ಮಂಡ್ಯ: ನದಿಯಲ್ಲಿ ಪ್ರೇಮಿಗಳ ಶವ ಪತ್ತೆ; ಮರ್ಯಾದ ಹತ್ಯೆ ಶಂಕೆ

Update: 2018-11-16 18:15 GMT

ಮಂಡ್ಯ, ನ.16: ಕಳೆದ ಕೆಲವೇ ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ ನವ ಪ್ರೇಮಿಗಳಿಬ್ಬರ ಶವ ಮಳವಳ್ಳಿ ತಾಲೂಕಿನ ಶಿವನಸಮುದ್ರ ಬಳಿ ಕಾವೇರಿ  ನದಿಯಲ್ಲಿ ಪ್ರತ್ಯೇಕವಾಗಿ ಪತ್ತೆಯಾಗಿದ್ದು, ಅಂತರ್ ಜಾತಿ ಪ್ರೇಮವಿವಾಹ ಹಿನ್ನೆಲೆಯಲ್ಲಿ ಯುವತಿಯ ಕುಟುಂಬದವರೇ ಈ ಇಬ್ಬರು ಪ್ರೇಮಿಗಳನ್ನು ಹತ್ಯೆ ಮಾಡಿರುವ ಬಗ್ಗೆ ಪೋಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕಳೆದ ಬುಧವಾರ ಶಿವನಸಮುದ್ರ ಬಳಿಯ ಕಾವೇರಿ ನದಿಯಲ್ಲಿ 26 ವರ್ಷ ವಯಸ್ಸಿನ ಅಪರಿಚಿತ ಯುವಕನ ಶವವೊಂದು ಪತ್ತೆಯಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಬೆಳಕವಾಡಿ ಪೊಲೀಸರು ಶವವನ್ನು ನದಿಯಿಂದ ಮೇಲೆತ್ತಿ ಪರಿಶೀಲಿಸಿದಾಗ ಯುವಕನ ಕೈಕಾಲುಗಳನ್ನು ಹಗ್ಗದಿಂದ ಬಿಗಿಯಲಾಗಿದ್ದು ಯಾರೋ ದುಷ್ಕರ್ಮಿಗಳು ಆತನ ಕೈಕಾಲುಗಳನ್ನು ಕಟ್ಟಿ ನೀರಿಗೆ ಎಸೆದು ಕೊಲೆಮಾಡಿರುವ ಶಂಕೆ ವ್ಯಕ್ತವಾಗಿತ್ತು. 

ಇದರ ಬೆನ್ನಲ್ಲೇ ಮಾರನೇ ದಿನ ಗುರುವಾರ ಯುವಕನ ಶವ ಸಿಕ್ಕ ಜಾಗದಲ್ಲೇ ಯುವತಿಯ ಶವವೊಂದು ಸಹ ಪತ್ತೆಯಾಗಿದ್ದು, ಆಕೆಯ ಕೈಕಾಲುಗಳನ್ನು ಅದೇ ರೀತಿ ಹಗ್ಗದಿಂದ ಕಟ್ಟಿ ನೀರಿಗೆ ಎಸೆದು ಕೊಲೆ ಮಾಡಿದ ಸ್ಥಿತಿಯಲ್ಲಿತ್ತು. ಇವರಿಬ್ಬರೂ ಪ್ರೇಮಿಗಳಾಗಿದ್ದರಿಂದ ಇದೇ ಕಾರಣಕ್ಕೆ ಈ ಜೋಡಿಯ ಕೊಲೆ ನಡೆದಿರುವ ಬಗ್ಗೆ ಬಲವಾದ ಶಂಕೆ ಪೊಲೀಸರಲ್ಲಿ ಮೂಡಿತ್ತು. 

ನಂತರ ಶವಗಳ ಜಾಡು ಹಿಡಿದು ಹೊರಟ ಮಳವಳ್ಳಿ ಪೊಲೀಸರಿಗೆ ಮೃತ ಯುವಕ ಯುವತಿ ತಮಿಳುನಾಡು ಮೂಲದ ಹೊಸೂರು ತಾಲೂಕಿನ ಚೂಡಗೌಂಡನಹಳ್ಳಿ ಗ್ರಾಮದ ನಂದೀಶ (26) ಹಾಗೂ ಅದೇ ಗ್ರಾಮದ ಸ್ವಾತಿ (19) ಎಂದು ತಿಳಿದುಬಂದಿದ್ದು, ಇವರಿಬ್ಬರು ಬೇರೆ ಬೇರೆ ಜಾತಿಯವರಿಗೆ ಸೇರಿದವರು ಎಂದು ಗೊತ್ತಾಗಿದೆ. 

ಹಾರ್ಡ್‍ವೇರ್ ಕಂಪೆನಿಯೊಂದರ ಉದ್ಯೋಗಿಯಾದ ನಂದೀಶ ಹಾಗೂ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಸ್ವಾತಿ ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಇದಕ್ಕೆ ಯುವತಿ ಮನೆಯವರ ತೀವ್ರ ವಿರೋಧ ಇತ್ತೆನ್ನಲಾಗಿದೆ. ಇದೇ ವಿಚಾರಕ್ಕೆ ವರನ ತಂದೆ ಮನೆಯವರ ಬಳಿ ತೆರಳಿ ಗಲಾಟೆ ಸಹ ಮಾಡಿದ್ದರೆಂದು ಗೊತ್ತಾಗಿದೆ. ಈ ಘಟನೆ ಬಳಿಕ ತಾನು ವ್ಯಾಸಂಗ ಮಾಡುತ್ತಿದ್ದ ಕೃಷ್ಣಗಿರಿ ಕಾಲೇಜಿನಿಂದ ಟಿಸಿ ತರುವುದಾಗಿ ಹೇಳಿ ಹೋದ ಸ್ವಾತಿ ವಾಪಸ್ಸು ಮನೆಗೆ ಬಾರದೆ ನಂದೀಶನ ಜೊತೆ ಅವರ ಮನೆಗೆ ಹೋಗಿ ಉಳಿದುಕೊಂಡಿದ್ದಳಲ್ಲದೆ ಇಬ್ಬರೂ ಮದುವೆ ಸಹ ಆಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ನಂತರ, ಅಜ್ಞಾತ ಸ್ಥಳದಲ್ಲಿದ್ದ ಇವರನ್ನು ಸ್ವಾತಿ ಮನೆಯವರು ಹುಡುಕುತ್ತಿರುವಾಗಲೇ ಕಳೆದ ನ.10 ರಂದು ಹೊಸೂರಿನಲ್ಲಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಸ್ವಾತಿ, ಅವರ ಸಂಬಂಧಿಯೊಬ್ಬರ ಕಣ್ಣಿಗೆ ಬಿದ್ದು ಆತ ಈ ವಿಷಯವನ್ನು ಯುವತಿಯ ಪೋಷಕರಿಗೆ ತಿಳಿಸಿದ್ದನೆಂದು ತಿಳಿದುಬಂದಿದೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ವಾತಿ ತಂದೆ ಸೇರಿದಂತೆ ಇತರೆ ನಾಲ್ವರು ಯುವ ಜೋಡಿಯನ್ನು ಭೇಟಿ ಮಾಡಿ, ಪೊಲೀಸ್ ಠಾಣೆಗೆ ಹೋಗಿ ಈ ವಿಷಯವನ್ನು ರಾಜಿ ಮಾಡಿಕೊಳ್ಳೋಣ ಬನ್ನಿ ಎಂದು ತಿಳಿಸಿ ಟಾಟಾ ಸುಮೋಗೆ ಹತ್ತಿಸಿಕೊಂಡು ನೈಸ್ ರಸ್ತೆ ಮೂಲಕ ಶಿವನಸಮುದ್ರದ ಬಳಿಯ ಕಾವೇರಿ ನದಿ ದಡಕ್ಕೆ ರಾತ್ರಿ 3 ಗಂಟೆ ಸುಮಾರಿಗೆ ಕರೆತಂದರು ಎನ್ನಲಾಗಿದೆ. ಅಲ್ಲಿ ಕಾರಿನಿಂದ ಇಬ್ಬರನ್ನು ಇಳಿಸಿದ ಆರೋಪಿಗಳು ಮೊದಲು ನಂದೀಶನಿಗೆ ಥಳಿಸಿ ಆತನ ಕೈಕಾಲು ಕಟ್ಟಿ ನದಿಗೆ ಎಸೆದಿದ್ದಾರೆ. ನಂತರ ಸ್ವಾತಿಯನ್ನೂ ಮನಬಂದಂತೆ ಥಳಿಸಿ ಆಕೆಯ ಕಾಲುಗಳನ್ನು ಕಟ್ಟಿ ನದಿಗೆ ಎಸೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಸಂಬಂಧ ಯುವತಿ ತಂದೆ, ದೊಡ್ಡಪ್ಪ ಸೇರಿದಂತೆ ಐವರ ವಿರುದ್ದ ಪ್ರಕರಣ ದಾಖಸಿಸಿಕೊಂಡಿರುವ ಬೆಳಕವಾಡಿ ಪೊಲೀಸರು ಆರೋಪಿಗಳ ಸುಳಿವು ಪತ್ತೆಹಚ್ಚಿದ್ದು, ಇಂದು ಅಥವಾ ನಾಳೆ ಬಂಧಿಸಿ ಕರೆತರುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News