ಮೇಯರ್ ಆಯ್ಕೆ ವಿಚಾರದಲ್ಲಿ ನಾನು ತಲೆಹಾಕುವುದಿಲ್ಲ: ಸಿದ್ದರಾಮಯ್ಯ

Update: 2018-11-16 16:59 GMT

ಮೈಸೂರು,ನ.16: ಮೈಸೂರು ಮಹಾನಗರಪಾಲಿಕೆ ಚುನಾವಣೆ ನ.17 ರಂದು ನಡೆಯಲಿದ್ದು, ಮೇಯರ್ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೇಯರ್ ಆಯ್ಕೆ ವಿಚಾರದಲ್ಲಿ ನಾನು ತಲೆ ಹಾಕುವುದಿಲ್ಲ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಕುರಿತು ನಾನು ಕೆಪಿಸಿಸಿ ಅಧ್ಯಕ್ಷರಿಗೆ ಹೇಳಿದ್ದೇನೆ. ಅವರು ಮಾತನಾಡುತ್ತಾರೆ. ನಾನು ಮೇಯರ್ ಚುನಾವಣೆಯಲ್ಲಿ ತಲೆ ಹಾಕುವುದಿಲ್ಲ. ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಪ್ರವಾಸೋದ್ಯಮ ಸಚಿವ ಇಬ್ಬರೂ ಜೆಡಿಎಸ್ ನವರೇ. ಹೀಗಾಗಿ ಕಾಂಗ್ರೆಸ್ ಗೆ ಒಂದು ಧ್ವನಿ ಇರಬೇಕು ಎಂದು ಕೇಳುತ್ತಿದ್ದೇವೆ. ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ಮೈಸೂರಿನಲ್ಲಿ ಮೈತ್ರಿ ಆಡಳಿತದಲ್ಲಿ ಮೇಯರ್ ಆಗುತ್ತಾರೆ ಎಂದರು. 

ಜೆಡಿಎಸ್ ಪಾಲಿಕೆ ಸದಸ್ಯರು ರೆಸಾರ್ಟ್ ಗೆ ಹೋಗಿರೋದು ನನಗೆ ಗೊತ್ತಿಲ್ಲ. ಅವರ ಪಕ್ಷದ ಸದಸ್ಯರನ್ನು ರಕ್ಷಣೆ ಮಾಡಿಕೊಳ್ಳಲು ಹೋಗಿರಬೇಕು ಅಷ್ಟೇ ಎಂದು ಹೇಳಿದರು.

ಸಾಲಮನ್ನಾ ಮಾಡಲು ಸಮ್ಮಿಶ್ರ ಸರ್ಕಾರ ಸಿದ್ಧವಿದೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಯೋಜನೆ ಅಡಿಯಲ್ಲಿ ರೈತರ ಸಾಲಮನ್ನಾ ಮಾಡಲು ಮೊದಲ ಆದ್ಯತೆ ನೀಡಲಾಗಿದೆ. ರೈತರ ರಾಷ್ಟ್ರೀಕೃತ ಮತ್ತು ಸಹಕಾರಿ ಸಂಘಗಳ ಸಾಲಗಳನ್ನು ಹಂತ ಹಂತವಾಗಿ ಮನ್ನಾ ಮಾಡಲಾಗುವುದು. ಸಾಲ ಮರು ಪಾವತಿಯಲ್ಲಿ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಸರಿ ದೂಗಿಸುತ್ತದೆ. ರೈತರು ಆತಂಕ ಪಡುವ ಪ್ರಮೇಯವಿಲ್ಲ. ಈಗಾಗಲೇ ಸಹಕಾರ ಸಂಘಗಳಲ್ಲೂ ಹೊಸ ಸಾಲ ನೀಡಲು ಸರ್ಕಾರ ಆದೇಶ ನೀಡಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿಯೂ ಸಹ ಹೊಸ ಸಾಲ ನೀಡಲು ಮುಂದಾಗಬೇಕು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News