ಕ್ರಿಮಿನಲ್ ಪ್ರಕರಣಗಳ ಬಗ್ಗೆ ಈ ಅಗತ್ಯ ಮಾಹಿತಿಗಳನ್ನು ತಪ್ಪದೇ ತಿಳಿದುಕೊಳ್ಳಿ

Update: 2018-11-16 17:09 GMT

ನಮ್ಮಲ್ಲಿ ಹೆಚ್ಚಿನವರಿಗೆ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಯಾವುದೇ ಮಾಹಿತಿಗಳಿರುವುದಿಲ್ಲ. ಯಾವುದೇ ವ್ಯಕ್ತಿ ಕ್ರಿಮಿನಲ್ ವ್ಯಾಪ್ತಿಗೆ ಬರುವ ತಪ್ಪುಗಳನ್ನೆಸಗಿದಾಗ ಆತನ ವಿರುದ್ಧ ಆಯಾಯ ಸೆಕ್ಷನ್ ಗಳಡಿ ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತವೆ. ಕೆಲವೊಮ್ಮೆ ಕ್ರಿಮಿನಲ್ ಪ್ರಕರಣಗಳಿಗೆ ಯಾವುದೇ ತಪ್ಪು ಮಾಡದ ಅಮಾಯಕರು ಬಲಿಯಾಗುವುದೂ ಇದೆ. ಇಂತಹ ಸಂದರ್ಭಗಳಲ್ಲಿ ಕ್ರಿಮಿನಲ್ ಪ್ರಕರಣಗಳ ಬಗ್ಗೆ ನಮಗಿರುವ ಅರಿವು ನೆರವಿಗೆ ಬರಬಹುದು. ಇದಲ್ಲದಿದ್ದರೂ ಈ ಮಾಹಿತಿಗಳನ್ನು ಎಲ್ಲರೂ ತಿಳಿದುಕೊಳ್ಳುವುದು ಉತ್ತಮ.

ಸಂಜ್ಞೇಯ ಅಪರಾಧವೆಂದರೇನು ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಅದರ ಮಹತ್ವವೇನು?

1973ರ ಸಿಆರ್‌ಪಿಸಿಯ ಕಲಂ 2(ಇ) ಅಡಿ ಸಂಕ್ಷಿಪ್ತವಾಗಿ ಹೇಳುವುದಾದರೆ ಸಂಜ್ಞೇಯ ಅಪರಾಧವು ಪೊಲೀಸರು ದಂಡಾಧಿಕಾರಿಯ ಅನುಮತಿ ಇಲ್ಲದೆ ವ್ಯಕ್ತಿಯನ್ನು ಬಂಧಿಸಬಹುದಾದ ಅಪರಾಧವಾಗಿದೆ. ಸಿಆರ್‌ಪಿಸಿಯ ಮೊದಲ ಅನುಸೂಚಿಯಡಿಯ ಯಾವುದೇ ಅಪರಾಧ ಅಥವಾ ಆ ಸಮಯದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾಯ್ದೆಯಡಿ ಗಂಭೀರ ಸ್ವರೂಪದ ಅಪರಾಧಗಳನ್ನು ಸಂಜ್ಞೇಯ ಅಪರಾಧಗಳೆಂದು ಪರಿಗಣಿಸಲಾಗುತ್ತದೆ. ಜನಸಾಮಾನ್ಯರಿಗೆ ತಿಳಿಯುವಂತೆ ಹೇಳುವುದಾದರೆ ಸಿಆರ್‌ಪಿಸಿಯಡಿ ಮರಣದಂಡನೆ, ಜೀವಾವಧಿ ಶಿಕ್ಷೆ, 10 ಅಥವಾ 7 ವರ್ಷಗಳ ಜೈಲುಶಿಕ್ಷೆ ವಿಧಿಸಬಹುದಾದ ಎಲ್ಲ ಅಪರಾಧಗಳು ಸಂಜ್ಞೇಯ ಅಪರಾಧದ ವ್ಯಾಪ್ತಿಯಲ್ಲಿ ಬರುತ್ತವೆ. ಅಲ್ಲದೆ 2 ಅಥವಾ 3 ವರ್ಷಗಳ ಅಥವಾ ಆರು ತಿಂಗಳ ಜೈಲುಶಿಕ್ಷೆಯನ್ನು ವಿಧಿಸಬಹುದಾದ ಕೆಲವು ಅಪರಾಧಗಳೂ ಸಂಜ್ಞೇಯ ಅಪರಾಧಗಳೆನ್ನಿಸಿಕೊಳ್ಳುತ್ತವೆ. ಹೀಗಾಗಿ ಯಾವುದು ಸಂಜ್ಞೇಯ ಅಪರಾಧ ಮತ್ತು ಯಾವುದು ಅಸಂಜ್ಞೇಯ ಅಪರಾಧ ಎನ್ನುವುದನ್ನು ಸಿಆರ್‌ಪಿಸಿಯ ಮೊದಲ ಅನುಸೂಚಿಯನ್ನು ಪರಿಶೀಲಿಸಿ ತಿಳಿದುಕೊಳ್ಳಬಹುದಾಗಿದೆ.

ಅಸಂಜ್ಞೇಯ ಅಪರಾಧ ಎಂದರೇನು?

ಸಿಆರ್‌ಪಿಸಿಯ ಕಲಂ 3(ಜೆ) ಅಡಿ ಸಂಕ್ಷಿಪ್ತವಾಗಿ ವ್ಯಾಖ್ಯಾನಿಸಬಹುದಾದರೆ ಅಸಂಜ್ಞೇಯ ಅಪರಾಧವು ಪೊಲೀಸರು ನ್ಯಾಯಾಲಯದ ಅನುಮತಿಯಿಲ್ಲದೆ ವ್ಯಕ್ತಿಯನ್ನು ಬಂಧಿಸಲಾಗದ ಮತ್ತು ಸಿಆರ್‌ಪಿಸಿಯ ಮೊದಲ ಅನುಸೂಚಿಯಲ್ಲಿ ಅಸಂಜ್ಞೇಯ ಅಪರಾಧವೆಂದು ವರ್ಗೀಕರಿಸಿರುವ ಅಪರಾಧ ಎಂದು ಹೇಳಬಹುದಾಗಿದೆ. ಆದರೆ ಇದೇ ಸಿಆರ್‌ಪಿಸಿಯಲ್ಲಿ ಹೇಳಿರುವಂತೆ ಕೆಲವು ಸಂದರ್ಭಗಳಲ್ಲಿ ಸಂಜ್ಞೇಯ ಅಪರಾಧದ ಆರೋಪವಿಲ್ಲದಿದ್ದರೂ ಮತ್ತು ನ್ಯಾಯಾಲಯದ ವಾರಂಟ್ ಇಲ್ಲದಿದ್ದರೂ ವ್ಯಕ್ತಿಯನ್ನು ಪೊಲೀಸರು ಬಂಧಿಸಬಹುದಾಗಿದೆ.

ಕ್ರಿಮಿನಲ್ ಕಾನೂನಿನಡಿ ಮೊದಲ ಕಾನೂನಾತ್ಮಕ ಪರಿಹಾರಗಳು

ನೀವು ಸಂಜ್ಞೇಯ ಅಪರಾಧವನ್ನೆಸಗಿದ ಆರೋಪಿಯಾಗಿದ್ದರೆ ಮತ್ತು ನಿಮ್ಮನ್ನು ಬಂಧಿಸಿಲ್ಲವಾದರೆ ಕ್ರಿಮಿನಲ್ ಕಾನೂನಿನ ಸಂಗತ ನಿಯಮಗಳಡಿ ಸೆಷನ್ಸ್ ಅಥವಾ ಉಚ್ಚ ಅಥವಾ ಸರ್ವೋಚ್ಚ ನ್ಯಾಯಾಲಯಗಳಿಂದ ನಿರೀಕ್ಷಣಾ ಜಾಮೀನನ್ನು ಪಡೆದುಕೊಳ್ಳಬಹುದು. ಒಂದು ವೇಳೆ ನೀವು ತಪ್ಪು ಮಾಡದಿದ್ದರೆ ನಿಮ್ಮ ಅಮಾಯಕತೆಯನ್ನು ಸಾಬೀತುಗೊಳಿಸಬಹುದಾದ ಮತ್ತು ನೀವು ನ್ಯಾಯವನ್ನು ಪಡೆಯಲು ನೆರವಾಗಬಹುದಾದ ಕೆಲವು ವಿಶ್ವಾಸಾರ್ಹ ಸಾಕ್ಷಗಳು ಮತ್ತು ನಿಜಾಂಶಗಳು ಮತ್ತು ಸಂದರ್ಭಗಳ ಲಿಖಿತ ವಿವರಣೆಯೊಂದಿಗೆ ಸಂಬಂಧಿಸಿದ ಪೊಲೀಸ್ ಅಧಿಕಾರಿ ಅಥವಾ ಹಿರಿಯ ಪೊಲೀಸ್ ಅಧಿಕಾರಿಗಳ ಮೊರೆಯನ್ನೂ ಹೋಗಬಹುದು. ಪ್ರಕರಣದ ವಾಸ್ತವಾಂಶಗಳು ಮತ್ತು ಸಂದರ್ಭಗಳನ್ನು ಉಲ್ಲೇಖಿಸಿ ಲಿಖಿತ ಅರ್ಜಿ ಮತ್ತು ನಿಮ್ಮ ಅಮಾಯಕತೆಯನ್ನು ಸಾಬೀತುಗೊಳಿಸುವ ಕೆಲವು ವಿಶ್ವಾಸಾರ್ಹ ಸಾಕ್ಷಾಧಾರಗಳೊಂದಿಗೆ ಮಾನವ ಹಕ್ಕು ಆಯೋಗವನ್ನೂ ನೀವು ಸಂಪರ್ಕಿಸಬಹುದು.

ಸಂಜ್ಞೇಯ ಅಪರಾಧದ ಆರೋಪದಲ್ಲಿ ಯಾರನ್ನಾದರೂ ಬಂಧಿಸಲ್ಪಟ್ಟಿದ್ದು, ಆತ/ಆಕೆ ಅಮಾಯಕ ಎನ್ನುವುದು ತಿಳಿದಿದ್ದರೆ ಇಂತಹ ಸಂದರ್ಭದಲ್ಲಿ ಈ ಕೆಳಗಿನ ಕಾನೂನು ಕ್ರಮಗಳು ಮತ್ತು ಪರಿಹಾರಾತ್ಮಕ ಕ್ರಮಗಳನ್ನು ಜರಗಿಸಬಹುದಾಗಿದೆ.

►ಕ್ರಿಮಿನಲ್ ಕಾಯ್ದೆಯ ಸೂಕ್ತ ನಿಯಮಗಳಡಿ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ.

►ನಿಮ್ಮ ಸಂಬಂಧಿ ಅಥವಾ ಹತ್ತಿರದ ವ್ಯಕ್ತಿಯು ಬಂಧಿಸಲ್ಪಟ್ಟಿದ್ದರೆ ಮತ್ತು ಆತನನ್ನು ಎಲ್ಲಿಗೊಯ್ಯಲಾಗಿದೆ ಎನ್ನುವುದು ಗೊತ್ತಿರದಿದ್ದರೆ ಮತ್ತು ಬಂಧನಕ್ಕೆ ಕಾರಣಗಳನ್ನು ಬಹಿರಂಗಗೊಳಿಸಿರದಿದ್ದರೆ ಮತ್ತು ಬಂಧನದ ಸಮಯದಲ್ಲಿ ಕಾನೂನಿನನ್ವಯ ಅರೆಸ್ಟ್ ಮೆಮೊ ಸಿದ್ಧಗೊಳಿಸಿಲ್ಲವಾದರೆ ಮತ್ತು ಇಂತಹ ಬಂಧನದ ಬಗ್ಗೆ ವ್ಯಕ್ತಿಯ ಜವಾಬ್ದಾರಿಯುತ ನಿಕಟ ಸಂಬಂಧಿಗಳು ಅಥವಾ ಸ್ನೇಹಿತರಿಗೆ ತಿಳಿಸಿರದಿದ್ದರೆ ಮತ್ತು ಬಂಧಿಸಿದ 24 ಗಂಟೆಗಳಲ್ಲಿ ನ್ಯಾಯಾಲಯದಲ್ಲಿ ಆತನನ್ನು ಹಾಜರು ಮಾಡಿರದಿದ್ದರೆ ಇಂತಹ ವ್ಯಕ್ತಿಯ ಸಂಬಂಧಿಗಳು ಅಥವಾ ಹಿತೈಷಿಗಳು ಅಕ್ರಮ ಬಂಧನದ ಆರೋಪದಲ್ಲಿ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿ ಭಾರತೀಯ ಸಂವಿಧಾನದಡಿ ಕಾನೂನು ಪರಿಹಾರವನ್ನು ಕೋರಬಹುದಾಗಿದೆ.

►ಯಾರಾದರೂ ಸಂಜ್ಞೇಯ ಅಪರಾಧವನ್ನೆಸಗಿದ ಆರೋಪಿಯಾಗಿದ್ದರೆ ಅಥವಾ ಅವರ ವಿರುದ್ಧ ಅಂತಹ ಪ್ರಕರಣವಿದ್ದರೆ ಭಾರತೀಯ ಸಂವಿಧಾನ ಕಾನೂನು ಖಾತರಿ ನೀಡಿರುವಂತೆ  ಆಯ್ಕೆಯ ವಕೀಲರೊಂದಿಗೆ ಸಮಾಲೋಚನೆ ನಡೆಸುವ ಹಕ್ಕು ಇರುತ್ತದೆ ಮತ್ತು ಪ್ರಯಾಣದ ಅವಧಿಯನ್ನು ಹೊರತುಪಡಿಸಿ ಆ ವ್ಯಕ್ತಿಯ ಬಂಧನದ 24 ಗಂಟೆಗಳಲ್ಲಿ ಸಕ್ಷಮ ದಂಡಾಧಿಕಾರಿಗಳೆದುರು ಹಾಜರು ಪಡಿಸಬೇಕಾಗುತ್ತದೆ. ಬಂಧನಕ್ಕೆ ಸಂಬಂಧಿಸಿದಂತೆ ಮತ್ತು ಪೊಲೀಸರ ವಶದಲ್ಲಿದ್ದಾಗ ವ್ಯಕ್ತಿಗೆ ಆಗಿರಬಹುದಾದ ಕಿರುಕುಳಗಳ ಬಗ್ಗೆ ದಂಡಾಧಿಕಾರಿಗಳು ಪ್ರಶ್ನಿಸಬಹುದು ಮತ್ತು ಅಗತ್ಯವಾದರೆ ವೈದ್ಯಕೀಯ ತಪಾಸಣೆಗೆ ಆದೇಶಿಸಬಹುದು. ಇಂತಹ ಸಂದರ್ಭಗಳಲ್ಲಿ ಒಳ್ಳೆಯ ವಕೀಲರನ್ನು ನೇಮಿಸಬೇಕು ಅಥವಾ ಅಮಾಯಕತೆಯನ್ನು ಸಾಬೀತುಗೊಳಿಸುವ ಯಾವುದಾದರೂ ಸಾಕ್ಷಾಧಾರಗಳಿದ್ದಲ್ಲಿ ಅವುಗಳೊಂದಿಗೆ ಪ್ರಕರಣದ ಸಂಪೂರ್ಣ ನಿಜಾಂಶಗಳು ಮತ್ತು ಸಂದರ್ಭಗಳನ್ನು ವಿವರಿಸಿ ಲಿಖಿತ ಅರ್ಜಿಯನ್ನು ದಂಡಾಧಿಕಾರಿಗಳಿಗೆ ಸಲ್ಲಿಸಬೇಕು. ಈ ಅರ್ಜಿಯನ್ನು ಹಾಲಿ ಕ್ರಿಮಿನಲ್ ಕಲಾಪಗಳ ದಾಖಲೆಯೊಂದಿಗೆ ಸೇರಿಸುವಂತೆ ದಂಡಾಧಿಕಾರಿಗಳನ್ನು ಕೋರಿಕೊಳ್ಳಬೇಕು. ಈ ಕಾಲಘಟ್ಟದಲ್ಲಿ ಸಂಬಂಧಿತ ದಂಡಾಧಿಕಾರಿಗಳು ವ್ಯಕ್ತಿಗೆ ಅನುಕೂಲವಾಗುವ ಯಾವುದೇ ಆದೇಶವನ್ನು ಹೊರಡಿಸದಿರಬಹುದು, ಆದರೆ ಹೀಗೆ ಮಾಡುವುದರಿಂದ ಮುಂದಿನ ಕ್ರಿಮಿನಲ್ ಕಾನೂನುಕ್ರಮದ ಸಂದರ್ಭದಲ್ಲಿ ಆ ವ್ಯಕ್ತಿಯ ಅಮಾಯಕತೆಯನ್ನು ಸಾಬೀತುಗೊಳಿಸುವಲ್ಲಿ ಹೆಚ್ಚು ನೆರವಾಗುತ್ತದೆ.

►ಒಬ್ಬ ವ್ಯಕ್ತಿ ಈಗಾಗಲೇ ಸಂಜ್ಞೇಯ ಅಪರಾಧವೆಸಗಿದ ಆರೋಪಿಯಾಗಿದ್ದರೆ, ಜಾಮೀನು ಮಂಜೂರಾಗದೆ, ಪೊಲೀಸ್ ಅಥವಾ ನ್ಯಾಯಾಂಗ ಕಸ್ಟಡಿಯನ್ನು ವಿಧಿಸಲಾಗಿದ್ದು, ಅಥವಾ ಇನ್ನೊಂದು ಅಪರಾಧದ ಆರೋಪದಲ್ಲಿ ಟ್ರಾನ್ಸಿಟ್ ವಾರಂಟ್ ನಡಿ ಬೇರೊಂದು ನ್ಯಾಯಾಲಯಕ್ಕೆ ರವಾನಿಸಲಾಗಿದೆ ಎಂದಿಟ್ಟುಕೊಳ್ಳಿ. ಆ ವ್ಯಕ್ತಿ ನಿಜಕ್ಕೂ ಅಮಾಯಕರಾಗಿದ್ದರೆ ಮತ್ತು ಸುಳ್ಳು ಕ್ರಿಮಿನಲ್ ಪ್ರಕರಣದಲ್ಲಿ ಆತನನ್ನು ಸಿಲುಕಿಸಲಾಗಿದ್ದರೆ, ವ್ಯಕ್ತಿಯ ವಿರುದ್ಧದ ಎಫ್‌ಐಆರ್ ಮತ್ತು ಕ್ರಿಮಿನಲ್ ಕಾನೂನುಕ್ರಮಗಳನ್ನು ರದ್ದುಗೊಳಿಸುವಂತೆ ಕೋರಿ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಬಹುದು.

►ಓರ್ವ ಅಮಾಯಕ ಎನ್ನುವುದು ಸಾಬೀತುಗೊಂಡರೆ ಮತ್ತು ತನಿಖಾ ಸಂಸ್ಥೆಗೆ ಆತನ ವಿರುದ್ಧ ಯಾವುದೇ ಸಾಕ್ಷಾಧಾರ ದೊರೆಯದಿದ್ದರೆ ಸಿಆರ್‌ಪಿಸಿಯಡಿ ವಿವಿಧ ವಿಚಾರಣಾ ನ್ಯಾಯಾಲಯಗಳಲ್ಲಿಯ ಪ್ರಕರಣಗಳಿಂದ ಖುಲಾಸೆಗೊಳಿಸಬಹುದು ಮತ್ತು ವ್ಯಕ್ತಿಯ ವಿರುದ್ಧ ಆರೋಪಿಸಲಾದ ಅಪರಾಧದಿಂದ ಮುಕ್ತಗೊಳಿಸುವಂತೆ ಕೋರಿ ಆತ ಮೇಲಿನ ನ್ಯಾಯಾಲಯಗಳಲ್ಲಿ ಕ್ರಿಮಿನಲ್ ರಿವಿಜನ್ ಅರ್ಜಿಯನ್ನೂ ಸಲ್ಲಿಸಬಹುದು. ಇಲ್ಲದಿದ್ದರೆ ಒಳ್ಳೆಯ ವಕೀಲರನ್ನು ನೇಮಿಸಿಕೊಂಡು ಆತನ ವಿರುದ್ಧದ ಆರೋಪದಿಂದ ಮುಕ್ತರಾಗಿ ಬಿಡುಗಡೆಗೊಂಡು ಗೌರವಾನ್ವಿತ ಬದುಕನ್ನು ನಡೆಸಬಹುದು.

►ಆದರೆ ಕಠಿಣ ಮತ್ತು ಕರಾಳ ಕಾನೂನುಗಳಡಿ ಬಂಧಿಲ್ಪಟ್ಟಾಗ ಕೆಲವು ಹಕ್ಕುಗಳಿಗೆ ರಕ್ಷಣೆ ದೊರೆಯುವುದಿಲ್ಲ. ಈ ಕಾನೂನುಗಳಡಿ ಜಾಮೀನು, ಕಸ್ಟಡಿ ಅವಧಿಗೆ ಸಂಬಂಧಿಸಿದಂತೆ ನಿಯಮಗಳು ಹೆಚ್ಚು ಕಠಿಣವಾಗಿವೆ.

►ಓರ್ವ ವ್ಯಕ್ತಿ ಸುಳ್ಳು ಆರೋಪಗಳಿಂದ ಮುಕ್ತನಾದ ಬಳಿಕ ಆತ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ಯ ನ್ಯಾಯಾಲಯದಲ್ಲಿ ಕ್ರಿಮಿನಲ್ ಕಾನೂನುಕ್ರಮವನ್ನು ಜರಗಿಸಬಹುದು. ದುರುದ್ದೇಶಪೂರ್ವಕವಾಗಿ ಕಾನೂನು ಕ್ರಮವನ್ನು ಜರಗಿಸಿದ್ದಕ್ಕಾಗಿ ಸೂಕ್ತ ಪರಿಹಾರವನ್ನು ಕೋರಬಹುದು ಅಥವಾ ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಪ್ರಕರಣವನ್ನೂ ದಾಖಲಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News