ದನ ರೆಡ್ಡಿ ಹೇಳಿಕೊಂಡಿದ್ದಾರೆ. ಹೀಗಾಗಿ ಯಡಿಯೂರಪ್ಪ ಮೊದಲು ರೆಡ್ಡಿಯಿಂದ ಏನೇನು ಲಾಭ ಪಡೆದುಕೊಂಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿದ್ದ ಜೆಡಿಎಸ್ ಮುಖಂಡ ರಮೇಶ್‌ ಬಾಬು ಆಗ್ರಹಿಸಿದರು.

ಆ್ಯಂಬಿಡೆಂಟ್ ಕಂಪೆನಿ ವಂಚನೆ ಪ್ರಕರಣ ಸಂಬಂಧ ರೆಡ್ಡಿಗೆ ತಾತ್ಕಾಲಿಕ ಜಾಮೀನು ಸಿಕ್ಕಿದೆ. ತನಿಖೆ ಪ್ರಗತಿಯಲ್ಲಿದೆ. ಅವರಿಗೆ ಇನ್ನೂ ಯಾವುದೇ ಕ್ಲೀನ್‌ಚೀಟ್ ಸಿಕ್ಕಿಲ್ಲ. ಹೀಗಿರುವಾಗ ಬಿಜೆಪಿ ಅವರನ್ನು ಏಕೆ ಸಮರ್ಥನೆ ಮಾಡುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದು ರಮೇಶ್ ಬಾಬು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News