ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಪುಷ್ಪಲತಾ ಜಗನ್ನಾಥ್ ಆಯ್ಕೆ

Update: 2018-11-17 14:29 GMT

ಮೈಸೂರು,ನ.17: ಮೈಸೂರು ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಪುಷ್ಪಲತಾ ಜಗನ್ನಾಥ್ ಹಾಗೂ ಉಪಮೇಯರ್ ಆಗಿ ಶಫಿ ಅಹಮದ್ ಆಯ್ಕೆಯಾಗುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಕೆಯ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಶನಿವಾರ ಬೆಳಗ್ಗೆಯಿಂದಲೇ ಚುನಾವಣಾ ಪ್ರಕ್ರಿಯೆಗಳು ನಡೆದವು. ಮೊದಲಿಗೆ ಬಿಜೆಪಿಯಿಂದ ಸುನದಂದಾ ಪಾಲನೇತ್ರ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಎರಡನೆಯದಾಗಿ ಕಾಂಗ್ರೆಸ್ ಪಕ್ಷದಿಂದ ಪುಷ್ಪಲತಾ ಜಗನ್ನಾಥ್ ನಾಮಪತ್ರ ಸಲ್ಲಿಸಿದರು. ಇವರಿಬ್ಬರು ಬಿಟ್ಟರೆ ಮತ್ಯಾರು ನಾಮಪತ್ರ ಸಲ್ಲಿಕೆಗೆ ಮುಂದಾಗಲಿಲ್ಲ. ಇಬ್ಬರ ನಾಮಪತ್ರ ಪರಿಶೀಲಿಸಿದ ಚುನಾವಣಾಧಿಕಾರಿ ಯಶವಂತ್ ಅಂಗೀಕರಿಸಿದರು.

ಬಳಿಕ ನೂತನ ಮೈಸೂರು ಮಹಾನಗರ ಪಾಲಿಕೆಗೆ ಆಯ್ಕೆಯಾದ ಸದಸ್ಯರಿಗೆ ಪ್ರಮಾಣವಚನ ಭೋದಿಸಿ, ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವವರು ಹಿಂಪಡೆಯಲು ಕಾಲಾವಾಕಾಶ ಕಲ್ಪಿಸಲಾಯಿತು. ಯಾರೊಬ್ಬರು ನಾಮಪತ್ರ ವಾಪಸ್ ಪಡೆಯದ ಹಿನ್ನಲೆಯಲ್ಲಿ ಕೈ ಎತ್ತುವ ಮೂಲಕ ಚುನಾವಣೆ ನಡೆಸಲಾಯಿತು.

ಬಿಜೆಪಿಯ ಸುನಂದ ಪಾಲನೇತ್ರ ಅವರಿಗೆ 24, ಪುಷ್ಪಲತಾ ಜಗನ್ನಾಥ್ ಅವರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಿಂದ 48 ಮತಗಳು ಲಭಿಸಿದವು. ಅಂತಿಮವಾಗಿ ಪುಷ್ಪಲತಾ ಜಗನ್ನಾಥ್ ಅವರು ಮೈಸೂರು ಮಹಾನಗರ ಪಾಲಿಕೆಯ 21ನೇ ಮೇಯರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೊಷಿಸಿದರು.

ಉಪಮೇಯರ್ ಆಯ್ಕೆಗೂ ಇದೇ ಮಾನದಂಡ ಅನುಸರಿಸಲಾಯಿತು. ಬಿಜೆಪಿಯಿಂದ ಸತೀಶ್ ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್ ಪಕ್ಷದಿಂದ ಶಫೀ ಅಹಮದ್ ಉಮೇದುವಾರಿಕೆ ಸಲ್ಲಸಿದ್ದರು. ಬಿಜೆಪಿಯ ಸತೀಶ್ 24 ಮತಗಳನ್ನು ಗಳಿಸಿದರೆ, ಶಫೀ ಅಹಮದ್ 48 ಮತಗಳನ್ನು ಗಳಿಸುವ ಮೂಲಕ ಉಪಮೇಯರ್ ಆಗಿ ಆಯ್ಕೆಯಾದರು.

ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ಹಾಗೂ ರಾಷ್ಟ್ರೀಯ ಜಾ.ದಳ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ನಡುವಿನ ಮಾತುಕತೆ ಯಶಸ್ವಿಯಾಗಿ ಸಿದ್ದರಾಮಯ್ಯ ಅವರ ಮನವಿಯಂತೆ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಲಾಗಿದೆ. ಉಪಮೇಯರ್ ಸ್ಥಾನ ಜೆಡಿಎಸ್ ಪಕ್ಷದ ಪಾಲಾಗಿದೆ.

ಈ ಬಾರಿ ಮೇಯರ್ ಸ್ಥಾನ ಸಾಮನ್ಯ ಮಹಿಳೆ, ಉಪಮೇಯರ್ ಸ್ಥಾನ ಬಿಸಿಎಂಎಗೆ ಮೀಸಲಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಹಿನ್ನಲೆಯಲ್ಲಿ ಕ್ರಮವಾಗಿ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಪಡೆದು ಉಪಮೇಯರ್ ಸ್ಥಾನವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲಾಗಿದೆ.

ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 22, ಕಾಂಗ್ರೆಸ್ 19, ಜೆಡಿಎಸ್ 18, ಬಿಎಸ್‍ಪಿ 1, ಹಾಗೂ 5 ಪಕ್ಷೇತರ ಸದಸ್ಯರಿದ್ದು, ಪಾಲಿಕೆ ಚುಕ್ಕಾಣಿ ಹಿಡಿಯಲು 38 ಸದಸ್ಯಬಲದ ಅವಶ್ಯಕತೆ ಇತ್ತು. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಇಬ್ಬರು ಶಾಸಕರು, ಓರ್ವ ಬೆಂಬಲ ಪಡೆದು 24 ಸ್ಥಾನಗಳನ್ನು ಪಡೆಯಿತು. ಸಂಸತ್ ಸದಸ್ಯ ಪ್ರತಾಪ್ ಸಿಂಹ ತಡವಾಗಿ ಬಂದಿದ್ದರಿಂದ ಒಂದು ಸ್ಥಾನದಿಂದ ವಂಚಿತಗೊಂಡಿತು.

19 ಸ್ಥಾನಗಳಿಸಿರುವ ಕಾಂಗ್ರೆಸ್ ಮೂವರು ಪಕ್ಷೇತರರು, ಓರ್ವ ವಿಧಾನಪರಿಷತ್ ಸದಸ್ಯ, ಓರ್ವ ಶಾಸಕರ ನೆರವಿನೊಂದಿಗೆ 24 ಸದಸ್ಯ ಬಲವನ್ನು ಹೊಂದಿತು. 18 ಸ್ಥಾನ ಹೊಂದಿರುವ ಜೆಡಿಎಸ್ ಮಿತ್ರ ಪಕ್ಷ ಬಿಎಸ್‍ಪಿ ಓರ್ವ ಶಾಸಕ ಹಾಗೂ ಮೂವರು ವಿಧಾನ ಪರಿಷತ್ ಸದಸ್ಯರ ಬೆಂಬಲದೊಂದಿಗೆ  23 ಸ್ಥಾನಗಳನ್ನು ಪಡೆದಿತ್ತು.

ಇದೇ ವೇಲೆ ಮಹಾನಗರ ಪಾಲಿಕೆಯ ಎರಡು ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಯಿತು. ಮೇಯರ್ ಸ್ಥಾನವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿರುವ ಹಿನ್ನಲೆಯಲ್ಲಿ ಈ ಎರಡೂ ಸ್ಥಾಯಿ ಸಮಿತಿಗಳು ಜೆಡಿಎಸ್ ಪಕ್ಷದ ಪಾಲಾದವು. ಜೆಡಿಎಸ್‍ನ ಲಕ್ಷ್ಮಿ ಶಿವಣ್ಣ ನಗರ ಯೋಜನಾ ಸ್ಥಾಯಿ ಸಮಿತಿಗೆ, ಆರೋಗ್ಯ ಸ್ಥಾಯಿ ಸಮಿತಿಗೆ ರಮಣಿ ಅವಿರೋಧವಾಗಿ ಆಯ್ಕೆಯಾದರು. ಇನ್ನುಳಿದ ನಾಲ್ಕು ಸ್ಥಾಯಿ ಸಮಿತಿಗಳಿಗೆ ಒಂದು ವಾರದಲ್ಲಿ ಆಯ್ಕೆಮಾಡಲಾಗುವುದು ಎಂದು ಹೇಳಲಾಗಿದೆ.

ಮೇಯರ್ ಉಪಮೇಯರ್ ಗೆ ಅಭಿನಂದನೆ ಸಲ್ಲಿಸಿದ ಸಚಿವರು: ನೂತನವಾಗಿ ಆಯ್ಕೆಯಾದ ಮೇಯರ್ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಶಫೀ ಅಹಮದ್ ಅವರಿಗೆ ಉನ್ನತ ಶಿಕ್ಷಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಕೌನ್ಸಿಲ್ ಸಭಾಂಗಣದಲ್ಲಿ ಪುಷ್ಪಗುಚ್ಛ ನೀಡುವ ಮೂಲಕ ಅಭಿನಂದನೆ ಸಲ್ಲಿಸಿದರು.

ಇದೇ ವೇಳೆ ಶಾಸಕರಾದ ತನ್ವೀರ್ ಸೇಠ್, ಬಿಜೆಪಿಯ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಆರ್.ಧರ್ಮಸೇನಾ, ಕೆ.ಟಿ.ಶ್ರೀಕಂಠೇಗೌಡ, ಮರಿತಿಬ್ಬೇಗೌಡ ಸಹ ಅಭಿನಂದನೆ ಸಲ್ಲಿಸಿದರು.

ಪ್ರಾದೇಶಿಕ ಆಯುಕ್ತರಾದ ಯಶವಂತ್ ಅವರು ಯಾವುದೇ ಗೊಂದಲಗಳಿಲ್ಲದೆ ಸುಲಲಿತವಾಗಿ ಚುನಾವಣಾ ಪ್ರಕ್ರಿಯೆಯನ್ನು ಮಾಡಿ ಮುಗಿಸಿದರು. ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್, ಹೆಚ್ಚುವರಿ ಪ್ರಾದೇಶಿ ಆಯುಕೆ ರೂಪ, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸಹಕರಿಸಿದರು.

ಸಿದ್ದರಾಮಯ್ಯ ಆಶೀರ್ವಾದದಿಂದ ಮೇಯರ್ ಸ್ಥಾನ: ನೂತನ ಮೇಯರ್ ಪುಷ್ಪಲತಾ ಜಗನ್ನಾಥ್
ಮಾಜಿ ಮುಖ್ಯಮಂತ್ರಿ ನಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯ ಅವರ ಆಶೀರ್ವಾದದಿಂದ ನಾನು ಮೇಯರ್ ಸ್ಥಾವನ್ನು ಅಲಂಕರಿಸಲಾಗಿದ್ದು, ಈ ಎಲ್ಲಾ ಗೌರವಗಳು ಲಭಿಸಲು ಕಾರಣಕರ್ತರಾದ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ನೂತನ ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದರು.

ಸ್ವಚ್ಛತೆಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಪ್ರಯತ್ನ: ಉಪಮೇಯರ್ ಶಫೀ ಅಹಮದ್

ಸ್ವಚ್ಛತೆಯಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನ ಪಡೆದಿರುವ ಮೈಸೂರನ್ನು ಮತ್ತೆ ಅದೇ ಸ್ಥಾನಕ್ಕೆ ಕೊಂಡೊಯ್ಯುವ ಗುರಿ ಇಟ್ಟುಕೊಂಡು ಕೆಲಸ ಮಾಡುವುದಾಗಿ ನೂತನ ಉಪಮೇಯರ್ ಶಫೀ ಅಹಮದ್ ತಿಳಿಸಿದರು. ಎರಡನೇ ಅವಧಿಗೆ ನಾನು ಪಾಲಿಕೆಗೆ ಆಯ್ಕೆಯಾಗಿದ್ದು, ಬಿಸಿಎಂಎ ಆಗಿದ್ದರಿಂದ ನನಗೆ ಅವಕಾಶ ಲಭಿಸಿದೆ. ನಮ್ಮ ಪಕ್ಷದ ನಾಯಕರಾದ ಎಚ್.ಡಿ.ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಅವರ ಕೃಪೆಯಿಂದ ಈ ಸ್ಥಾನವನ್ನು ಅಲಂಕರಿಸಿದ್ದೇನೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News