ಇನ್ನು ಮುಂದೆ 108 ಆಂಬ್ಯುಲೆನ್ಸ್‌ ನಲ್ಲಿ ಇರಲಿದೆ ಈ ಅತ್ಯಾಧುನಿಕ ತಂತ್ರಜ್ಞಾನ

Update: 2018-11-16 15:03 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.16: ಹೊಸ ವರ್ಷದ ವೇಳೆಗೆ 108 ಆಂಬ್ಯುಲೆನ್ಸ್‌ಗೆ ಹೊಸ ರೂಪ ಸಿಗಲಿದ್ದು, ತಂತ್ರಜ್ಞಾನ ಆಧಾರಿತ ವ್ಯವಸ್ಥೆಯೊಂದಿಗೆ ಸೇವೆ ಒದಗಿಸಲು ಸಿದ್ಧತೆ ನಡೆದಿದೆ. ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ಕರೆದು, ನಿಯಮಗಳನ್ನು ರೂಪಿಸುವ ಹೊಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿದೆ.

ಜೀವ ರಕ್ಷಕ ಎನಿಸಿರುವ 108 ಆಂಬ್ಯುಲೆನ್ಸ್‌ನ ನೂತನ ಯೋಜನೆಯನ್ನು ಮುಂದಿನ ಐದು ವರ್ಷಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನ ಆಧಾರಿತ ವ್ಯವಸ್ಥೆಯೊಂದಿಗೆ ಸಜ್ಜುಗೊಳ್ಳಿಸಲಾಗುತ್ತಿದೆ. ಪ್ರತಿ ವಾಹನದಲ್ಲೂ ಎಲೆಕ್ಟ್ರಾನಿಕ್ ಹೆಲ್ತ್ ರೆಕಾರ್ಡರ್ ಅಳವಡಿಕೆ ಮಾಡಲಿದ್ದು, ಇದರಿಂದ ಆಂಬ್ಯುಲೆನ್ಸ್‌ನ ಸಂಪೂರ್ಣ ಮಾಹಿತಿ ತಕ್ಷಣದಲ್ಲೇ ದಾಖಲಾಗುತ್ತದೆ.

ವಿಡಿಯೋ ವಾಲ್ ಅಳವಡಿಕೆ: ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಲ್ಲಿ ಆಂಬ್ಯುಲೆನ್ಸ್ ಸಂಚರಿಸುವ ಮಾರ್ಗ, ರೋಗಿಯನ್ನು ಎಲ್ಲಿಂದ ಕರೆದುಕೊಂಡು ಯಾವ ಆಸ್ಪತ್ರೆಗೆ ಸೇರಿಸಲಾಯಿತು, ಆಂಬ್ಯುಲೆನ್ಸ್‌ನಲ್ಲಿ ಯಾವ ರೀತಿ ತುರ್ತು ಚಿಕಿತ್ಸೆ ನೀಡಲಾಯಿತು, ಅವರೊಂದಿಗೆ ಸಿಬ್ಬಂದಿಯ ವರ್ತನೆ ಹೇಗಿತ್ತು, ವಾಹನದ ನಿರ್ವಹಣೆ ಯಾವ ರೀತಿ ಮಾಡಲಾಗುತ್ತದೆ ಎಂದು ತಿಳಿಯಬಹುದು.

ಅಲ್ಲದೆ, ರೋಗಿಗಳ ಕರೆ ಬಂದ ಎಷ್ಟು ಸಮಯಕ್ಕೆ ವಾಹನ ತಲುಪಿತು, ಸಿಬ್ಬಂದಿ ಹಾಜರಾತಿ ಸಮಯ, ವಾಹನ ಎಷ್ಟು ಕಿ.ಮೀ ಹಾಗೂ ಯಾವ ಮಾರ್ಗದಲ್ಲಿ ಕ್ರಮಿಸಿದೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲಾಖೆಯ ಕಚೇರಿಯಲ್ಲೆ ಕುಳಿತು ನೋಡಬಹುದಾಗಿದೆ. ಇದಕ್ಕಾಗಿ ಕಚೇರಿಯಲ್ಲಿ ವಿಡಿಯೋ ವಾಲ್ ಅಳವಡಿಕೆ ಮಾಡಲಾಗುವುದು.

ಮಾರ್ಗಸೂಚಿಗೆ ಸಿದ್ಧತೆ: ಹಿಂದಿನ ಸಮಸ್ಯೆಗಳು ಪರಿವರ್ತನೆ ಆಗದ ರೀತಿಯಲ್ಲಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆಗಾಗಿ ಮಾರ್ಗಸೂಚಿ ರೂಪಿಸಲು ಹೊಣೆಗಾರಿಕೆಯನ್ನು ಐ-ಡೆಕ್ ಎಂಬ ಖಾಸಗಿ ಸಂಸ್ಥೆಗೆ ನೀಡಲಾಗಿದೆ. ನಂತರ ಅದನ್ನು ಪರಿಶೀಲಿಸಿ ಅಳವಡಿಸಿಕೊಳ್ಳಲಾಗುವುದು. ಟೆಂಡರ್‌ನ ಸಂಪೂರ್ಣ ಹೊಣೆಗಾರಿಕೆಯನ್ನೂ ಐ-ಡೆಕ್‌ಗೆ ವಹಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ತುರ್ತು ಚಿಕಿತ್ಸೆಗೆ ಎಲ್ಲ ಸೌಲಭ್ಯ ಲಭ್ಯ: ವಾಹನ ಸಂಚರಿಸುವ ಮಾರ್ಗ ತಿಳಿಯಲು ಜಿಪಿಎಸ್, ಆನ್‌ಲೈನ್ ಮಾನಿಟರಿಂಗ್ ವ್ಯವಸ್ಥೆ, ಚಾಲಕ ಹಾಗೂ ಸಿಬ್ಬಂದಿ ಹಾಜರಾತಿಗಾಗಿ ಬಯೋಮೆಟ್ರಕ್, ರೋಗಿಗಳಿಗೆ ನೀಡುವ ಸೇವೆ ಮಾಹಿತಿಗಾಗಿ ಟ್ಯಾಬ್ ಅಳವಡಿಕೆ, ಎಲೆಕ್ಟ್ರಾನಿಕ್ ಕ್ರಿಯೆಟರ್ ಅಳವಡಿಕೆ, ಸಮಸ್ಯೆ ಕುರಿತು ದೂರು ದಾಖಲಿಸಲು ಮೊಬೈಲ್ ಆ್ಯಪ್, ಆಂಬ್ಯುಲೆನ್ಸ್‌ನಲ್ಲೇ ಮೇಲ್ವಿಚಾರಣೆ, ಸವಿರ್ಸ್ ಲೆವೆಲ್ ಅಗ್ರಿಮೆಂಟ್(ಎಸ್‌ಎಲ್ಎ) ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಯೋಜನೆಯ ಪರಿಣಾಮ

ಆಂಬ್ಯುಲೆನ್ಸ್ ದುರ್ಬಳಕೆ ತಡೆ.

ರೋಗಿಗಳಿಂದ ಹಣ ಕೀಳುವುದು ತಪ್ಪುತ್ತದೆ.

ಸುಳ್ಳು ಮಾಹಿತಿ ನೀಡುವುದು ಕೊನೆಗೊಳ್ಳುತ್ತದೆ.

ರೋಗಿಗಳು ಇಲ್ಲದಿದ್ದರೂ ವಾಹನಗಳನ್ನು ಎಲ್ಲೆಂದರಲ್ಲಿ ಸುತ್ತಾಡಿಸುವುದು ಸ್ಥಗಿತಗೊಳ್ಳುತ್ತದೆ

ಕಮಿಷನ್ ಆಸೆಗೆ ರೋಗಿಗಳನ್ನು ನಿರ್ದಿಷ್ಟ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸುವುದು ನಿಲ್ಲುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News